

ನವದೆಹಲಿ: ಕೋವಿಡ್-19 ಲಾಕ್ಡೌನ್ ಪರಿಣಾಮವಾಗಿ ಸಂಕಷ್ಟ ಎದುರಿಸುತ್ತಿರುವ ವಲಯಗಳಲ್ಲಿ ಸ್ಟಾರ್ಟಪ್ ಕಂಪನಿಗಳೂ ಸೇರಿವೆ. ಶೇ. 62 ಸ್ಟಾರ್ಟಪ್ಗಳು ಶೇ. 40ಕ್ಕಿಂತ ಹೆಚ್ಚಿನ ಆದಾಯ ಖೋತಾ ಅನುಭವಿಸಿದ್ದು ಶೇ. 30 ಕಂಪನಿಗಳು ಶೇ. 80ರವರೆಗೆ ಆದಾಯ ನಷ್ಟಕ್ಕೊಳಗಾಗಿವೆ. ನಗದು ಕೊರತೆಯಿಂದ ಅವುಗಳು ಗಂಭೀರ ಬಿಕ್ಕಟ್ಟು ಎದುರಿಸುತ್ತಿವೆ. ಸಾಫ್ಟ್ವೇರ್ ಮತ್ತು ಸೇವಾ ಕಂಪನಿಗಳ ರಾಷ್ಟ್ರೀಯ ಸಂಸ್ಥೆ (ನ್ಯಾಸ್ಕಾಂ) ನಡೆಸಿರುವ ಆನ್ಲೈನ್ ಸಮೀಕ್ಷೆಯೊಂದು ಸ್ಟಾರ್ಟಪ್ಗಳ ಬವಣೆಯನ್ನು ಬಿಚ್ಚಿಟ್ಟಿದೆ. ಕರೊನಾ ಪರಿಣಾಮವಾಗಿ ಈ ವಲಯದ ಕಂಪನಿಗಳು ಅಸ್ತಿತ್ವಕ್ಕಾಗಿ ಹೆಣಗುವಂತಾಗಿದೆ ಎಂದು ನ್ಯಾಸ್ಕಾಂ ಹೇಳಿದೆ.
ಶೇ. 70 ಕಂಪನಿಗಳು ಮೂರು ತಿಂಗಳಿಗಿಂತ ಕಡಿಮೆ ಅವಧಿಗೆ ಸಾಕಾಗುವಷ್ಟು ನಗದನ್ನು ಮಾತ್ರ ಹೊಂದಿದ್ದು, ನಂತರ ಪರಿಸ್ಥಿತಿ ಬಿಗಡಾಯಿಸುವ ಸಂಭವವಿದೆಯೆಂಬ ಕಳವಳಕಾರಿ ವಿಚಾರವನ್ನು ಸಮೀಕ್ಷೆ ಹೊರಗೆಡವಿದೆ. ಹೊಸ ಕಂಪನಿಯಿಂದ ಹಿಡಿದು ಕ್ಷೇತ್ರದಲ್ಲಿ ಪಳಗಿರುವ ಸಂಸ್ಥೆವರೆಗೆ 250ಕ್ಕೂ ಹೆಚ್ಚು ಕಂಪನಿಗಳು ಸಮೀಕ್ಷೆಯಲ್ಲಿ ಭಾಗವಹಿಸಿದ್ದವು. ಶೇ. 30 ಕಂಪನಿಗಳು ತಮ್ಮ ವ್ಯವಹಾರಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿವೆ ಎಂದು ‘ಕೋವಿಡ್-19 ಕಾಲದಲ್ಲಿ ಭಾರತೀಯ ಸ್ಟಾರ್ಟಪ್ ಯಂತ್ರದ ಪುನರುಜ್ಜೀವನ’ ಎಂಬ ಶೀರ್ಷಿಕೆಯ ವರದಿಯಲ್ಲಿ ಹೇಳಲಾಗಿದೆ.
62% ಸ್ಟಾರ್ಟಪ್ಗಳಿಗೆ ಶೇಕಡಾ 40ಕ್ಕಿಂತ ಹೆಚ್ಚಿನ ಆದಾಯ ಖೋತಾ.
30% ಕಂಪನಿಗಳಿಗೆ ಶೇಕಡಾ
80 ರವರೆಗೆ ಆದಾಯ ನಷ್ಟ.
70% ಸ್ಟಾರ್ಟಪ್ಗಳು ನಿಯಮ ಸರಳೀಕರಣದ ನಿರೀಕ್ಷೆಯಲ್ಲಿ
69% ಬಿ2ಬಿ ಸ್ಟಾರ್ಟಪ್ಗಳಿಗೆ ಹಣ ಪಾವತಿ ವಿಳಂಬದಿಂದ ಆತಂಕ
66% ಸ್ಟಾರ್ಟಪ್ಗಳು ವೈರಸ್ ಪರಿಣಾಮದ ಸನ್ನಿವೇಶ 12 ತಿಂಗಳ ವರೆಗೆ ಮುಂದುವರಿಯಬಹುದೆಂದು ಅಂದಾಜು ಮಾಡಿವೆ.
65% ಸ್ಟಾರ್ಟಪ್ಗಳು ಮಾರ್ಕೆಟಿಂಗ್ ವೆಚ್ಚವನ್ನು ಕಡಿತ ಮಾಡುತ್ತಿವೆ.
53% ಸ್ಟಾರ್ಟಪ್ಗಳು ವೇತನ ಕಡಿತ ಮಾಡುತ್ತಿವೆ.
13% ಸ್ಟಾರ್ಟಪ್ಗಳು ನೌಕರರ ಸಂಖ್ಯೆ ಕಡಿತಕ್ಕೆ ಮುಂದಾಗಿವೆ.
ಮುಚ್ಚುವ ಆತಂಕ: ಕರೊನಾ ಮಹಾಮಾರಿ ಹಾಗೂ ತತ್ಪರಿಣಾಮ ಹೇರಿದ ಲಾಕ್ಡೌನ್ನಿಂದ ತೊಂದರೆಗೊಳಗಾದ ಆರಂಭಿಕ ಹಾಗೂ ಮಧ್ಯಮ ಹಂತದಲ್ಲಿರುವ ಸ್ಟಾರ್ಟ್ಪ್ಗಳ ಸ್ಥಿತಿಯಂತೂ ಅಯೋಮಯವಾಗಿದೆ ಎಂಬುದು ನ್ಯಾಸ್ಕಾಂ ಹೇಳಿಕೆ. ಪರಿಸ್ಥಿತಿ ಬೇಗನೇ ಸುಧಾರಿಸದಿದ್ದರೆ ಬಿ2ಸಿ ಸ್ಟಾರ್ಟ್ಅಪ್ಗಳು ಮುಚ್ಚುವ ಅಪಾಯ ಎದುರಿಸುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದೆ.
ಹಣಕಾಸಿನ ನೆರವು ಅಗತ್ಯ: ಬಿ2ಸಿ ಸ್ಟಾರ್ಟಪ್ಗಳು ತೀವ್ರ ರೀತಿಯಲ್ಲಿ ಕಾರ್ವಿುಕ ಸಮಸ್ಯೆ ಎದುರಿಸುತ್ತಿವೆ. ಬಹಳಷ್ಟು ಸ್ಟಾರ್ಟಪ್ಗಳು ತಮ್ಮ ವ್ಯವಹಾರಗಳಲ್ಲಿ ಬದಲಾವಣೆ ಮಾಡಿ ಪ್ರಸಕ್ತ ಸನ್ನಿವೇಶಕ್ಕೆ ಹೊಂದಿಕೊಳ್ಳಲು ಯೋಚಿಸುತ್ತಿವೆ. ಇಂಥ ಸನ್ನಿವೇಶದಲ್ಲಿ, ಅವುಗಳ ಆರ್ಥಿಕ ಬಿಕ್ಕಟ್ಟನ್ನು ಬಗೆಹರಿಸಲು ಅವುಗಳಿಗೆ ಹಣಕಾಸಿನ ನೆರವನ್ನು ಒದಗಿಸುವುದು ಅಗತ್ಯ ಎಂದು ನ್ಯಾಸ್ಕಾಂ ಪ್ರತಿಪಾದಿಸಿದೆ.
ಯೋಜನೆಗಳು ಮುಂದಕ್ಕೆ: ಇಡೀ ಸ್ಟಾರ್ಟ್ಅಪ್ ವಾತಾವರಣವೇ ಹಾಳಾಗಿದ್ದು, ಕರೊನಾದಿಂದಾಗಿ ಅವುಗಳ ಚಟುವಟಿಕೆಗಳ ಸರಪಣಿಯೇ ಅಸ್ತವ್ಯಸ್ತಗೊಂಡಿದೆ ಎಂದು ನ್ಯಾಸ್ಕಾಂ ಹೇಳಿದೆ. ತಂತ್ರಜ್ಞಾನ ಉನ್ನತೀಕರಣ, ಪ್ರಾಡಕ್ಟ್ ಅಭಿವೃದ್ಧಿ, ವ್ಯವಹಾರಗಳು, ನಿಧಿಯ ವ್ಯವಸ್ಥೆ ಹಾಗೂ ವ್ಯಾಪಾರ ಅಭಿವೃದ್ಧಿ ಯೋಜನೆಗಳು ಬಹುತೇಕ ಎರಡು ತಿಂಗಳು ವಿಳಂಬಗೊಂಡಿವೆ. ಅನಿಶ್ಚಯತೆಯಿಂದಾಗಿ ಹಣ ಪಾವತಿ ಆಗದಿರುವುದು ಮುಖ್ಯ ಸಮಸ್ಯೆಯಾಗಿದೆ. ರೀಟೇಲ್ ಮತ್ತು ಫಿಂಚ್ ಸ್ಟಾರ್ಟಪ್ಗಳು ಹೆಚ್ಚು ಬಾಧಿತವಾಗಿವೆ. ಈಗಿನ ಸಮಸ್ಯೆ ಇನ್ನೂ ಒಂದು ವರ್ಷ ಮುಂದುವರಿಯಬಹುದೆಂಬುದು ಬಹಳಷ್ಟು ಸಂಸ್ಥೆಗಳ ಅಂದಾಜಾಗಿದೆ. ಹೀಗಾಗಿ ನಿಯಮಗಳ ಸರಳೀಕರಣವಾಗಬೇಕು ಹಾಗೂ ಸರ್ಕಾರಿ ಖರೀದಿ ಅವಕಾಶ ಹೆಚ್ಚಬೇಕು ಎಂಬುದು ಅವುಗಳ ಅಭಿಪ್ರಾಯವಾಗಿದೆ.