ಆರ್ಗಾನಿಕ್ ಹತ್ತಿ ಬೆಳೆಗಾರರಿಗೆ ಶುಭ ಸುದ್ದಿ- ಎಸ್​ಬಿಐ ಪರಿಚಯಿಸುತ್ತಿದೆ 'ಸಫಲ್'​ ಲೋನ್​

sbi
Published on

ನವದೆಹಲಿ: ದೇಶದಲ್ಲಿರುವ ಆರ್ಗಾನಿಕ್ ಹತ್ತಿ ಬೆಳೆಗಾರರಿಗೆ ಒಂದು ಶುಭ ಸುದ್ದಿ. ದೇಶದ ಬ್ಯಾಂಕಿಂಗ್ ಸೆಕ್ಟರ್​ನ ಮುಂಚೂಣಿ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್​ಬಿಐ) ಆರ್ಗಾನಿಕ್ ಹತ್ತಿ ಬೆಳೆಗಾರರಿಗೆ ನೆರವಾಗುವ ದೃಷ್ಟಿಯಿಂದ 'ಸಫಲ್' ಎಂಬ ಸಾಲ ಯೋಜನೆಯನ್ನು ಪರಿಚಯಿಸಲು ಚಿಂತನೆ ನಡೆಸಿದೆ. ಇದುವರೆಗೂ ಸಾಲ ಪಡೆಯದೇ ಇರುವ ಆರ್ಗಾನಿಕ್ ಹತ್ತಿ ಬೆಳೆಗಾರರೇ ಇದರ ಫಲಾನುಭವಿಗಳು.

ಎಸ್​ಬಿಐ ಮ್ಯಾನೇಜಿಂಗ್ ಡೈರೆಕ್ಟರ್​ ಸಿ.ಎಸ್.ಸೆಟ್ಟಿ ಅವರು ಫಿಕ್ಕಿ ಆಯೋಜಿಸಿದ್ದ ಫಿನ್​ಟೆಕ್​ ಕಾನ್ಫರೆನ್ಸ್​ನಲ್ಲಿ ಮಾತನಾಡುತ್ತ, ವಹಿವಾಟು ಕುದುರಿಸುವುದಕ್ಕಾಗಿ ಬ್ಯಾಂಕ್ ಈಗ ದೊಡ್ಡ ಪ್ರಮಾಣದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಮತ್ತು ಮಷಿನ್ ಲರ್ನಿಂಗ್​ (ಎಂಎಲ್​) ಅನ್ನು ಬಳಸಲಾರಂಭಿಸಿದೆ. ನಾವು ತಥಾ ಕಥಿತ ರಿಟೇಲ್ ಸೆಗ್ಮೆಂಟ್​ನಲ್ಲಿ ಸಾಮರ್ಥ್ಯ ಮೀರಿ ಮುನ್ನುಗ್ಗುವುದಕ್ಕೆ ಬಯಸುತ್ತೇವೆ. ಇನ್ನಷ್ಟು ರೈತರನ್ನೂ ತಲುಪಲಿದ್ದೇವೆ. ನಾವು ಈಗ ಕ್ರಾಪ್ ಲೋನ್ ಮಾತ್ರವಲ್ಲ, ಸದ್ಯದಲ್ಲೇ ಸೇಫ್ ಆ್ಯಂಡ್​ ಫಾಸ್ಟ್​ ಅಗ್ರಿಕಲ್ಚರ್​ ಲೋನ್​ (ಸಫಲ್​) ಅನ್ನು ಶೀಘ್ರವೇ ಪರಿಚಯಿಸಲಿದ್ದೇವೆ ಎಂದು ಹೇಳಿದರು.

ಆರ್ಗಾನಿಕ್ ಹತ್ತಿ ಬೆಳೆಗಾರರನ್ನೆಲ್ಲ ಸಂಘಟಿಸಿರುವಂತಹ ಒಂದು ಕಂಪನಿ ಇದೆ. ಅದು ಒಂದು ಬ್ಲಾಕ್​ಚೇನ್​ ಡೇಟಾ ಬೇಸ್ ಅನ್ನೂ ರಚಿಸಿಕೊಂಡಿದೆ. ಜಗತ್ತಿನಾದ್ಯಂತ ಇರುವ ಯಾವುದೇ ಖರೀದಿದಾರರೂ ರೈತ ನಿಜವಾಗಿಯೂ ಆರ್ಗಾನಿಕ್ ಹತ್ತಿ ಬೆಳೆಯುತ್ತಿದ್ದಾನೋ ಇಲ್ಲವೋ ಎಂಬುದನ್ನು ಖಾತರಿಪಡಿಸುವಲ್ಲಿ ಈ ಪ್ಲಾಟ್​ಫಾರಂ ನೆರವಾಗುತ್ತದೆ ಎಂದು ಸೆಟ್ಟಿ ಹೇಳಿದರು.

ಕೃತಕ ಬುದ್ಧಿಮತ್ತೆ (ಎಐ) ಮತ್ತು ಮಷಿನ್ ಲರ್ನಿಂಗ್​ (ಎಂಎಲ್​) ಅನ್ನು ಬಳಸುವ ಮೂಲಕ ಬ್ಯಾಂಕ್ ಸಾಧಿಸಿದ್ದೇನು ಎಂಬುದನ್ನು ವಿವರಿಸಿದ ಅವರು, ಇದರ ಮೂಲಕ ಲಾಕ್​ಡೌನ್ ಅವಧಿಯಲ್ಲಿ ಬ್ಯಾಂಕ್​ 1.7 ದಶಲಕ್ಷ ಪ್ರೀ - ಅಪ್ರೂವ್ಡ್ ಲೋನ್ ಬಿಡುಗಡೆ ಮಾಡಿದ್ದು, 21, 000 ಕೋಟಿ ವಹಿವಾಟು ನಡೆಸಿದೆ ಎಂದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net