ಸತತ 12ನೇ ದಿನವೂ ತೈಲ ತುಟ್ಟಿ

Petrol
Published on

ನವದೆಹಲಿ: ಸತತ 12ನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಏರಿಕೆಯಾಗಿದೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪೆಟ್ರೋಲ್ ದರ 53 ಪೈಸೆ ಹಾಗೂ ಡೀಸೆಲ್ ದರ 64 ಪೈಸೆ ತುಟ್ಟಿಯಾಗಿದೆ. ಹೀಗಾಗಿ ದೆಹಲಿಯಲ್ಲಿ ಪೆಟ್ರೋಲ್ ಲೀಟರ್ ಒಂದರ 77.81 ರೂ. ಹಾಗೂ ಡೀಸೆಲ್ ಬೆಲೆ ಲೀಟರ್​ಗೆ 76.43 ರೂಪಾಯಿಗೆ ಏರಿದೆ ಎಂದು ಭಾರತೀಯ ತೈಲ ನಿಗಮ (ಐಓಸಿ) ತಿಳಿಸಿದೆ.

ಗುರುವಾರದ ಏರಿಕೆಯೊಂದಿಗೆ ದೆಹಲಿಯಲ್ಲಿ ಕಳೆದ 12 ದಿನಗಳಲ್ಲಿ ತಲಾ ಲೀಟರ್ ಪೆಟ್ರೋಲ್ ಬೆಲೆಯಲ್ಲಿ ಒಟ್ಟಾರೆ 6.55 ರೂಪಾಯಿ ಹಾಗೂ ಡೀಸೆಲ್ ಬೆಲೆಯಲ್ಲಿ 7.04 ರೂಪಾಯಿ ಹೆಚ್ಚಳವಾಗಿದೆ. ದೇಶದಾದ್ಯಂತ ವಿವಿಧ ರಾಜ್ಯಗಳಲ್ಲಿ ಸ್ಥಳೀಯ ಮಾರಾಟ ತೆರಿಗೆ ಮತ್ತು ಮೌಲ್ಯ ವರ್ಧಿತ ತೆರಿಗೆ (ವ್ಯಾಟ್) ಆಧರಿಸಿ ಉಭಯ ಇಂಧನಗಳ ಬೆಲೆಯಲ್ಲಿ ವ್ಯತ್ಯಾಸವಾಗುತ್ತದೆ.

ಗುರುವಾರ ಮುಂಬೈಯಲ್ಲಿ ಪೆಟ್ರೋಲ್ ಬೆಲೆ 84.66 ರೂ. ಹಾಗೂ ಡೀಸೆಲ್ ಬೆಲೆ 74.93 ರೂ. ಆಗಿತ್ತು. ಕೋಲ್ಕತಾದಲ್ಲಿ ಅದು ಅನುಕ್ರಮವಾಗಿ 79.59 ರೂ. ಹಾಗೂ 71.96 ರೂಪಾಯಿಗೆ ಮಾರಾಟವಾಯಿತು. ಚೆನ್ನೈಯಲ್ಲಿ ಪೆಟ್ರೋಲ್ ಮಾರಾಟ ಬೆಲೆ 81.32 ರೂ. ಹಾಗೂ ಡೀಸೆಲ್ ಬೆಲೆ 74.23 ರೂ. ಆಗಿತ್ತು ಎಂದು ಐಓಸಿ ಮಾಹಿತಿ ತಿಳಿಸಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಾಗಿದ್ದು ಅದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಬೇಕೆಂಬುದು ಕಾಂಗ್ರೆಸ್, ಸಿಪಿಎಂ ಮುಂತಾದ ಪ್ರತಿಪಕ್ಷಗಳ ಆಗ್ರಹವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net