

ಬೆಂಗಳೂರು: ಹೂಡಿಕೆದಾರರನ್ನು ಆಕರ್ಷಿಸಲು ಸರ್ಕಾರ ನೂತನ ಕೈಗಾರಿಕಾ ನೀತಿ ಜಾರಿಗೆ ತಂದ ಬೆನ್ನಲ್ಲೇ, ಪ್ರವಾಸೋದ್ಯಮಕ್ಕೆ ಹೊಸ ಮೆರುಗು ನೀಡಲು ಐದು ವರ್ಷಗಳ ದೂರದೃಷ್ಟಿಯಿಂದ ನೂತನ ಪ್ರವಾಸೋದ್ಯಮ ನೀತಿ ಜಾರಿಗೆ ತರಲು ಸಜ್ಜಾಗಿದೆ. ಪ್ರವಾಸೋದ್ಯಮದಲ್ಲಿ 3ನೇ ಸ್ಥಾನದಲ್ಲಿರುವ ಕರ್ನಾಟಕವನ್ನು ಮೊದಲ ಸ್ಥಾನಕ್ಕೆ ತರುವ ಹೆಗ್ಗುರಿಯೊಂದಿಗೆ ನೂತನ ನೀತಿ ಸಿದ್ಧಪಡಿಸಲಾಗಿದೆ.
ಸುರಕ್ಷತೆ ಹಾಗೂ ವಿಶ್ವಾಸಾರ್ಹತೆ: ಸ್ಥಳೀಯರಿಗೆ ಆದ್ಯತೆ, ಸುರಕ್ಷತೆ, ವಿಶ್ವಾಸಾರ್ಹತೆ, ನೈರ್ಮಲ್ಯ, ಮೂಲಸೌಕರ್ಯಗಳ ಅಭಿವೃದ್ಧಿಯೊಂದಿಗೆ ದೇಶದಲ್ಲೇ ಕರ್ನಾಟಕವನ್ನು ಪ್ರವಾಸೋದ್ಯಮದಲ್ಲಿ ಮೊದಲ ಸ್ಥಾನಕ್ಕೆ ಕೊಂಡೊಯ್ಯುವ ದೂರದೃಷ್ಟಿಯುಳ್ಳ 2020-25ನೇ ಸಾಲಿನ ಪ್ರವಾಸೋದ್ಯಮ ನೀತಿ ಜಾರಿಗೆ ಬರಲಿದೆ. ದೇಶ- ವಿದೇಶಗಳಿಂದ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಈ ನೀತಿ ಮಹತ್ವದ್ದಾಗಿದೆ ಎಂದು ಹೇಳಲಾಗುತ್ತಿದೆ. ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಅಧ್ಯಕ್ಷತೆ ಯಲ್ಲಿ ಶುಕ್ರವಾರ ನಡೆದ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಬಹುನಿರೀಕ್ಷಿತ 2020-25ನೇ ಸಾಲಿನ ಪ್ರವಾಸೋದ್ಯಮ ಇಲಾಖೆಯ ಕರಡು ನೀತಿಯನ್ನು ಅಂಗೀಕರಿಸಲಾಗಿದೆ. ಸಿಎಂ ಯಡಿಯೂರಪ್ಪ ಸೆಪ್ಟೆಂಬರ್ನಲ್ಲಿ ನೂತನ ಕರಡು ನೀತಿ ಬಿಡುಗಡೆ ಮಾಡಲಿದ್ದಾರೆ ಎನ್ನಲಾಗಿದೆ.
ಪರಂಪರೆ, ವನ್ಯಜೀವಿ, ಆಧ್ಯಾತ್ಮಿಕತೆ, ಸಂಸ್ಕೃತಿ, ಸಾಹಸ ಕಾರ್ಯ, ಕರಾವಳಿ, ಪ್ರಕೃತಿ, ಆರೋಗ್ಯ, ಕೃಷಿ, ಪ್ರವಾಸಿ ತಾಣಗಳ ಅಭಿವೃದ್ಧಿ, ಬಂಡವಾಳ ಹೂಡಿಕೆಗೆ ಆದ್ಯತೆ ಸೇರಿ ಹತ್ತು ಹಲವು ಅಂಶಗಳನ್ನು ನೂತನ ಪ್ರವಾಸೋದ್ಯಮ ಕರಡು ನೀತಿಯನ್ನೊಳಗೊಂಡಿದೆ. ಒಂದು ರಾಜ್ಯ ಹಲವು ಜಗತ್ತು: ‘ಒಂದು ರಾಜ್ಯ ಹಲವು ಜಗತ್ತು’ ಎಂಬ ಪರಿಕಲ್ಪನೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರ ಒಳಗೊಂಡಿರುವ ವಿಪುಲ ಅವಕಾಶವನ್ನು ಪ್ರಚುರಪಡಿಸುವ ಉದ್ದೇಶ ಒಳಗೊಂಡಿದೆ. ದೇಶಿಯ ಮತ್ತು ಅಂತಾರಾಷ್ಟ್ರೀಯ ಪ್ರವಾಸಿಗರು ರಾಜ್ಯಕ್ಕೆ ಸೆಳೆಯುವುದು, ಉದ್ಯೋಗ ಸೃಷ್ಟಿ, ಆರ್ಥಿಕ ಅಭಿವೃದ್ಧಿ, ಪ್ರವಾಸೋದ್ಯಮ ತಾಣಗಳಲ್ಲಿ ಸುರಕ್ಷತೆ, ನೈರ್ಮಲ್ಯೀಕರಣಕ್ಕೆ ಹೆಚ್ಚು ಆದ್ಯತೆ ನೀಡಲಾಗುತ್ತದೆ. ಪ್ರವಾಸಿ ತಾಣಗಳಿಗೆ ಆಗಮಿಸುವ ಪ್ರವಾಸಿಗರಲ್ಲಿ ಕರ್ನಾಟಕದ ಬಗ್ಗೆ ಹೆಚ್ಚು ವಿಶ್ವಾಸ ಮೂಡಿಸುವುದು ಹಾಗೂ ಅವರ ರಕ್ಷಣೆಗೆ ಆದ್ಯತೆ ಕೊಡುವುದು, ಮಾರುಕಟ್ಟೆ ಸಂಪರ್ಕಗಳ ಮೂಲಕ ದೇಶಿಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ಉತ್ತೇಜಿಸುವ ಅಂಶಗಳೂ ನೂತನ ನೀತಿಯಲ್ಲಿ ಸೇರಿವೆ.
ಸರ್ವಋತು ಪ್ರವಾಸಿ ತಾಣ ಕರ್ನಾಟಕವನ್ನು ಸರ್ವಋತು ಪ್ರವಾಸಿ ತಾಣವನ್ನಾಗಿ ಮಾಡುವ ನಿಟ್ಟಿನಲ್ಲಿ ಮೂಲಸೌಕರ್ಯ ಮತ್ತು ಮೂಲಭೂತ ಅವಶ್ಯಕತೆಗಳನ್ನು ಆದ್ಯತೆ ಮೇರೆಗೆ ಒದಗಿಸುವುದು, ಪ್ರವಾಸಿಗರ ಆಕರ್ಷಣೆಗಾಗಿ ವಿಶೇಷ ಪ್ಯಾಕೇಜ್ ಘೊಷಣೆ ಮಾಡುವ ಪ್ರಸ್ತಾವನೆ ಇದೆ. ಪ್ರವಾಸೋದ್ಯಮ ವಲಯದಲ್ಲಿ ಉದ್ಯಮಶೀಲತೆ, ನಾವಿನ್ಯತೆ, ಸ್ಥಳೀಯರಿಗೆ ಉದ್ಯೋಗ, ಸಮುದಾಯಗಳ ಪಾಲ್ಗೊಳ್ಳುವಿಕೆ, ಮಾನವ ಸಂಪನ್ಮೂಲ ಸದ್ಬಳಕೆ ಮಾಡಿಕೊಳ್ಳುವ ಗುರಿ ಹೊಂದಲಾಗಿದೆ. ಕರೊನಾ ಪರಿಣಾಮ ಪ್ರವಾಸೋದ್ಯಮ ಕ್ಷೇತ್ರಕ್ಕೆ ಆರ್ಥಿಕ ಹಿನ್ನಡೆ ಉಂಟಾಗಿದ್ದು, ಸೋಂಕು ಹರಡದಂತೆ ಸರ್ಕಾರ ತೆಗೆದುಕೊಂಡಿರುವ ತುರ್ತು ಕ್ರಮಗಳು, ಆಧುನಿಕ ತಂತ್ರಜ್ಞಾನ ಅಳವಡಿಕೆಯನ್ನು ನೂತನ ನೀತಿಯಲ್ಲಿ ಸೇರ್ಪಡೆ ಮಾಡಲಾಗಿದೆ.
ಮೊದಲ ಸ್ಥಾನಕ್ಕೇರುವ ಗುರಿ 2006ರಲ್ಲಿ ಕರ್ನಾಟಕಕ್ಕೆ 36.7 ದಶಲಕ್ಷ ದೇಶೀಯ ಪ್ರವಾಸಿಗರು ಆಗಮಿಸಿದ್ದರೆ, 2018ರಲ್ಲಿ 215.03 ದಶಲಕ್ಷ ಏರಿಕೆಯಾಗಿದೆ. ಪ್ರವಾಸೋದ್ಯಮದಲ್ಲಿ ದೇಶದಲ್ಲೇ 3ನೇ ಸ್ಥಾನದಲ್ಲಿರುವ ಕರ್ನಾಟಕವನ್ನು ಮೊದಲನೇ ಸ್ಥಾನಕ್ಕೆ ತರುವ ಗುರಿ ಇಟ್ಟುಕೊಳ್ಳಲಾಗಿದೆ.
ಹಲವು ನಿರೀಕ್ಷೆ, ವಿಪುಲ ಅವಕಾಶ ಪ್ರವಾಸಿ ತಾಣಗಳಲ್ಲಿರುವ ಆಹ್ಲಾದಕರವಾದ ಹವಾಮಾನ, ಕಾಸ್ಮೊಪಾಲಿಟಿನ್ ಸಂಸ್ಕೃತಿ, ಅತ್ಯುನ್ನತ್ತ ಆಡಳಿತ ಪ್ರಕ್ರಿಯೆ, ಹೂಡಿಕೆಗಿರುವ ವಿಪುಲ ಅವಕಾಶ, ಉದ್ಯೋಗ ಸೃಷ್ಟಿ ಸೇರಿ ಹತ್ತು ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುವ ಉದ್ದೇಶಗಳನ್ನು ಇಟ್ಟುಕೊಳ್ಳಲಾಗಿದೆ.