ಆಗಸ್ಟ್​ 31ರ ನಂತರ ಲೋನ್​ ಮೊರಟೋರಿಯಂ ಅಗತ್ಯವಿಲ್ಲ ಎನ್ನುತ್ತಿದ್ದಾರೆ ಬ್ಯಾಂಕರ್​​ಗಳು

LOAN NEWS
Published on

ಮುಂಬೈ: ಕೋವಿಡ್ 19 ಲಾಕ್​ಡೌನ್ ಕಾರಣಕ್ಕೆ ಸಾಲಗಾರರಿಗೆ ಒದಗಿಸಿದ್ದ ಲೋನ್ ಮೊರಟೋರಿಯಂ ಅವಧಿಯನ್ನು ಆಗಸ್ಟ್​ 31ಕ್ಕೆ ಕೊನೆಗೊಳಿಸಬಹುದು. ಅದರಿಂದಾಚೆಗೆ ಲೋನ್ ಮೊರಟೋರಿಯಂನ ಅವಶ್ಯಕತೆ ಕಾಣಿಸುತ್ತಿಲ್ಲ ಎಂದು ದೇಶದ ಅತಿದೊಡ್ಡ ಬ್ಯಾಂಕ್​ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್​ಬಿಐ) ಚೇರ್​ಮನ್​ ರಜನೀಶ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಾಲ ಮರುಪಾವತಿ ಮಾಡುವುದಕ್ಕೆ ಆರು ತಿಂಗಳು ವಿನಾಯಿತಿ ನೀಡಿರುವ ಕ್ರಮ ಸಾಕಷ್ಟಾಯಿತು ಎಂಬ ವಿಶ್ವಾಸ ಬ್ಯಾಂಕರ್​ಗಳದ್ದು. ಹಾಗಾಗಿ ಆಗಸ್ಟ್​ 31ರ ನಂತರವೂ ಲೋನ್ ಮೊರಟೋರಿಯಂ ಮುಂದುವರಿಸುವುದು ಬೇಕಾಗಿಲ್ಲ ಎಂಬ ಅಭಿಪ್ರಾಯ ನಮ್ಮಲ್ಲಿದೆ ಎಂದು ರಜನೀಶ್ ಕುಮಾರ್​ ಹೇಳಿದ್ದಾರೆ.

ಏತನ್ಮಧ್ಯೆ, ಮೊರಟೋರಿಯಂ ಅವಧಿ ವಿಸ್ತರಿಸಬೇಡಿ. ಸಾಲ ಮರುಪಾವತಿಗೆ ಸಾಮರ್ಥ್ಯ ಇದ್ದವರೂ ಈ ಅವಧಿಯ ದುರುಪಯೋಗ ಮಾಡಿಕೊಳ್ಳುತ್ತಿರುವುದು ಕಂಡುಬಂದಿದೆ. ಅಲ್ಲಿ ಇಲ್ಲಿ ಮತ್ತೆ ಮೊರಟೋರಿಯಂ ಅವಧಿ ವಿಸ್ತರಣೆಯ ಮಾತು ಕೇಳಿಬರುತ್ತಿದೆ. ಇದರಿಂದ ವ್ಯವಸ್ಥೆ ಹಾಳಾಗುತ್ತದೆ. ಆದ್ದರಿಂದ ಮೊರಟೋರಿಯಂ ಅವಧಿ ವಿಸ್ತರಣೆ ಬೇಡ ಎಂದು ಎಚ್​ಡಿಎಫ್​ಸಿ ಚೇರ್​ಮನ್​ ದೀಪಕ್​ ಪಾರೇಖ್​ ಅವರು ಕೂಡ ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ಗವರ್ನರ್​ ಶಕ್ತಿಕಾಂತ ದಾಸ್ ಅವರನ್ನು ಕೇಳಿಕೊಂಡಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net