ಮನೆಯಲ್ಲಿ ಚಿನ್ನ ಇದೆಯಾ? - ಕೇಂದ್ರ ಸರ್ಕಾರ ಬೇಕು ಅಂದ್ರೆ ಕೊಡ್ತೀರಾ?!

gold
Published on

ನವದೆಹಲಿ: ಲಾಕ್​ಡೌನ್ ಪರಿಣಾಮ ಜಗತ್ತಿನ ಅರ್ಥವ್ಯವಸ್ಥೆಯೇ ಕುಸಿದು ಹೋಗಿದೆ. ಭಾರತದಲ್ಲೂ ಅರ್ಥವ್ಯವಸ್ಥೆಗೆ ಪುನಶ್ಚೇತನ ಒದಗಿಸುವುದಕ್ಕೆ ಕೇಂದ್ರ ಸರ್ಕಾರ ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು 20 ಲಕ್ಷ ಕೋಟಿ ರೂಪಾಯಿಗಳ ಸ್ವಾಭಿಮಾನಿ ಭಾರತ ಅಭಿಯಾನ ಪ್ಯಾಕೇಜನ್ನೂ ಘೋಷಿಸಿದ್ದಾರೆ. ಅದನ್ನು ಬಳಸುವ ಬಗೆಯನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕಳೆದೆರಡು ದಿನಗಳಿಂದ ವಿವರಿಸುತ್ತ ಬಂದಿದ್ದಾರೆ.

ಈ ನಡುವೆ ಸರ್ಕಾರ ತೆಗೆದುಕೊಳ್ಳುತ್ತಿರುವ ವಿವಿಧ ಕ್ರಮಗಳ ಕುರಿತ ಸೋರಿಕೆಯಾಗಿರುವ ಕೆಲವು ಮಾಹಿತಿಗಳು ಸುದ್ದಿ ರೂಪದಲ್ಲಿ ಅಲ್ಲಲ್ಲಿ ಪ್ರಕಟ ಆಗಿವೆ ಮತ್ತು ಆಗುತ್ತಿವೆ. ಬಿಸಿನೆಸ್​ ಸ್ಟ್ಯಾಂಡರ್ಡ್ ಪತ್ರಿಕೆ ಮೂಲಗಳನ್ನು ಉಲ್ಲೇಖಿಸಿ ಮಾಡಿರುವ ಸುದ್ದಿ ಪ್ರಕಾರ, ಮನೆ ಮನೆಗಳಲ್ಲಿ ದಾಸ್ತಾನು ಇರುವ ಚಿನ್ನವನ್ನು ಮತ್ತು ವಿದೇಶಿ ವಿನಿಮಯ ಮೀಸಲನ್ನು ಮೂಲಾಧಾರವಾಗಿ ಇಟ್ಟುಕೊಂಡು ಹೆಚ್ಚಿನ ಕರೆನ್ಸಿ ಮುದ್ರಿಸಲು ಸರ್ಕಾರ ಚಿಂತನೆ ನಡೆಸಿದೆ. ಪ್ರಸ್ತುತ ಒತ್ತಡಕ್ಕೆ ಈಡಾಗಿರುವ ಆರ್ಥಿಕ ಪರಿಸ್ಥಿತಿಯನ್ನು ಸರಿದೂಗಿಸಲು ಈ ರೀತಿಯ ಕ್ರಮಗಳ ಹೊರತು ಅನ್ಯ ಮಾರ್ಗವಿಲ್ಲ ಎನ್ನುತ್ತಿದೆ ಪರಿಣತರ ಚಾವಡಿ.

ಹೊಸದಾಗಿ ಕರೆನ್ಸಿ ಮುದ್ರಿಸುವುದರಿಂದಾಗಿ ಪ್ರಸ್ತುತ ವಿತ್ತೀಯ ಪರಿಸ್ಥಿತಿ ಮೇಲೆ ಯಾವುದೇ ರೀತಿಯ ಒತ್ತಡವನ್ನಾಗಲೀ ಹೊರೆಯನ್ನಾಗಲಿ ಈ ಯೋಜಿತ ನಡೆ ಉಂಟುಮಾಡದು. ಮೂಲಾಧಾರಗಳು ಇರುವ ಕಾರಣ ದೇಶದ ಸಾವರಿನ್ ರೇಟಿಂಗ್​ನಲ್ಲೂ ಯಾವುದೇ ವ್ಯತ್ಯಾಸವಾಗದು. ಇದಕ್ಕಾಗಿ ಸರ್ಕಾರ ಮನೆ ಮನೆಗಳಿಂದ ಚಿನ್ನವನ್ನು ಯಾವುದೇ ಮೂಲ ವಿಚಾರಿಸದೇ ಖರೀದಿಸುವ ಸಾಧ್ಯತೆ ಇದೆ. ಎಲ್ಲ ವಹಿವಾಟುಗಳು ನಿಯಮದ ಚೌಕಟ್ಟಿನಲ್ಲೇ ನಡೆಯಲಿದೆ ಎಂದು ಮೂಲಗಳು ಹೇಳಿರುವುದಾಗಿ ವರದಿ ತಿಳಿಸಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net