

ಬೆಂಗಳೂರು: ಕರೊನಾ ಲಾಕ್‌ಡೌನ್ 4ನೇ ಹಂತಕ್ಕೆ ಕಾಲಿರಿಸುವ ಹಂತದಲ್ಲಿದ್ದು, ಹೊಸ ಪರಿಸ್ಥಿತಿಯನ್ನು ಸಹಜವೆಂಬಂತೆ ಸ್ವೀಕರಿಸಿಕೊಂಡು ಅದಕ್ಕೆ ತಕ್ಕಂತೆ ಸುರಕ್ಷಾ ಕ್ರಮಗಳನ್ನು ಅಳವಡಿಸಿಕೊಂಡು ಕೈಗಾರಿಕಾ ಕೆಲಸಗಳನ್ನು ಮತ್ತೆ ಪ್ರಾರಂಭಿಸಿ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಜಗದೀಶ್ ಶೆಟ್ಟರ್ ಕೈಗಾರಿಕೋದ್ಯಮಿಗಳಿಗೆ ಕರೆ ನೀಡಿದರು.
ಬೆಂಗಳೂರಿನಲ್ಲಿ ಇಂದು ಎಫ್‌ಕೆಸಿಸಿಐ ಆಯೋಜಿಸಿದ್ದ ವಿಡಿಯೋ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಎಮ್‌ಎಸ್‌ಎಂಇ ಹಾಗೂ ಕೈಗಾರಿಕಾ ಪುನಶ್ಚೇತನಕ್ಕೆ ಅಗತ್ಯ ಪ್ಯಾಕೇಜ್‌ಗಳನ್ನು ಘೋಷಣೆ ಮಾಡಿವೆ. ಕರ್ನಾಟಕ ಸರಕಾರ ಲಾಕ್‌ಡೌನ್ ಶುರುವಾದ ಅಂದಿನಿಂದಲೂ ಕೈಗಾರಿಕಾ ಸಂಘ ಸಂಸ್ಥೆಗಳ ಜತೆ ಸಂವಾದ ನಡೆಸುತ್ತಿದೆ. ಅವರ ಕಷ್ಟಕ್ಕೆ ಸ್ಪಂದಿಸುತ್ತ ಕೈಗಾರಿಕೆಗಳ ಪುನಶ್ಚೇತನಕ್ಕೆ ಅಗತ್ಯವಿರುವ ಕ್ರಮಗಳನ್ನು ಹಾಗೂ ಆದೇಶಗಳನ್ನು ನೀಡುತ್ತಾ ಬಂದಿದೆ. ಲಾಕ್ ಡೌನ್ ಸಂದರ್ಭದಲ್ಲಿ ಅಗತ್ಯ ಕೈಗಾರಿಕೆಗಳು ಕಾರ್ಯನಿರ್ವಹಿಸಲು ಹಾಗೂ ಲಾಕ್‌ಡೌನ್ ಸಡಲಿಕೆಯ ನಂತರ ಬಹುತೇಕ ಕೈಗಾರಿಕೆಗಳು ಪ್ರಾರಂಭಿಸಲು ನಾವು ಅಗತ್ಯ ಸಹಕಾರ ನೀಡುತ್ತ ಬಂದಿದ್ದೇವೆ. ಕೇಂದ್ರ ಸರಕಾರ ಈಗಾಗಾಲೇ ಐತಿಹಾಸಿಕ ಪ್ಯಾಕೇಜನ್ನು ಘೋಷಣೆ ಮಾಡಿದೆ. ಅಲ್ಲದೆ, ರಾಜ್ಯ ಸರಕಾರ ಕೂಡಾ ಎಮ್‌ಎಸ್‌ಎಂಇ ಗಳ ಪುನಶ್ಚೇತನಕ್ಕೆ ಪ್ಯಾಕೇಜ್ ಘೋಷಿಸಿದೆ ಎಂದರು.
ಕೇಂದ್ರ ಸರಕಾರ ನಮ್ಮ ಮುಂದಿನ ಗುರಿಗಳನ್ನು ಸ್ಪಷ್ಟಪಡಿಸಿದೆ. ಸ್ಥಳೀಯವಾಗಿ ಉತ್ಪಾದನೆ ಮಾಡುವ ಹಾಗೂ ಹೊಸತನಕ್ಕೆ ತೆರೆದುಕೊಳ್ಳುವ ಮೂಲಕ ಹೊಸದನ್ನು ಸಾಧಿಸಬೇಕಾಗಿದೆ. ಇದೇ ವೇಳೆ ಕೋವಿಡ್ - 19 ರ ಲಾಕ್ ಡೌನ್ ನಿಂದ ಆಗಿರುವ ನೂತನ ಸಾಮಾನ್ಯ ಪರಿಸ್ಥಿತಿಗೆ ನಾವು ಹೊಂದಿಕೊಳ್ಳಬೇಕಾಗಿದೆ. ಈ ಸಂಕಷ್ಟದ ಸಮಯವನ್ನು ಸಾಧನೆಯ ಮೆಟ್ಟಿಲಾಗಿ ಪರಿವರ್ತಿಸಿಕೊಳ್ಳಬೇಕಾಗಿದೆ. ಕೈಗಾರಿಕೋದ್ಯಮಿಗಳು ತಮ್ಮನ್ನ ತಾವು ಈ ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಗಿಸಿಕೊಳ್ಳಬೇಕು. ಕೈಗಾರಿಕೆಗಳಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು. ಹಾಗೂ ತಮ್ಮ ಕೈಗಾರಿಕೆಗಳನ್ನು ಪ್ರಾರಂಭಿಸಿ ದೇಶದ ಆರ್ಥಿಕತೆ ಪುನಶ್ಚೇತನಗೊಳ್ಳು ತಮ್ಮ ಸಹಕಾರ ನೀಡಬೇಕು ಎಂದು ಅವರು ಕರೆ ನೀಡಿದರು.
ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತ, ರಾಜ್ಯ ಸರಕಾರ ಕೈಗಾರಿಕಾ ಕ್ಷೇತ್ರ ಅನುಭವಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಎಲ್ಲಾ ರೀತಿಯ ಸಹಕಾರ ನೀಡಲು ಸಿದ್ದವಿದೆ. ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಂಡು 100 ರಷ್ಟು ಮಾನವ ಸಂಪನ್ಮೂಲ ಬಳಸಿಕೊಂಡು ಕೈಗಾರಿಕೆಗಳನ್ನು ನಡೆಸಲು ಯಾವುದೇ ಅಡೆತಡೆಯಿಲ್ಲ. ಕಾರ್ಮಿಕರನ್ನು ಕರೆತರಲು ಬೇಕಾಗುವು ಎಲ್ಲಾ ರೀತಿಯ ಅನುಮತಿ ಪಡೆಯಲು ಇಲಾಖೆಯಿಂದ ಸಹಕಾರವಿದೆ ಎಂದು ಹೇಳಿದರು.
ಇದನ್ನೂ ಓದಿ: ಇಲ್ಲಾ… ನಾ ಅಕಿಗೆ ವಾಟ್ಸ್ಆಪ್ ಒಳಗ ಚಾಳಿ ಬಿಟ್ಟೇನಿ…
ಎಫ್‌ಕೆಸಿಸಿಐನ ಉಲ್ಲಾಸ್ ಕಾಮತ್ ಪ್ರಾಸ್ತಾವಿಕವಾಗಿ, ಲಾಕ್ ಡೌನ್ ಸಂದರ್ಭದಲ್ಲಿ ರಾಜ್ಯ ಸರಕಾರ ಹಾಗೂ ಕೈಗಾರಿಕಾ ಇಲಾಖೆಯ ಜೊತೆಗೆ ಪ್ರತಿದಿನ ನಾವು ಸಂಪರ್ಕದಲ್ಲಿದ್ದೆವು. ನಮಗೆ ಬೇಕಾದ ಎಲ್ಲಾ ರೀತಿಯ ಅನುಮತಿಗಳನ್ನು ಪಡೆದುಕೊಳ್ಳಲು ಇಲಾಖೆಯ ಅಧಿಕಾರಿಗಳ ಅಗತ್ಯ ಸಹಕಾರ ನೀಡಿದ್ದಾರೆ. ಅಲ್ಲದೆ ಇತ್ತಿಚಿನ ಭೂಸುಧಾರಣಾ ಕಾಯ್ದೆಯ ತಿದ್ದುಪಡಿ ಹಾಗೂ ಕೈಗಾರಿಕಾ ಸ್ನೇಹಿ ವಾತಾವರಣ ನಿರ್ಮಾಣ ಆಗಿರುವುದು ನಮಗೆ ಸಂತಸ ತಂದಿದೆ. ಅಲ್ಲದೆ, ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಹೂಡಿಕೆಗೂ ಉತ್ತಮ ವಾತಾವರಣ ನಿರ್ಮಾಣವಾಗಿರುವುದು ಸಂತಸ ತಂದಿದೆ ಎಂದು ಹೇಳಿದರು.
ವಿಡಿಯೋ ಸಂವಾದದಲ್ಲಿ ಕೈಗಾರಿಕಾ ಆಯುಕ್ತೆ ಶ್ರಿಮತಿ ಗುಂಜನ್ ಕೃಷ್ಣ ಮತ್ತು ರಾಜ್ಯ ಹಾಗೂ ದೆಹಲಿಯಿಂದ ಎಫ್‌ಕೆಸಿಸಿಐ ಪ್ರತಿನಿಧಿಗಳು ಭಾಗವಹಿಸಿದ್ದರು.