

ಬೆಂಗಳೂರು: ಕರೊನಾ ಕಾರಣವೊಡ್ಡಿ ಮುಂದೂಡಲಾಗಿದ್ದ ಸಹಕಾರ ಸಂಘಗಳ ಚುನಾವಣೆಗೆ ಕಾಲ ಕೂಡಿ ಬಂದಿದೆ. ನ.15ರೊಳಗೆ ಕಡ್ಡಾಯವಾಗಿ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಸೂಚಿಸಲಾಗಿದೆ.
ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ಚುನಾವಣೆ ನಡೆಸಬೇಕೆಂದು ನಿದೇರ್ಶನ ನೀಡಿದೆ. ಅದರಂತೆ ಸಹಕಾರ ಚುನಾವಣಾ ಪ್ರಾಧಿಕಾರದ ಆಯುಕ್ತರು ಮಂಗಳವಾರ ಆದೇಶ ಹೊರಡಿಸಿದ್ದಾರೆ. ಚುನಾವಣೆಗಳನ್ನು ಸಕಾಲದಲ್ಲಿ ಮುಗಿಸದಿದ್ದಲ್ಲಿ ಆಯಾ ಚುನಾವಣಾಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.
ಪ್ರಾಥಮಿಕ, ಮಾಧ್ಯಮಿಕ ಹಾಗೂ ಫೆಡರಲ್ ಸಹಕಾರ ಸಂಘಗಳ ಪದಾವಧಿ ಮುಗಿದ ಹಾಗೂ ಈಗಾಗಲೆ ಚುನಾವಣೆ ಪ್ರಕ್ರಿಯೆ ಆರಂಭವಾಗಿ ಜು.13ರಂದು ಯಾವ ಹಂತದಲ್ಲಿ ನಿಂತಿದ್ದವೋ ಅಲ್ಲಿಂದಲೇ ಮುಂದುವರಿಸಿ, ನ.15ರೊಳಗೆ ಪೂರ್ಣಗೊಳಿಸುವುದು ಕಡ್ಡಾಯವೆಂದು ತಿಳಿಸಿದ್ದಾರೆ. ಉಳಿದ ಸಹಕಾರ ಸಂಘಗಳ ಚುನಾವಣೆಗಳನ್ನು ಆಯಾ ಸಹಕಾರ ಸಂಘಗಳ ಆಡಳಿತ ಮಂಡಳಿ ಪದಾವಧಿ ಮುಗಿಯುವ 15 ದಿನಗಳಿಗೆ ಮುಂಚೆ ಚುನಾವಣೆ ಪೂರ್ಣಗೊಳಿಸಲು ಕ್ರಮವಹಿಸಬೇಕು ಎಂದು ಸೂಚಿಸಿದ್ದಾರೆ.