

ನವದೆಹಲಿ: ಕರೊನಾ ಮಹಾವ್ಯಾಧಿಯ ಹಿನ್ನೆಲೆಯಲ್ಲಿ ಉದ್ಭವಿಸಿರುವ ಪರಿಸ್ಥಿತಿಯಿಂದಾಗಿ ಚೀನಾ ತೊರೆಯುವ ಕಂಪನಿಗಳನ್ನು ಆಕರ್ಷಿಸಲು ಭಾರತ ಯೋಜನೆಯೊಂದನ್ನು ರೂಪಿಸಿದೆ. ಇಂಥ ಕಂಪನಿಗಳಿಗೆ ಸ್ಥಳಾವಕಾಶ ಕಲ್ಪಿಸಲು ದೇಶದ ವಿವಿಧ ಭಾಗಗಳಲ್ಲಿ ಒಟ್ಟು 4,61,589 ಹೆಕ್ಟೇರ್ ಪ್ರದೇಶವನ್ನು ಗುರುತಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಯುರೋಪನ ಸಣ್ಣ ದೇಶ ಲಕ್ಸೆಂಬರ್ಗ್ ವಿಸ್ತೀರ್ಣಕ್ಕಿಂತಲೂ ಎರಡು ಪಟ್ಟು ಹೆಚ್ಚು ಜಾಗವನ್ನು ಒದಗಿಸಲು ಸರ್ಕಾರ ಮುಂದಾಗಿದೆ. ಉತ್ಪಾದನೆ ಚಟುವಟಿಕೆಗಳಿಗೆ ಚೀನಾದ ಮೇಲಿನ ಅವಲಂಬನೆ ಕಡಿಮೆ ಮಾಡಲು ಕಂಪನಿಗಳು ಬಯಸುತ್ತಿರುವುದರಿಂದ ಅವರಿಗೆ ಅನುಕೂಲವಾಗುವಂತೆ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಸರ್ಕಾರ ರಾಜ್ಯಗಳೊಂದಿಗೆ ಮಾತುಕತೆ ನಡೆಸುತ್ತಿದೆ.
4,61,589 ಹೆಕ್ಟೇರ್: ಚೀನಾ ತೊರೆಯುವ ಕಂಪನಿಗಳಿಗೆ ಒದಗಿ ಸಲು ಗುರುತಿಸಲಾಗಿರುವ ಪ್ರದೇಶ.
1,15,131 ಹೆಕ್ಟೇರ್: ಗುಜರಾತ್, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ ಮೊದಲಾದ ರಾಜ್ಯಗಳ ಕೈಗಾರಿಕಾ ಪ್ರದೇಶಾಭಿವೃದ್ಧಿ ಪ್ರದೇಶಗಳು ಇದರಲ್ಲಿ ಸೇರಿವೆ.
2,43,000 ಹೆಕ್ಟೇರ್: ಯುರೋಪ್ನ ಒಂದು ಪುಟ್ಟ ದೇಶ ಲಕ್ಸೆಂಬರ್ಗ್ನ ವಿಸ್ತೀರ್ಣ. ಇದರ ಸರಿಸುಮಾರು ದುಪ್ಪಟ್ಟು ವಿಸ್ತೀರ್ಣದ ಪ್ರದೇಶ ನೀಡಿಕೆಗೆ ಭಾರತದ ಆಫರ್.
ಜಾಗದ್ದೇ ಸಮಸ್ಯೆ: ಭಾರತದಲ್ಲಿ ಬಂಡವಾಳ ಹೂಡುವವರಿಗೆ ಜಾಗದ್ದೇ ದೊಡ್ಡ ಸಮಸ್ಯೆಯಾಗಿದೆ. ಭೂಸ್ವಾಧೀನ ವಿಳಂಬದಿಂದಾಗಿ ಸೌದಿ ಅರಾಮ್ಕೊ, ಪೋಸ್ಕೋದಂಥ ಕಂಪನಿಗಳ ಸ್ಥಾವರಗಳ ಸ್ಥಾಪನೆ ಸಮಸ್ಯೆ ಎದುರಿಸುತ್ತಿರುವುದನ್ನು ಗಮನಿಸಬಹುದು. ಪ್ರಸಕ್ತ ಹೂಡಿಕೆದಾರರು ಭಾರತದಲ್ಲಿ ಕಾರ್ಖಾನೆಗಳ ಸ್ಥಾಪನೆಗೆ ತಮ್ಮದೇ ಸ್ವಂತ ಜಾಗ ಹೊಂದಲು ಹೆಚ್ಚಿನ ಆಸಕ್ತಿ ತೋರಿಸುತ್ತಿವೆ. ಸಣ್ಣ ಜಾಗಗಳ ಮಾಲಿಕರು ತಕರಾರು ವ್ಯಕ್ತಪಡಿಸುವುದರಿಂದ ಅವರೊಂದಿಗೆ ಮಾತುಕತೆ ನಡೆಸುವ ಪ್ರಕ್ರಿಯೆಯಿಂದಾಗಿ ಕೆಲವು ಸಂದರ್ಭಗಳಲ್ಲಿ ಯೋಜನೆಗಳ ಅನುಷ್ಠಾನ ವಿಳಂಬಗೊಳ್ಳುತ್ತಿದೆ.
ನೇರ ವಿದೇಶಿ ಬಂಡವಾಳ ಹೂಡಿಕೆಗೆ ಹೆಚ್ಚಿನ ಉತ್ತೇಜನ ಸಿಗುವಲ್ಲಿ ಪಾರದರ್ಶಕ ಹಾಗೂ ಶೀಘ್ರವಾಗಿ ನಿವೇಶನ ಲಭ್ಯವಾಗುವುದು ಒಂದು ಮಹತ್ವದ ಪಾತ್ರ ವಹಿಸುತ್ತದೆ. ಜಮೀನು ಸುಲಭವಾಗಿ ಲಭಿಸುವಂತೆ ಮಾಡುವುದು ಅಗತ್ಯ.
| ರಾಹುಲ್ ಬಜೋರಿಯಾ ಬಾಕ್ಲೇಸ್ ಬ್ಯಾಂಕ್ನ ಮುಖ್ಯ ಆರ್ಥಿಕ ತಜ್ಞ
ಕರೊನಾ ವೈರಸ್ ಹರಡುವುದಕ್ಕೂ ಮೊದಲೇ ಆಮೆಗತಿಯಲ್ಲಿ ಸಾಗುತ್ತಿದ್ದ ಆರ್ಥಿಕತೆಗೆ ಉತ್ತೇಜನ ಸಿಗುವಂತಾಗಲು ಹೊಸ ಹೂಡಿಕೆಗಳನ್ನು ಆಕರ್ಷಿಸುವುದು ಅಗತ್ಯವಾಗಿತ್ತು. ವಿದ್ಯುತ್, ನೀರು ಮತ್ತು ರಸ್ತೆ ಸಂಪರ್ಕದೊಂದಿಗೆ ನಿವೇಶನ ಒದಗಿಸುವುದು ಈ ನಿಟ್ಟಿನಲ್ಲಿ ಪ್ರಮುಖ ಅಂಶವಾಗಿದೆ. ಈಗಂತೂ ದೇಶವ್ಯಾಪಿ ಲಾಕ್ಡೌನ್ನಿಂದಾಗಿ ಆರ್ಥಿಕ ಚಟುವಟಿಕೆಗಳು ಬಹುತೇಕ ಸ್ಥಗಿತಗೊಂಡಿದ್ದು ಚೇತರಿಕೆಗೆ ಬಂಡವಾಳ ಆಕರ್ಷಿಸುವುದು ಅನಿವಾರ್ಯವಾಗಿದೆ.
ಪ್ರಮುಖ ವಲಯಗಳು: ಎಲೆಕ್ಟ್ರಿಕಲ್, ಔಷಧ, ವೈದ್ಯಕೀಯ ಉಪಕರಣ, ಎಲೆಕ್ಟ್ರಾನಿಕ್ಸ್, ಸೌರ ಉಪಕರಣಗಳು, ಆಹಾರ ಸಂಸ್ಕರಣೆ, ರಾಸಾಯನಿಕ ಮತ್ತು ಜವಳಿ ಕ್ಷೇತ್ರಗಳು ಉತ್ಪಾದನೆಗೆ ಹೆಚ್ಚು ಗಮನ ನೀಡಬೇಕಾದ ವಲಯಗಳೆಂದು ಸರ್ಕಾರ ಗುರುತಿಸಿದೆ. ಪರ್ಯಾಯ ಹುಡುಕುತ್ತಿರುವ ಕಂಪನಿಗಳನ್ನು ಗುರುತಿಸುವಂತೆ ವಿದೇಶಗಳಲ್ಲಿರುವ ಭಾರತೀಯ ರಾಯಭಾರ ಕಚೇರಿಗಳಿಗೆ ಕೇಂದ್ರ ಸೂಚಿಸಿದೆ. ಏಷ್ಯಾದ ಮೂರನೇ ಅತಿದೊಡ್ಡ ಆರ್ಥಿಕತೆಯಾದ ಭಾರತಕ್ಕೆ ತಮ್ಮ ಸಂಸ್ಥೆಗಳನ್ನು ವರ್ಗಾಯಿಸುವ ಬಗ್ಗೆ ಜಪಾನ್, ಅಮೆರಿಕ, ದಕ್ಷಿಣ ಕೊರಿಯಾ ಮತ್ತು ಚೀನಾಗಳು ಸರ್ಕಾರದ ಹೂಡಿಕೆ ಸಂಸ್ಥೆಯಾದ ಇನ್ವೆಸ್ಟ್ ಇಂಡಿಯಾವನ್ನು ಸಂರ್ಪಸಿವೆ.