ಕಾಲೇಜು, ವಿಶ್ವವಿದ್ಯಾಲಯಗಳ ಪರೀಕ್ಷೆಗಳೂ ರದ್ದು; ಇವರೇ ಭಾಗ್ಯವಂತರು...!

25_06_Mdy_Sslc Exam 01
Published on

ಬೆಂಗಳೂರು: ರಾಜ್ಯದಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆಗಳು ಮುಗಿದಿವೆ. ವಿದ್ಯಾರ್ಥಿಗಳು ಅವರ ಪಾಲಕರು, ಹಾಗೂ ಶಿಕ್ಷಕರು ನಿಟ್ಟುಸಿರು ಬಿಟ್ಟಿದ್ದಾರೆ. ಆಗಸ್ಟ್​ ಮೊದಲ ವಾರದಲ್ಲಿ ಫಲಿತಾಂಶ ಪ್ರಕಟವಾಗುವ ನಿರೀಕ್ಷೆಯಿದೆ. ಆದರೆ, ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸುವಂತಿಲ್ಲ. ಜು.31ರವರೆಗೆ ಶಿಕ್ಷಣ ಸಂಸ್ಥೆಗಳ ಆರಂಭಕ್ಕೆ ಅವಕಾಶವಿಲ್ಲವೆಂದು ಕೇಂದ್ರ ಸರ್ಕಾರ ಈಗಾಗಲೇ ತಿಳಿಸಿದೆ.

ಈ ನಡುವೆ, ಕಾಲೇಜು ಹಾಗೂ ವಿಶ್ವ ವಿದ್ಯಾಲಯಗಳ ಪರೀಕ್ಷೆಯನ್ನು ರದ್ದು ಪಡಿಸಲಾಗಿದೆ ಎಂದು ಪಂಜಾಬ್​ ಸರ್ಕಾರ ಘೋಷಿಸಿದೆ. ಈ ಹಿಂದಿನ ಪರೀಕ್ಷೆಗಳ ಸಾಧನೆಯನ್ನು ಆಧರಿಸಿ ಫಲಿತಾಂಶ ನೀಡಲಾಗುವುದು ಎಂದು ಸಿಎಂ ಕ್ಯಾಪ್ಟನ್​ ಅಮರಿಂದರ್​ ಸಿಂಗ್​ ಹೇಳಿದ್ದಾರೆ.

ಫೇಸ್​ಬುಕ್ ಲೈವ್​​ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಸಿಎಂ, ಈ ವಿಷಯ ಪ್ರಕಟಿಸಿದ್ದಾರೆ. ಆದರೆ, ಈಗಾಗಲೇ ಎಲ ವಿವಿಗಳು ಆನ್​ಲೈನ್​ ಮೂಲಕ ಪರೀಕ್ಷೆಗಳನ್ನು ನಡೆಸುತ್ತಿದ್ದು, ಅವುಗಳು ಮುಂದುವರಿಯಲಿವೆ ಎಂದು ಸ್ಪಷ್ಟಪಡಿಸಿದ್ದಾರೆ.

ಇದರ ಹೊರತಾಗಿಯೂ ತಮ್ಮ ಸಾಧನೆಯನ್ನು ಉತ್ತಮಪಡಿಸಿಕೊಳ್ಳಲು ಬಯಸುವ ವಿದ್ಯಾರ್ಥಿಗಳು ಕರೊನಾ ಸಂಕಷ್ಟ ಮುಗಿದ ಬಳಿಕ ಪರೀಕ್ಷೆ ತೆಗೆದುಕೊಳ್ಳುವ ಅವಕಾಶ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

ವಿವಿಗಳು ಹಾಗೂ ಕಾಲೇಜುಗಳು ಸರ್ಕಾರದ ಈ ನಿರ್ಧಾರವನ್ನು ಜಾರಿಗೊಳಿಸಲು ಸಿದ್ಧತೆಗಳನ್ನು ನಡೆಸುತ್ತಿವೆ. ಪರೀಕ್ಷೆಗಳು ರದ್ದಾಗಿದ್ದರೂ ವಿದ್ಯಾರ್ಥಿಗಳು ತಮ್ಮ ಅಭ್ಯಾಸವನ್ನು ಮುಂದುವರಿಸಬೇಕೆಂದು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net