ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಸುರಿಯುತ್ತಿರುವ ಮಳೆ ಇನ್ನೆರಡು ದಿನ ಮುಂದುವರಿಯಲಿದೆ. ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಮಂಡ್ಯ, ಚಾಮರಾಜನಗರ ಸೇರಿ ದಕ್ಷಿಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಗುರುವಾರ ತುಸು ಬಿರುಸಾಗಿ ವರ್ಷಧಾರೆಯಾಗಿದೆ. ಇನ್ನು ಕೆಲ ಜಿಲ್ಲೆಗಳಲ್ಲಿ ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ಬಳಿಕ ಜಿಟಿಜಿಟಿ ಮಳೆ ಸುರಿಯಿತು.
ಭಾರಿ ಮಳೆ ಅಲರ್ಟ್: ಬೆಂಗಳೂರು ನಗರ, ಬೆಂ,ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಮೈಸೂರು ಮತ್ತು ತುಮಕೂರಿನಲ್ಲಿ ಡಿ.13 ಮತ್ತು ಡಿ.18ರಂದು ಬಿರುಸಾಗಿ ವರ್ಷಧಾರೆಯಾಗುವ ಸಾಧ್ಯತೆ ಇರುವುದರಿಂದ ಯೆಲ್ಲೋ ಅಲರ್ಟ್ ನೀಡಲಾಗಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಮುಂದಿನ 48 ಗಂಟೆ ಸಾಧಾರಣ ವರ್ಷಧಾರೆಯಾಗಲಿದೆ. ಡಿ.15ರಿಂದ ಡಿ.17ರವರೆಗೆ ರಾಜ್ಯದಲ್ಲಿ ಒಣಹವೆ ಇದ್ದರೆ, ಡಿ.18ರಿಂದ ರಾಜ್ಯಾದ್ಯಂತ ಮತ್ತೆ ಮಳೆ ಶುರುವಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಬೆಂಗಳೂರು ಥಂಡಿ: ರಾಜಧಾನಿಯಲ್ಲಿ ಗುರುವಾರ ಬೆಳಗ್ಗೆಯೇ ಜಿಟಿ ಜಿಟಿ ಮಳೆ ಶುರುವಾಯಿತು. ಇದರಿಂದಾಗಿ ದೈನಂದಿನ ಕಾರ್ಯಚಟುವಟಿಕೆಗಳಿಗೆ ತೊಂದರೆಯಾಯಿತು. ಮೋಡ ಕವಿದ ವಾತಾವರಣದಿಂದಾಗಿ ಜನರು ಮನೆಯಿಂದ ಹೊರಬರಲು ಹಿಂದೇಟು ಹಾಕಿದರು. ಕೆ.ಆರ್.ಮಾರುಕಟ್ಟೆ, ಚಿಕ್ಕಪೇಟೆ, ಸುಲ್ತಾನ್ಪೇಟೆ, ಬಳೇಪೇಟೆ, ಕಾಟನ್ಪೇಟೆ, ವಿಜಯನಗರ, ಕಾಮಾಕ್ಷಿಪಾಳ್ಯ, ಮೆಜೆಸ್ಟಿಕ್, ಮೈಸೂರು ರಸ್ತೆ, ಬಸವನಗುಡಿ, ಜೆ.ಪಿ.ನಗರ, ಮಲ್ಲೇಶ್ವರ, ಜೆ.ಸಿ.ರಸ್ತೆ, ವಿಶ್ವೇಶ್ವರಯ್ಯಪುರ, ವಿದ್ಯಾಪೀಠ, ಹಗದೂರು, ಯಲಹಂಕ, ಆರ್.ಆರ್. ನಗರ, ವಿ.ನಾಗೇನಹಳ್ಳಿ, ಪುಲಿಕೇಶಿನಗರ, ಅರೆಕೆರೆ, ಎಚ್ಎಸ್ಆರ್ ಲೇಔಟ್, ನಾಗಪುರ, ಕಾಟನ್ಪೇಟೆ, ಚಾಮರಾಜಪೇಟೆ, ಬಿಟಿಎಂ ಲೇಔಟ್, ಹೂಡಿ ಸೇರಿ ನಗರದ ವಿವಿಧ ಬಡಾವಣೆಗಳಲ್ಲಿ ತುಸು ಬಿರುಸಾಗಿ ಮಳೆ ಸುರಿದಿದೆ. ಸೋಮವಾರ ಗರಿಷ್ಠ ತಾಪಮಾನದಲ್ಲಿ 25.9 ಡಿ.ಸೆ. ಉಷ್ಣಾಂಶ ದಾಖಲಾಗಿತ್ತು. ಬೆಂಗಳೂರಿನಲ್ಲಿ ಮುಂದಿನ 2 ದಿನ ಮಳೆ ಮುಂದುವರಿಯಲಿದೆ. ಶುಕ್ರವಾರ ಜೋರಾಗಿ ಮಳೆ ಸುರಿಯುವ ಸಾಧ್ಯತೆ ಇರುವುದರಿಂದ ಯೆಲ್ಲೋ ಅಲರ್ಟ್ ನೀಡಲಾಗಿದೆ.
ತಾಪಮಾನ ಕುಸಿತ: ವರ್ಷಧಾರೆಯಿಂದಾಗಿ ಚಳಿ ಹೆಚ್ಚಾಗಿದ್ದು, ಹಲವು ಜಿಲ್ಲೆಗಳಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನ ಇಳಿಕೆ ಕಂಡಿದೆ. ಬೆಂಗಳೂರು, ಮಂಡ್ಯ, ರಾಯಚೂರು, ಮಂಗಳೂರು, ಚಿತ್ರದುರ್ಗದಲ್ಲಿ ಕನಿಷ್ಠ ತಾಪಮಾನದಲ್ಲಿ ಸರಾಸರಿ 3-4 ಡಿ.ಸೆ.ಉಷ್ಣಾಂಶ ಕುಸಿತವಾಗಿತ್ತು. ಮುಂದಿನ 2 ದಿನ ಮೋಡ ಕವಿದ ವಾತಾವರಣ ಇರುವ ಜತೆಗೆ ಇನ್ನಷ್ಟು ತಾಪಮಾನ ಕುಸಿತವಾಗುವ ಸಾಧ್ಯತೆ ಇದೆ ಎಂದು ಇಲಾಖೆ ಮಾಹಿತಿ ನೀಡಿದೆ.
Champions Trophy ಸ್ವರೂಪದಲ್ಲಿ ಪ್ರಮುಖ ಬದಲಾವಣೆ? ಭಾರತ-ಪಾಕ್ ವಿವಾದದ ನಡುವೆಯೇ ಕೇಳಿ ಬಂತು ಹೊಸ ವಿಚಾರ
ರಾಮಾಯಣಕ್ಕಾಗಿ ಸಸ್ಯಾಹಾರಿಯಾದ್ರಾ Sai Pallavi? ನಟಿ ನೀಡಿದ ಸ್ಪಷ್ಟನೆ ಹೀಗಿದೆ