ಕಾಫಿಯ ಸಂತಸ ಸಂಕಟ: ಕಾಫಿ ದಿನದ ವಿಶೇಷ ಬರಹ

Coffee F
Published on

ಬಹುತೇಕರ ಮುಂಜಾನೆ ಆರಂಭವಾಗುವುದು ಬಿಸಿಬಿಸಿ ಕಾಫಿಯಿಂದ. ತೋಟದ ಬೆಳೆಯೆಂದೇ ಗುರುತಿಸಲ್ಪಟ್ಟಿರುವ ಕಾಫಿ ಕೃಷಿ ಕೊಯ್ಲಿನ ಬಳಿಕ ಉದ್ಯಮವಾಗಿ ಪರಿವರ್ತನೆಯಾಗುವ ಕಥೆಯೇ ರೋಚಕ. ನೆರಳಿನಲ್ಲಿ ಬೆಳೆಯುವ ಭಾರತದ ಕಾಫಿ ಗುಣಮಟ್ಟದಲ್ಲಿ ವಿಶ್ವದಲ್ಲೇ ನಂ.1. ವಿಶೇಷವಾಗಿ ಕರ್ನಾಟಕದ ಕಾಫಿ ರುಚಿಗೆ ಫಿದಾ ಆಗದವರೇ ಇಲ್ಲ. ಇಂಥ ಕಾಫಿ ರುಚಿಯ ಹಿಂದೆ ಕಹಿವಾಸ್ತವಗಳೂ ಅಡಗಿವೆ. ಕಾಫಿ ಕೃಷಿಗೆ ಎದುರಾಗಿರುವ ಸಂಕಟಗಳು ಒಂದೆರಡಲ್ಲ. ಅ.1 ವಿಶ್ವ ಕಾಫಿ ದಿನದ ಹಿನ್ನೆಲೆಯಲ್ಲಿ ಈ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಲು ವೇದಿಕೆಯಾಗಿದ್ದು ವಿಜಯವಾಣಿ ಕ್ಲಬ್ ಹೌಸ್. ಕಾಫಿ ಬೆಳೆಗೆ ಎದುರಾಗಿರುವ ಸಂಕಷ್ಟಗಳ ಪರಿಹಾರಕ್ಕೆ ಕಾಫಿ ಮಂಡಳಿ ಏನು ಮಾಡಬೇಕು? ಸರ್ಕಾರದಿಂದ ಯಾವ ರೀತಿಯ ಬೆಂಬಲ ಅವಶ್ಯ? ವಿದೇಶಿ ಮಾರುಕಟ್ಟೆಯಲ್ಲಿ ಗುಣಮಟ್ಟ ಕಾಯ್ದುಕೊಳ್ಳುವುದು ಹೇಗೆ? ಕಾಫಿ ಮಾರುಕಟ್ಟೆ ವಿಸ್ತರಣೆಯ ಸವಾಲುಗಳೇನು? ಹೀಗೆ ಹಲವು ವಿಷಯಗಳ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು.

ಕಾಫಿ ರುಚಿ ಹೆಚ್ಚಿಸಲು ಶ್ರಮ

ಕಳೆದ 10 ವರ್ಷಗಳಿಂದ ಬೆಲೆಯ ಅಸ್ಥಿರತೆ. ಇದರ ನಡುವೆ ಅನಾವೃಷ್ಟಿ, ಅತಿವೃಷ್ಟಿ. ಕಾಫಿ ಬೆಳೆಗಾರರು, ಕೂಲಿ ಕಾರ್ವಿುಕರೊಂದಿಗೆ ವನ್ಯಜೀವಿ ಸಂಘರ್ಷ. ಸತತ 2 ವರ್ಷಗಳ ಕರೊನಾದಿಂದ ಕಾಫಿ ರಫ್ತಿಗೆ ತೀರಾ ಹಿನ್ನಡೆ. ಕೃಷಿ ಕಾರ್ವಿುಕರ ಕೊರತೆ. ಇಷ್ಟೆಲ್ಲ ಕಹಿವಾಸ್ತವದ ನಡುವೆಯೂ ಗುಣಮಟ್ಟದ ಕಾಫಿ ನಮ್ಮದು ಎಂಬುದು ಹೆಮ್ಮೆಯ ಸಂಗತಿ. ಕಾಫಿ ಬೆಳೆ ಮಾತ್ರವಲ್ಲ, ಮತ್ತೊಂದು ಆಯಾಮದಲ್ಲಿ ಉದ್ಯಮವೂ ಹೌದು. ಕಾಫಿ ಉಷ್ಣ ಎಂಬುದು ತಪ್ಪು ಅಭಿಪ್ರಾಯ. ಕೆಲವು ದೇಶಗಳಲ್ಲಿ ಓರ್ವ ವ್ಯಕ್ತಿ ವರ್ಷಕ್ಕೆ ಸರಾಸರಿ 15 ಕೆಜಿ ಕಾಫಿ ಪುಡಿ ಬಳಕೆ ಮಾಡುತ್ತಾನೆ. ನಮ್ಮಲ್ಲಿ ಇದರ ಪ್ರಮಾಣ ತೀರಾ ಕಡಿಮೆ. ಆದರೆ ಕೆಲವರು ಶೇ.60ರವರೆಗೂ ಚಿಕೋರಿ ಬಳಕೆ ಮಾಡುತ್ತಿರುವುದು ಸರಿಯಲ್ಲ. ಚಿಕೋರಿ ರದ್ದತಿ ಬಗ್ಗೆಯೂ ಚಿಂತನೆ ನಡೆಯುತ್ತಿದೆ. ಭಾರತೀಯ ಕಾಫಿ ಮಂಡಳಿ ಬೆಳೆಗಾರರಿಗೆ ಸೂಕ್ತವಾಗಿ ಸ್ಪಂದಿಸುತ್ತಿದೆ. ಬೆಳೆ ವಿಸ್ತೀರ್ಣಕ್ಕೆ ಶ್ರಮಿಸುತ್ತಿದೆ. ‘ವಿಜಯವಾಣಿ’ ಕ್ಲಬ್ ಹೌಸ್​ನಲ್ಲಿ ವ್ಯಕ್ತವಾಗಿರುವ ಅನಿಸಿಕೆಗಳನ್ನು ಸರ್ಕಾರದ ಗಮನಕ್ಕೆ ತರಲಾಗುವುದು.

| ಎಂ.ಎಸ್.ಭೋಜೇಗೌಡ ಭಾರತೀಯ ಕಾಫಿ ಮಂಡಳಿ ಅಧ್ಯಕ್ಷ

ಕಾಫಿಯ ಅಚ್ಚರಿ

  • ದೇಶದ ಆರ್ಥಿಕತೆಗೆ ಕಾಫಿಯ ಕೊಡುಗೆ ಸುಮಾರು 10 ಸಾವಿರ ಕೋಟಿ ರೂ.
  • ದೇಶದಲ್ಲಿ ಕಾಫಿ ಉದ್ಯಮದಿಂದ ಸೃಷ್ಟಿಯಾದ ಉದ್ಯೋಗದ ಪ್ರಮಾಣ 50 ಲಕ್ಷ
  • ಕಾಫಿ ಉತ್ಪಾದನೆಯಲ್ಲಿ ಭಾರತಕ್ಕೆ ವಿಶ್ವದಲ್ಲಿ 7ನೇ ಸ್ಥಾನ
  • ಪರಿಸರ ಸಂರಕ್ಷಣೆಗೆ ಕಾಫಿ ಬೆಳೆಯ ಕೊಡುಗೆ ಮಹತ್ವದ್ದು 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net