ವಿಮಾನದಲ್ಲಿ ನೀಡಿದ್ದ ಆಹಾರದಲ್ಲಿ ಜಿರಳೆ!; ಸೋಷಿಯಲ್ ಮೀಡಿಯಾ ಪೋಸ್ಟ್​ ತೇಜೋವಧೆಯ ಹುನ್ನಾರವೇ?

Cockroach
Published on

ನವದೆಹಲಿ: ಹೊರಗಡೆಯ ಆಹಾರದಲ್ಲಿ ಬೇರೆ ಏನಾದರೂ ಇರುವುದು ಕಂಡು ಬಂದು ಆ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುವಂಥದ್ದು ಹಿಂದೆ ಹಲವು ಸಲ ನಡೆದಿದೆ. ಅಂಥದ್ದೇ ಒಂದು ಪ್ರಕರಣ ಈಗ ನಡೆದಿದ್ದು, ವಿಮಾನದಲ್ಲಿ ನೀಡಿದ್ದ ಆಹಾರದಲ್ಲಿ ಜಿರಳೆ ಇತ್ತು ಎಂಬ ಪೋಸ್ಟ್ ವೈರಲ್​ ಆಗಿದೆ.

ಏರ್​ ವಿಸ್ತಾರ ವಿಮಾನದಲ್ಲಿ ನೀಡಿದ್ದ ಆಹಾರದಲ್ಲಿ ಸಣ್ಣ ಜಿರಳೆ ಸಿಕ್ಕಿದೆ ಎಂಬುದಾಗಿ ಪ್ರಯಾಣಿಕ ನಿಕುಲ್ ಸೋಲಂಕಿ ಎಂಬವರು ನಿನ್ನೆ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದರು. ಇದಕ್ಕೆ ಪರ-ವಿರೋಧವಾಗಿ ಹಲವರು ನಾನಾ ರೀತಿಯಲ್ಲಿ ಪ್ರತಿಕ್ರಿಯಿಸಿದ್ದು, ಕಂಪನಿಯ ಅಧಿಕೃತ ಖಾತೆಯಿಂದ ಮತ್ತು ಸಿಇಒ ಕೂಡ ಪ್ರತ್ಯೇಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

"ನಮ್ಮ ಎಲ್ಲ ಆಹಾರವೂ ಉನ್ನತ ಗುಣಮಟ್ಟವನ್ನು ಮನಸಿನಲ್ಲಿ ಇರಿಸಿಕೊಂಡೇ ತಯಾರಿಸಲಾಗುತ್ತದೆ. ನಿಮ್ಮ ಪ್ರಯಾಣದ ವಿವರವನ್ನು ನಮಗೆ ನೇರವಾಗಿ ಕಳಿಸಿ, ಈ ಬಗ್ಗೆ ಪರಿಶೀಲಿಸುತ್ತೇವೆ" ಎಂಬುದಾಗಿ ಏರ್ ವಿಸ್ತಾರದ ಅಧಿಕೃತ ಹ್ಯಾಂಡಲ್​ನಿಂದ ಪ್ರತಿಕ್ರಿಯಿಸಲಾಗಿದೆ.

ಅಂದಹಾಗೆ ಇದಕ್ಕೆ ಪ್ರತಿಕ್ರಿಯೆಯಾಗಿ ನಿಕುಲ್ 2022ರ ಆ. 31ರಂದು ತಾವು ಪ್ರಯಾಣಿಸಿದ್ದ ಬಗ್ಗೆ ದಾಖಲೆ ಲಗತ್ತಿಸಿದ್ದರು. ಇದನ್ನು ನೋಡಿದ ಜನರು ಕೆಲವರು ಆರೋಪ ಹೊರಿಸಿದ್ದ ವ್ಯಕ್ತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಎರಡು ತಿಂಗಳ ಕಾಲ ಸುಮ್ಮನಿದ್ದಿದ್ದು ಯಾಕೆ ಎಂಬುದಾಗಿ ಹಲವರು ಟೀಕಿಸಿದ್ದಾರೆ.

ಇನ್ನು ಜೆಟ್​ ಏರ್​ವೇಸ್ ಸಿಇಒ ಸಂಜಯ್ ಕಪೂರ್​ ಕೂಡ ಈ ವಿಚಾರವಾಗಿ ರಿಪ್ಲೈ ಮಾಡಿದ್ದಾರೆ. "ವಿಮಾನದಲ್ಲಿ ನೀಡಿದ ಆಹಾರದಲ್ಲಿ ಜಿರಳೆ ಇತ್ತು ಎನ್ನಲಾದ ಟ್ವಿಟರ್ ಪೋಸ್ಟ್​ ಹರಿದಾಡುತ್ತಿದೆ. ಇದೊಂದೇ ಪೋಸ್ಟ್​ ಇರುವ, ಬರೀ ಮೂರು ಫಾಲೋವರ್ ಇರುವ ಖಾತೆಯಿಂದ, ಪ್ರಯಾಣದ 2 ತಿಂಗಳ ಬಳಿಕ ಈ ರೀತಿ ಪೋಸ್ಟ್ ಮಾಡಿರುವುದು ಅನುಮಾನಾಸ್ಪದವಾಗಿದೆ" ಎಂಬುದಾಗಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net