ಯುವಕನ ಟ್ವೀಟ್​ಗೆ ಸ್ಪಂದಿಸಿದ ಸಿಎಂ ಕಚೇರಿ: ಕತ್ತಲಲ್ಲಿ ಬದುಕುತ್ತಿದ್ದ ವೃದ್ಧೆಯ ಮನೆಗೆ ವಿದ್ಯುತ್ ಭಾಗ್ಯ

CM Office
Published on

ಚಿತ್ರದುರ್ಗ: ಯುವಕನೊಬ್ಬನ ಟ್ವೀಟ್​, ವೃದ್ಧೆಯ ಬಾಳಿನಲ್ಲಿ ಕತ್ತಲೆಯನ್ನು ಬದಿಗೆ ಸರಿಸಿ ಬೆಳಕು ಮೂಡಿಸಿರುವ ಅಪರೂಪದ ಪ್ರಸಂಗ ಚಳ್ಳಕೆರೆ ತಾಲೂಕಿನ ಬಸಾಪುರ ಗ್ರಾಮದಲ್ಲಿ ನಡೆದಿದೆ.

ಬಸಾಪುರ ಗ್ರಾಮದ ವಯೋ ವೃದ್ಧೆಯ ಮನೆಯಲ್ಲಿ ವಿದ್ಯುತ್ ದೀಪ ಇಲ್ಲದೆ ಕತ್ತಲಲ್ಲಿ ಬದುಕು ನಡೆಸುವಂತಾಗಿತ್ತು. ಈ ಸಮಸ್ಯೆಯನ್ನು ಮಹೇಂದ್ರ ಹೆಸರಿನ ಸ್ಥಳೀಯ ಯುವಕ, ಸಿಎಂ ಸಿದ್ದರಾಮಯ್ಯ ಮತ್ತು ಸಿಎಂ ಕಚೇರಿಗೆ ಟ್ವೀಟ್ ಮೂಲಕ ತಿಳಿಸಿದ್ದರು.

ಇದಕ್ಕೆ ಸ್ಪಂದಿಸಿರುವ ಸಿಎಂ ಕಚೇರಿ ಕೇವಲ 24 ಗಂಟೆಯೊಳಗೆ ವೃದ್ಧೆಯ ಸಮಸ್ಯೆಯನ್ನು ಬಗೆಹರಿಸಿದೆ. ವೃದ್ಧೆಯ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿ ಅಜ್ಜಿಯ ಕತ್ತಲಿನ ಬಾಳಿಗೆ ಬೆಳಕು ನೀಡಿದ್ದಾರೆ.

ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವೀಟ್​ ಮೂಲಕ ಪ್ರತಿಕ್ರಿಯಿಸಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಬಸಾಪುರ ಗ್ರಾಮದ ದೊಣಮ್ಮ ಎಂಬ ವೃದ್ಧ ಮಹಿಳೆ ಬಡತನದ ಕಾರಣಕ್ಕೆ ವಿದ್ಯುತ್ ಸಂಪರ್ಕ ಪಡೆಯದೆ ದೀಪದ ಆಸರೆಯಲ್ಲಿ ಬದುಕು ಸಾಗಿಸುತ್ತಿದ್ದ ವಿಚಾರವನ್ನು ಸ್ಥಳೀಯರಾದ ಮಹೇಂದ್ರ ಅವರು ನಮ್ಮ ಕಚೇರಿಯ ಗಮನಕ್ಕೆ ತಂದರು. ತಕ್ಷಣ ಅವರ ಮನವಿಗೆ ಸ್ಪಂದಿಸಿ, ಕೇವಲ 24 ಗಂಟೆಗಳ ಒಳಗೆ ಆ ತಾಯಿಯ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿದ್ದೇವೆ ಎಂದಿದ್ದಾರೆ.

ಅಲ್ಲದೆ, ಬದಲಾವಣೆ ಮೂಡಿಸಲು ನಾವು ಸಿದ್ಧರಿದ್ದೇವೆ. ನಮ್ಮ ಈ ಕಾರ್ಯಕ್ಕೆ ನಿಮ್ಮ ಸಹಕಾರವೂ ಇರಲಿ ಎಂದು ಸಿಎಂ ಸಿದ್ದರಾಮಯ್ಯ ಅವರು ಜನರಲ್ಲಿ ಮನವಿ ಮಾಡಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net