

ಬೆಂಗಳೂರು: ಚುನಾವಣೆ ಸಂದರ್ಭದಲ್ಲಿ ಘೋಷಿಸಿದ್ದ ಐದು ಗ್ಯಾರಂಟಿ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ಅನುಷ್ಠಾನಗೊಳಿಸಿದೆ. ಇನ್ನು ಮುಂದೆ ರಾಜ್ಯದ ಎಲ್ಲಾ ಮಹಿಳೆಯರು ಮತ್ತು ವಿದ್ಯಾರ್ಥಿನಿಯರು ಉಚಿತವಾಗಿ ಸರ್ಕಾರಿ ಬಸ್ನಲ್ಲಿ ಪ್ರಯಾಣಿಸಬಹುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಿಎಂ ಸಿದ್ದರಾಮಯ್ಯ ಮಹಿಳೆಯರಿಗೆ ಉಚಿತ ಪ್ರಯಾಣ ಘೋಷಿಸುತ್ತಿದ್ದಂತೆ ಅಲ್ಲಿದ್ದ ಪತ್ರಕರ್ತರು ಸಾಕಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ. ಈ ವೇಳೆ ಹಾಸ್ಯದ ಧಾಟಿಯಲ್ಲಿ ಉತ್ತರಿಸುತ್ತಾ, 'ಹೌದು ಕಣಯ್ಯಾ, ನನ್ನ ಹೆಂಡ್ತಿಯೂ ಸರ್ಕಾರಿ ಬಸ್ನಲ್ಲಿ ಉಚಿತವಾಗಿ ಪ್ರಯಾಣಿಸಬಹುದು. ಜತೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೂ ಈ ಯೋಜನೆ ಸೌಲಭ್ಯ ಅನ್ವಯವಾಗುತ್ತದೆ' ಎಂದರು. ಸರ್ಕಾರದ ಚೀಫ್ ಸೆಕ್ರೆಟರಿಯಾಗಿ ವಂದಿತಾ ಶರ್ಮ ಕಾರ್ಯನಿರ್ವಹಿಸುತ್ತಿದ್ದಾರೆ.
ಗ್ಯಾರಂಟಿ ಯೋಜನೆ ಜಾರಿಗೊಳಿಸುತ್ತಿದ್ದಂತೆ ಕಾಂಗ್ರೆಸ್ ಟ್ವೀಟ್ ಮಾಡಿದ್ದು, ನಾವು ನುಡಿದಂತೆ ನಡೆಯುವವರಾಗಿದ್ದು, ನಾವು ಮಾತು ಉಳಿಸಿಕೊಳ್ಳುವವರು. ಐದು ಗ್ಯಾರಂಟಿಗಳನ್ನು ಜಾರಿಗೊಳಿಸಿ ಇತಿಹಾಸ ಸೃಷ್ಟಿಸಿದ್ದೇವೆ. ಇದು ನಮ್ಮ ಬದ್ಧತೆಯಾಗಿದೆ ಎಂದು ಹೇಳಿಕೊಂಡಿದೆ.
ಉಚಿತ ಪ್ರಯಾಣ ಯೋಜನೆ ಜಾರಿಗೊಳ್ಳುತ್ತಿದ್ದಂತೆ ಬಿಜೆಪಿ ನಾಯಕರನ್ನು ಗುರಿಯಾಗಿಸಿಕೊಂಡು ಟ್ವಿಟರ್ನಲ್ಲಿ ಕಾಂಗ್ರೆಸ್ ವ್ಯಂಗ್ಯವಾಡಿದೆ. ಬಸವರಾಜ ಬೊಮ್ಮಾಯಿ ಹಾಗೂ ನಳಿನ್ ಕುಮಾರ್ ಕಟೀಲ್ ಅವರೇ ನಿಮ್ಮ ಮನೆಗೂ 200 ಯೂನಿಟ್ ವಿದ್ಯುತ್ ಫ್ರೀ! ಶೋಭಾ ಕರಂದ್ಲಾಜೆ ಅವರೇ ನಿಮಗೂ ಬಸ್ನಲ್ಲಿ ಫ್ರೀ! ಸಿ.ಟಿ ರವಿ ಅವರೇ ನಿಮ್ಮ ಮನೆಯವರಿಗೂ 2000 ರೂ. ಫ್ರೀ! ಬಜರಂಗದಳದ ನಿರುದ್ಯೋಗಿಗಳಿಗೂ ಯುವನಿಧಿ ಫ್ರೀ, (ಪದವಿ ಪಡೆದಿದ್ದವರಿದ್ದರೆ ಮಾತ್ರ) ಇದು ನಮ್ಮ ಗ್ಯಾರಂಟಿ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
'ಶಕ್ತಿ' ಯೋಜನೆ ಕರ್ನಾಟಕ ರಾಜ್ಯಕ್ಕೆ ಮಾತ್ರ ಸೀಮಿತವಾಗಿದ್ದು, ಎಕ್ಸ್ಪ್ರೆಸ್ ಬಸ್ನಲ್ಲಿಯೂ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ಹವಾನಿಯಂತ್ರಿತ, ಸ್ಲೀಪರ್ ಬಸ್ ಹಾಗೂ ಐಷಾರಾಮಿ ಬಸ್ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶವಿಲ್ಲ.