ಗೃಹಲಕ್ಷ್ಮೀ ಯೋಜನೆಯ ಹಣ ಅತ್ತೆಗೋ ಸೊಸೆಗೋ? ಸ್ಪಷ್ಟನೆ ನೀಡಿದ ಸಿಎಂ

gruhalaksmi
Published on

ಬೆಂಗಳೂರು: ಇಂದು ಸಚಿವ ಸಂಪುಟ ಸಭೆಯ ನಡೆದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾಂಗ್ರೆಸ್​ನ ಐದು ಗ್ಯಾರಂಟಿಗಳಲ್ಲಿ ಎಲ್ಲವನ್ನೂ ಈ ವರ್ಷವೇ ಜಾರಿ ಮಾಡುವುದಾಗಿ ಹೇಳಿದ್ದಾರೆ. ಈ ಸಂದರ್ಭ ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಸಿಎಂ ಸಿದ್ದರಾಮಯ್ಯ, ಪ್ರತೀ ಮನೆಯ ಒಡತಿಗೂ 2000 ರೂ. ನೀಡುವುದಾಗಿ ಘೋಷಿಸಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಿಎಂ, "ನಾವು ಹೇಳಿರುವುದು ಮನೆ ಯಜಮಾನಿ ಖಾತೆಗೆ 2000 ರೂ. ಜಮೆ ಮಾಡುತ್ತೇವೆ. ಅವರ ಅಕೌಂಟ್​ಗೆ ತಿಂಗಳಿಗೆ 2 ಸಾವಿರ ರೂ. ಜಮಾ ಮಾಡುತ್ತೇವೆ ಎಂದಿದ್ದೇವೆ. ಆದರೆ ಇದಕ್ಕಾಗಿ ಅಕೌಂಟ್​ ನಂಬರ್, ಆಧಾರ್​ ನಂಬರ್​, ಅರ್ಜಿ ಮುಂತಾದವನ್ನು ನೀಡಬೇಕು. ನಂತರ ಇಲಾಖೆಯವರು ಈ ಮಾಹಿತಿಯನ್ನು ಪ್ರಾಸೆಸ್ ಮಾಡಿ ಆಗಸ್ಟ್​ 15ನೇ ತಾರೀಕಿನಿಂದ ಈ ಯೋಜನೆಯನ್ನು ಜಾರಿಗೆ ತರುತ್ತಾರೆ. ಈಗಾಗಲೇ ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ಪಡೆಯತ್ತಿರುವವರಿಗೂ ಈ ಭತ್ಯೆ ಸಿಗಲಿದೆ. ಈ ಯೋಜನೆ ಎಲ್ಲಾ ಬಿಪಿಎಲ್ ಹಾಗೂ ಎಪಿಎಲ್ ಮಹಿಳೆಯರಿಗೆ ಈ ಲಾಭ ಸಿಗಲಿದೆ” ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಈ ಹಣ ಅತ್ತೆಗೆ ನೀಡುವುದೋ, ಸೊಸೆಗೆ ನೀಡುವುದೋ ಎಂಬ ವಿಚಾರವಾಗಿ ಮಾತನಾಡಿದ ಸಿದ್ದರಾಮಯ್ಯ, "ಈ ಯೋಜನೆಯ ಫಲಾನುಭವಿಗಳಾಗಲು ಜನರು ಬ್ಯಾಂಕ್ ಅಕೌಂಟ್ ದಾಖಲೆ, ಆಧಾರ್ ಕಾರ್ಡ್ ಕೊಡಬೇಕು. ಆಗಲೇ ಮನೆ ಯಜಮಾನಿ ಖಾತೆಗೆ ಎರಡು ಸಾವಿರ ಜಮಾ ಆಗುತ್ತೆ. ಇನ್ನು ಈ ಹಣ ಅತ್ತೆಗೆ ತಲುಪುತ್ತದೋ ಸೊಸೆಗೆ ತಲುಪುತ್ತದೋ ಎನ್ನುವ ವಿಚಾರ, ಮನೆಯವರಿಗೇ ಬಿಟ್ಟಿದ್ದು. ಯಾರು ಮನೆಯ ಯಜಮಾನಿ ಎಂಬ ವಿಚಾರದ ಮಾಹಿತಿಯನ್ನು ಕುಟುಂಬದವರೇ ನೀಡಬೇಕು. ಕುಟುಂಬದವರು ಕೊಟ್ಟ ಮಾಹಿತಿ ಆಧಾರದ ಮೇಲೆ ಫಲಾನುಭವಿ ಯಾರು ಎನ್ನುವುದು ನಿರ್ಧಾರ ಆಗುತ್ತದೆ" ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net