ರಾಜ್ಯದಲ್ಲಿ ಪರಭಾಷಾ ಚಿತ್ರಗಳ ಟಿಕೆಟ್ ದರ ನಿಯಂತ್ರಣಕ್ಕೆ ಪ್ರಾಮಾಣಿಕ ಪ್ರಯತ್ನ, ಪ್ರತಿ ಜಿಲ್ಲೆಗೂ 200 ಆಸನಗಳ ಮಿನಿ ಚಿತ್ರಮಂದಿರ ಸ್ಥಾಪನೆ: CM Siddaramaiah

MUDA case
Published on

ಬೆಂಗಳೂರು: ರಾಜ್ಯದಲ್ಲಿ ಪರಭಾಷಾ ಚಿತ್ರಗಳ ಟಿಕೆಟ್ ದರ ನಿಯಂತ್ರಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಜೊತೆಗೆ, ಕಲಾತ್ಮಕ ಚಿತ್ರಗಳ ಪ್ರೋತ್ಸಾಹಕ್ಕೆ ಪ್ರತೀ ಜಿಲ್ಲೆಗೂ 200 ಆಸನಗಳ ಮಿನಿ ಚಿತ್ರಮಂದಿರ ಸ್ಥಾಪನೆ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಘೋಷಿಸಿದ್ದಾರೆ.

ರವೀಂದ್ರ ಕಲಾ ಕ್ಷೇತ್ರದಲ್ಲಿ ಸಾರಾ ಗೋವಿಂದು ಅವರ ಅಭಿನಂದನಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ (CM Siddaramaiah), ಪಕ್ಕದ ರಾಜ್ಯಗಳಲ್ಲಿ ಪರಭಾಷಾ ಚಿತ್ರಗಳಿಗೆ ಟಿಕೆಟ್ ದರ ಎಷ್ಟಿದೆ ಎಂದು ಪರಿಶೀಲಿಸಿ ರಾಜ್ಯದಲ್ಲಿ ಅದಕ್ಕೆ ತಕ್ಕಂತೆ ನಿಯಂತ್ರಣ ತರುವ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವ ಪ್ರಯತ್ನ ಮಾಡುತ್ತೇನೆ. ಕನ್ನಡ ಕೆಲಸಕ್ಕೆ ಸರ್ಕಾರ ಸದಾ ಮುಂದೆ ಇರುತ್ತದೆ.

ಗೋವಿಂದು ಅವರು ರಾಜ್ ಕುಮಾರ್ ಸಂಘದ ಅಧ್ಯಕ್ಷರಾಗಿ ಮಾಡಿದ ಕೆಲಸಗಳು ಸ್ಮರಣೀಯ. ರಾಜ್ ಅವರ ವಿನಯ, ಸಭ್ಯತೆ, ಸರಳತೆ ಇಡೀ ಮನುಷ್ಯ ಕುಲಕ್ಕೇ ಮಾದರಿ. ಡಾ.ರಾಜ್ ಕುಮಾರ್ ಅವರಿಗೆ ರಾಜ್ ಅವರೇ ಸಾಟಿ. ಇವರಿಗೆ ಸಾಟಿ ಆಗುವವರು ಯಾರೂ ಇನ್ನೂ ಬಂದಿಲ್ಲ. ಡಾ.ರಾಜ್ ಅವರ ಗೋಕಾಕ್ ಚಳವಳಿಯಲ್ಲಿ ನಾನೂ ಅವರ ಭಾಷಣ ಕೇಳಲು ಹೋಗಿದ್ದೆ. ರಾಜ್ ಅವರಿಂದಾಗಿ ಕನ್ನಡ ಹೆಚ್ಚು ಶಕ್ತಿಯುತವಾಗಿ ಬೆಳೆಯಿತು.

CM Siddaramaiah

ನಾನು ಕನ್ನಡ ಕಾವಲು ಸಮಿತಿಯ ಮೊದಲ ಅಧ್ಯಕ್ಷನಾದಾಗ ಸಾ.ರಾ.ಗೋವಿಂದು ಮತ್ತು ಹಿರಿಯ ಪತ್ರಕರ್ತ ವೆಂಕಟೇಶ್ ಅವರ ಪರಿಚಯ ಮೊದಲ ಬಾರಿ ಆಯಿತು. ಇವರ ಕನ್ನಡ ಪರ ಹೋರಾಟದ ಬಗ್ಗೆ ಆಗಲೇ ನನಗೆ ಅಭಿಮಾನ ಇತ್ತು. ನನಗೆ ಕನ್ನಡ ನಾಡು, ನೆಲ, ಭಾಷೆ, ಸಂಸ್ಕೃತಿ ಬಗ್ಗೆ ಅಪಾರ ಪ್ರೀತಿ, ಅಭಿಮಾನ ಇದೆ. ಇದನ್ನು ಗ್ರಹಿಸಿಯೇ ಆಗಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು ನನ್ನನ್ನೇ ಕನ್ನಡ ಕಾವಲು ಸಮಿತಿಗೆ ಅಧ್ಯಕ್ಷನನ್ನಾಗಿಸಿದರು ಎಂದು ಸ್ಮರಿಸಿ, ಗೋವಿಂದು ಅವರ ಬದುಕು ಅವರ ಹೋರಾಟಗಳ ಕಾರಣದಿಂದಾಗಿ ಸಾರ್ಥಕವಾಗಿದೆ ಎಂದರು.

ನಾನು ಕೇಂದ್ರ ಸರ್ಕಾರಕ್ಕೆ ಬರೆಯುವ ಪತ್ರಗಳನ್ನು ಹೊರತುಪಡಿಸಿ ಉಳಿದ ಎಲ್ಲಕ್ಕೂ ಇವತ್ತಿಗೂ ಕನ್ನಡದಲ್ಲೇ ಸಹಿ ಹಾಕ್ತೀನಿ. ಬೇರೆ ಧರ್ಮ ಮತ್ತು ಇತರೆ ಭಾಷೆಗಳ ಬಗ್ಗೆ ಸಹಿಷ್ಣತೆ ಇರಬೇಕು. ನಮ್ಮ ಭಾಷೆ ಬಗ್ಗೆ ಅಭಿಮಾನ ಹೆಚ್ಚಾಗಿರಬೇಕು. ತಾಯಿ ಭಾಷೆ, ತಾಯಿ ನೆಲದ ಬಗ್ಗೆ ಅಭಿಮಾನ ಬೆಳೆಸಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net