

ಬೆಂಗಳೂರು: ಬಿಟ್ ಕಾಯಿನ್ ವಿಚಾರವಾಗಿ ಉಂಟಾಗಿರುವ ಸಂಘರ್ಷ ತೀವ್ರಗೊಂಡಿರುವ ಬೆನ್ನಿಗೆ ಮುಖ್ಯಮಂತ್ರಿ ಬದಲಾವಣೆ ವಿಚಾರ ಕೂಡ ಮುನ್ನಲೆಗೆ ಬಂದಿದೆ. ಇದೀಗ ಅದಕ್ಕೆ ಇಂಬು ಕೊಡುವಂಥ ಮತ್ತೊಂದು ವಿಷಯ ಕೂಡ ಬೆಳಕಿಗೆ ಬಂದಿತ್ತು, ಜನವರಿ ಒಳಗೇ ಬಸವರಾಜ ಬೊಮ್ಮಾಯಿ ಅಧಿಕಾರ ಕಳೆದುಕೊಳ್ಳಲಿದ್ದಾರಂತೆ.
ರಾಜಕಾರಣಿಯೊಬ್ಬರು ಈ ಕುರಿತ ಮಾಹಿತಿಯನ್ನು ಹೊರಗೆಡಹಿದ್ದು, ತಮಗೆ ಆ ಬಗ್ಗೆ ಸ್ಪಷ್ಟ ಮಾಹಿತಿ ಕೂಡ ಲಭಿಸಿದೆ ಎಂದು ಹೇಳಿದ್ದಾರೆ. ಮಾತ್ರವಲ್ಲ, ಇದೇ ವೇಳೆ ಕೆ.ಎಸ್. ಈಶ್ವರಪ್ಪ ಅವರನ್ನು ಟೀಕಿಸಿರುವ ಅವರು ಈಶ್ವರಪ್ಪ ಅವರ ತಲೆಗೂ ಬಾಯಿಗೂ ಲಿಂಕ್ ಇಲ್ಲ. ಅವರು ಪವಿತ್ರ ಅಲ್ಲ ಅಪವಿತ್ರ ಇದ್ದಾರೆ ಎಂದಿದ್ದಾರೆ. ಅಷ್ಟೇ ಅಲ್ಲ ಈಶ್ವರಪ್ಪ ಅವರನ್ನೇನಾದರೂ ಮುಖ್ಯಮಂತ್ರಿ ಮಾಡಿದರೆ ಸರ್ಕಾರ 2 ತಿಂಗಳು ಕೂಡ ಇರುವುದಿಲ್ಲ ಎಂದೂ ಅವರು ಹೇಳಿದ್ದಾರೆ.
ಹೀಗೆಂದು ಹೇಳಿರುವುದು ಮಾಜಿ ಶಾಸಕ ಶಿವರಾಜ ತಂಗಡಗಿ. ರಾಜಕೀಯ ಬೆಳವಣಿಗೆ ಕುರಿತು ಅವರು ಮಾತನಾಡಿರುವ ವಿಡಿಯೋ ಹರಿದಾಡಲಾರಂಭಿಸಿದ್ದು, ಸಿಎಂ ಬಸವರಾಜ ಬೊಮ್ಮಾಯಿ ಅಧಿಕಾರ ಕಳೆದುಕೊಳ್ಳಲಿದ್ದಾರೆ ಎಂದು ಅವರು ಹೇಳಿದ್ದಾರೆ. ಜನವರಿಯೊಳಗೆ ಬೊಮ್ಮಾಯಿ ಅವರು ಅಧಿಕಾರ ಕಳೆದುಕೊಳ್ಳುವ ಕುರಿತು ನಮಗೆ ಸ್ಪಷ್ಟ ಮಾಹಿತಿ ಬಂದಿದೆ. ಮಾತ್ರವಲ್ಲ, ಅವರ ಬಳಿಕ ಈ ಅವಧಿಯಲ್ಲಿ ಒಬ್ಬರಲ್ಲ, ಇಬ್ಬರು ಸಿಎಂ ಆಗುತ್ತಾರೆ ಎಂದೂ ಅವರು ಹೇಳಿದ್ದಾರೆ.