

ಬೆಂಗಳೂರು: ಟಿವಿಯಲ್ಲೇ ನೇರವಾಗಿ ಸಿನಿಮಾಗಳು ಬಿಡುಗಡೆಯಾಗುವುದು ಹೊಸ ವಿಷಯವೇನಲ್ಲ. ಕಳೆದ ತಿಂಗಳಷ್ಟೇ ಕಲರ್ಸ್ ಕನ್ನಡದಲ್ಲಿ ಸಂಯುಕ್ತಾ ಹೊರನಾಡು ಅಭಿನಯದ ‘ಆಮ್ಲೆಟ್’ ಎಂಬ ಚಿತ್ರ ಬಿಡುಗಡೆಯಾಗಿತ್ತು. ಈಗ ವಿಜಯ್ ರಾಘವೇಂದ್ರ ಅಭಿನಯದ 50ನೇ ಚಿತ್ರವಾದ ‘ಸೀತಾರಾಮ್ ಬಿನೋಯ್ - ಕೇಸ್ ನಂ 18’ ನೇರವಾಗಿ ಸ್ಟಾರ್ ಸುವರ್ಣದಲ್ಲಿ 15ರಂದು ಬಿಡುಗಡೆಯಾಗುತ್ತಿದೆ. ಅದಾದ ಮರುದಿನವೇ, ಅಂದರೆ 16ಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿರುವುದು ವಿಶೇಷ.
ಈ ಕುರಿತು ‘ವಿಜಯವಾಣಿ’ ಜತೆಗೆ ಮಾತನಾಡಿದ ವಿಜಯ್ ರಾಘವೇಂದ್ರ, ‘ಒಟಿಟಿ ಗಮನದಲ್ಲಿಟ್ಟುಕೊಂಡು ಈ ಚಿತ್ರ ಮಾಡಲಾಗಿದೆ. ಈ ಮಧ್ಯೆ, ಸ್ಟಾರ್ ಸುವರ್ಣದಲ್ಲಿ ಎಕ್ಸ್ಕ್ಲೂಸಿವ್ ಆಗಿ ಬಿಡುಗಡೆ ಮಾಡುವ ಅವಕಾಶ ಸಿಕ್ಕಿತು. ಭಾನುವಾರ ಚಾನಲ್ನಲ್ಲಿ ಪ್ರಸಾರವಾಗಿ, ಸೋಮವಾರದಿಂದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ’ ಎನ್ನುತ್ತಾರವರು. ‘ಸೀತಾರಾಮ್ ಬಿನೋಯ್’ ಚಿತ್ರವನ್ನು ದೇವಿ ಪ್ರಸಾದ್ ಶೆಟ್ಟಿ ಕಥೆ-ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಬರೀ ನಿರ್ದೇಶನವಷ್ಟೇ ಅಲ್ಲ, ಸಾತ್ವಿಕ್ ಹೆಬ್ಬಾರ್ ಮತ್ತು ಎಂಆರ್ಪಿ ಜತೆಗೆ ಸೇರಿಕೊಂಡು ಈ ಚಿತ್ರವನ್ನು ನಿರ್ವಿುಸಿದ್ದಾರೆ.