

ಕೃತಿ ಸನೋನ್ ಹೊಡೆದಾಡುವುದನ್ನು, ಚೇಸ್ ಮಾಡುವುದನ್ನು ಯಾವತ್ತಾದರೂ ನೋಡಿದ್ದೀರಾ? ನೋಡಿರುವುದಕ್ಕೆ ಸಾಧ್ಯವೇ ಇಲ್ಲ ಬಿಡಿ. ಏಕೆಂದರೆ, ಇದುವರೆಗೂ ಕೃತಿ ಆ ತರಹ ಕಾಣಿಸಿಕೊಂಡಿದ್ದಿರಲಿಲ್ಲ. ಆಕ್ಷನ್ ಚಿತ್ರಗಳಲ್ಲಿ ನಟಿಸಿದರೂ, ಹಾಡು ಮತ್ತು ಗ್ಲಾಮರ್ಗೆ ಮಾತ್ರ ಸೀಮಿತವಾಗಿದ್ದ ಕೃತಿ, ಈಗ ಹೊಸ ಸಾಹಸ ಮಾಡುವುದಕ್ಕೆ ಹೊರಟಿದ್ದಾರೆ.
ಟೈಗರ್ ಶ್ರಾಫ್ ಅಭಿನಯದ ‘ಗಣಪತ್’ ಎಂಬ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿರುವ ಕೃತಿ, ನಾಯಕನ ಸರಿಸಮನಾಗಿ ಆಕ್ಷನ್ ಮಾಡುವುದಕ್ಕೆ ಹೊರಟಿದ್ದಾರೆ. ಈ ಚಿತ್ರದಲ್ಲಿ ಅವರಿಗೆ ಫೈಟು, ಚೇಸು ಎಲ್ಲವೂ ಇದೆಯಂತೆ. ಹಾಗಾಗಿ, ಚಿತ್ರೀಕರಣಕ್ಕೆ ಹೋಗುವುದಕ್ಕೆ ಮುನ್ನ ಅವರು ಒಂದಿಷ್ಟು ತಾಲೀಮು ನಡೆಸಿದ್ದಾರೆ ಮತ್ತು ಅದರ ಬಗ್ಗೆ ಖುಷಿಯಾಗಿಯೂ ಇದ್ದಾರೆ.
ಈ ಕುರಿತು ಮಾತನಾಡಿರುವ ಅವರು, ‘ಹೊಸದೇನನ್ನೋ ಕಲಿಯುವ ಮತ್ತು ಅದಕ್ಕೆ ಸಂಭಾವನೆ ಪಡೆಯುವ ಜನರೆಂದರೆ ಅದು ಕಲಾವಿದರು ಮಾತ್ರ. ಅವರಿಗೆ ಮಾತ್ರ ಅಂಥದ್ದೊಂದು ಸೌಭಾಗ್ಯ. ನಾನು ಸಹ ಅವರಲ್ಲಿ ಒಬ್ಬಳು. ಈ ಚಿತ್ರದಲ್ಲಿ ಮೊದಲ ಬಾರಿಗೆ ಫೈಟ್, ಚೇಸ್ ಮಾಡುವುದಕ್ಕೆ ಅವಕಾಶ ಸಿಕ್ಕಿದೆ. ಎಷ್ಟು ಖುಷಿಯಾಗುತ್ತಿದೆ ಗೊತ್ತಾ?’ ಎನ್ನುತ್ತಾರೆ ಕೃತಿ.
ಸದ್ಯ ಕೃತಿ ಕೈಯಲ್ಲಿ ಹಲವು ಸಿನಿಮಾಗಳಿವೆ. ಮುಂದಿನ ವರ್ಷದ ಆರಂಭದಲ್ಲಿ ಪ್ರಭಾಸ್ ಜತೆಗಿನ ‘ಆದಿಪುರುಷ್’ ತೆರೆಗೆ ಬಂದರೆ, ಅಕ್ಷಯ್ ಕುಮಾರ್ ಜತೆ ಕಾಣಿಸಿಕೊಂಡಿರುವ ‘ಬಚ್ಚನ್ ಪಾಂಡೆ’ ಚಿತ್ರ ಸಹ ಬಿಡುಗಡೆಗೆ ಸಿದ್ಧವಿದೆ. ಹಾರರ್ ಶೈಲಿಯ ‘ಬೇಡಿಯಾ’ ಚಿತ್ರ ಶೂಟಿಂಗ್ ಮುಗಿದರೆ, ‘ಶೆಹಜಾದ’ ಚಿತ್ರದ ಶೂಟಿಂಗ್ ಕೆಲಸದಲ್ಲಿ ಕೃತಿ ಬಿಜಿಯಾಗಿದ್ದಾರೆ.