

‘ಜೀ ಲೇ ಜರಾ’ ಎಂಬ ಚಿತ್ರದಲ್ಲಿ ಪ್ರಿಯಾಂಕಾ ಚೋಪ್ರಾ, ಆಲಿಯಾ ಭಟ್ ಮತ್ತು ಕತ್ರೀನಾ ಕೈಫ್ ಜತೆಯಾಗಿ ನಟಿಸುತ್ತಿರುವ ಸುದ್ದಿ ಗೊತ್ತೇ ಇದೆ. ಈಗ ಕತ್ರೀನಾಗೆ ಜೋಡಿಯಾಗಿ ಅವರ ಪತಿ ವಿಕ್ಕಿ ಕೌಶಾಲ್ ಸಹ ಸೇರಿಕೊಳ್ಳುವ ಸಾಧ್ಯತೆ ಇದೆ. ಈ ಚಿತ್ರದಲ್ಲಿ ಮೂವರು ಜನಪ್ರಿಯ ನಟಿಯರು ನಟಿಸುತ್ತಿದ್ದಾರೆ ಎಂಬ ಸುದ್ದಿ ಹೊರಬೀಳುತ್ತಿದ್ದಂತೆ, ಚಿತ್ರದಲ್ಲಿ ನಾಯಕರಾಗಲು ಹಲವರು ಹಿಂದೇಟು ಹಾಕಿದರಂತೆ.
ಕಾರಣ, ಇದೊಂದು ನಾಯಕಿ ಪ್ರಧಾನ ಚಿತ್ರವಾಗಿರುತ್ತದೆ ಮತ್ತು ತಮಗೆ ಸ್ಕೋಪ್ ಕಡಿಮೆ ಇರುತ್ತದೆ ಎಂಬ ಕಾರಣಕ್ಕೆ ಹಲವು ನಟರು ಚಿತ್ರದಲ್ಲಿ ನಟಿಸುವುದಕ್ಕೆ ನೋ ಎಂದರಂತೆ. ಈಗ ಕತ್ರೀನಾ ಮತ್ತು ವಿಕ್ಕಿ ಕೌಶಾಲ್ ನಿಜಜೀವನದಲ್ಲಿ ಹೇಗೂ ಜೋಡಿಯಾಗಿದ್ದಾರೆ. ರೀಲ್ ಲೈಫ್ನಲ್ಲೂ ಈ ಜೋಡಿಯನ್ನೇ ಮುಂದುವರಿ ಸಿದರೆ ಹೇಗೆ ಎಂಬ ಐಡಿಯ ಚಿತ್ರತಂಡಕ್ಕೆ ಬಂದಿದೆ.
ಮೇಲಾಗಿ ಕತ್ರೀನಾ ಮತ್ತು ವಿಕ್ಕಿ ಇದುವರೆಗೂ ಯಾವ ಚಿತ್ರದಲ್ಲೂ ಕಾಣಿಸಿಕೊಂಡಿಲ್ಲವಾದ್ದರಿಂದ ಅವರಿಬ್ಬರೂ ಜತೆಗೆ ನಟಿಸಿದರೆ ಹೊಸದಾಗಿರುವುದಷ್ಟೇ ಅಲ್ಲ, ಚಿತ್ರಕ್ಕೆ ಬೋನಸ್ ಆಗುತ್ತದೆ ಎಂಬ ಕಾರಣಕ್ಕೆ ವಿಕ್ಕಿ ಮುಂದೆ ಪ್ರಸ್ತಾಪ ಇಡಲಾಗಿದೆ. ಈ ಪ್ರಸ್ತಾಪಕ್ಕೆ ವಿಕ್ಕಿ ಗ್ರೀನ್ ಸಿಗ್ನಲ್ ನೀಡುತ್ತಾರಾ? ಯಾರಿಗೆ ಗೊತ್ತು? ಹೆಂಡತಿ ಮೇಲಿನ ಪ್ರೀತಿಯ ಬಗ್ಗೆ ಒಪ್ಪಿಗೆ ಕೊಟ್ಟರೂ ಆಶ್ಚರ್ಯವಿಲ್ಲ.