

ಕನ್ನಡದಲ್ಲಿ ಇತಿಹಾಸ ಪುರುಷರ ಕುರಿತಾಗಿ ಹಲವು ಚಿತ್ರಗಳು ಬಂದಿವೆ. ಇಂಥದ್ದೊಂದು ಪರಂಪರೆ ಶುರುವಾಗುವುದಕ್ಕೆ ಕಾರಣರಾದವರಲ್ಲಿ ಡಾ. ರಾಜಕುಮಾರ್ ಸಹ ಒಬ್ಬರು ಎಂಬುದು ವಿಶೇಷ. ಕನ್ನಡದ ಮೊದಲ ಐತಿಹಾಸಿಕ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ‘ರಣಧೀರ ಕಂಠೀರವ’ ಚಿತ್ರದಲ್ಲಿ ರಾಜಕುಮಾರ್ ನಟಿಸಿದ್ದರು. ಅಷ್ಟೇ ಅಲ್ಲದೆ, ಈ ಚಿತ್ರದ ನಿರ್ವಣದಲ್ಲೂ ತೊಡಗಿಸಿಕೊಂಡಿದ್ದರು. ಹಾಗೆ ಅವರು ಚಿತ್ರ ನಿರ್ವಣದಲ್ಲಿ ತೊಡಗಿಸಿಕೊಳ್ಳುವುದಕ್ಕೂ ಕಾರಣವಿದೆ. 50ರ ದಶಕ ಕೊನೆಯಲ್ಲಿ ಕನ್ನಡ ಚಿತ್ರಗಳ ನಿರ್ಮಾಣ ಸಂಖ್ಯೆ ಕಡಿಮೆ ಇತ್ತು.
ಹೀಗಿರುವಾಗ, ಒಮ್ಮೆ ರಾಜಕುಮಾರ್, ಜಿ.ವಿ. ಅಯ್ಯರ್, ಟಿ.ಎನ್. ಬಾಲಕೃಷ್ಣ, ನರಸಿಂಹರಾಜು ಮುಂತಾದವರು ಒಟ್ಟಿಗೆ ಸೇರಿದ್ದ ಸಮಯದಲ್ಲಿ, ಮುಂದೇನು ಎಂಬ ಚರ್ಚೆ ಆಗಿದೆ. ಹೇಗಿದ್ದರೂ ಎಲ್ಲರೂ ರಂಗಭೂಮಿಯ ಹಿನ್ನೆಲೆಯವರಾದ್ದರಿಂದ, ಯಾಕೆ ನಾಟಕಗಳನ್ನು ಪ್ರದರ್ಶಿಸುವುದನ್ನು ಮುಂದುವರಿಸಬಾರದು ಎಂದು ಚರ್ಚೆಯಾಯಿತಂತೆ. ಆಗ ಹುಟ್ಟಿಕೊಂಡಿದ್ದೇ ಕನ್ನಡ ಚಲನಚಿತ್ರ ಕಲಾವಿದರ ಸಂಘ. ರಾಜಕುಮಾರ್, ಜಿ.ವಿ. ಅಯ್ಯರ್, ನರಸಿಂಹರಾಜು ಮತ್ತು ಬಾಲಕೃಷ್ಣ ನೇತೃತ್ವದಲ್ಲಿ ಪ್ರಾರಂಭವಾದ ಈ ಸಂಘವು ರಾಜ್ಯಾದ್ಯಂತ ಹಲವು ನಾಟಕಗಳನ್ನು ಪ್ರದರ್ಶಿಸಿ, ಮೂರು ಲಕ್ಷ ರೂ. ಸಂಗ್ರಹ ಮಾಡಿತಂತೆ. ಆ ಹಣದಲ್ಲಿ ನಿರ್ವಣವಾಗಿದ್ದೇ ‘ರಣಧೀರ ಕಂಠೀರವ’.
ಕಂಠೀರವ ನರಸರಾಜ ಒಡೆಯರ್ರ ಕುರಿತಾದ ಈ ಚಿತ್ರವು ಯಶಸ್ವಿಯಾಗಿ ನಂತರದ ವರ್ಷಗಳಲ್ಲಿ ಇನ್ನಷ್ಟು ಐತಿಹಾಸಿಕ ಚಿತ್ರಗಳಿಗೆ ಮುನ್ನುಡಿ ಬರೆಯಿತು. ಮುಂದೆ ‘ಇಮ್ಮಡಿ ಪುಲಕೇಶಿ’, ‘ಶ್ರೀ ಕೃಷ್ಣದೇವರಾಯ’, ‘ಮಯೂರ’ ಮುಂತಾದ ಐತಿಹಾಸಿಕ ಚಿತ್ರಗಳಲ್ಲಿ ಡಾ. ರಾಜಕುಮಾರ್ ನಟಿಸಿದ್ದಾರೆ. ಇದಲ್ಲದೆ, ‘ಜಗಜ್ಯೋತಿ ಬಸವೇಶ್ವರ’ ಚಿತ್ರದಲ್ಲಿ ರಾಜ ಬಿಜ್ಜಳನಾಗಿ, ‘ಕಿತ್ತೂರು ಚೆನ್ನಮ್ಮ’ ಚಿತ್ರದಲ್ಲಿ ರಾಜ ಮಲ್ಲಸರ್ಜನಾಗಿಯೂ ಅವರು ಅಭಿನಯಿಸಿದ್ದಾರೆ.