

ಬೆಂಗಳೂರು: ಯೋಗರಾಜ್ ನಿರ್ದೇಶನದ ಮರ್ಡರ್ ಮಿಸ್ಟರಿ ಕ್ರೈಮ್ ಥ್ರಿಲ್ಲರ್ ಸಿನಿಮಾ ‘ಇತ್ಯಾದಿ’. ಈಗಾಗಲೇ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಇತ್ತೀಚೆಗಷ್ಟೆ ಚಿತ್ರದ ಟ್ರೇಲರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಪ್ರಚಾರದ ಕೆಲಸ ಪ್ರಾರಂಭಿಸಿದೆ.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ನಟ ಪ್ರಥಮ್ ಚಿತ್ರತಂಡಕ್ಕೆ ಶುಭಹಾರೈಸಿದರು. ಚಿತ್ರದ ಬಗ್ಗೆ ಯೋಗರಾಜ್, ‘ಚಿತ್ರದ ಶೇಕಡಾ 75ರಷ್ಟು ಕಾಲ್ಪನಿಕ, ಉಳಿದವು ಸತ್ಯ. ಶೃಂಗೇರಿ ಬಳಿಯ ಬಿಳಿಗದ್ದೆ ಎಂಬ ಊರಿನಲ್ಲಿ ಕಲ್ಲು ದೇವರು ಇರುತ್ತದೆ. ಅದಕ್ಕೆ ತಾಯಿಯ ಹೊಟ್ಟೆಯಲ್ಲಿ ಹುಟ್ಟಬೇಕೆಂಬ ಆಸೆ. ಆದರೆ, ಕಲ್ಲಾಗಿಯೇ ಉಳಿಯುತ್ತದೆ. ಊರಿನ ಗರ್ಭಿಣಿಯರು ಮಧ್ಯರಾತ್ರಿ ಅಲ್ಲಿ ಪೂಜೆ ಮಾಡಿದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ. ಆದರೆ, ಅಲ್ಲಿಗೆ ಹೋದವರೆಲ್ಲಾ ಕೊಲೆಯಾಗುತ್ತಿರುತ್ತಾರೆ. ಹತ್ಯೆಗೆ ಕಾರಣವೇನು? ಮಾಡುತ್ತಿರುವವರು ಯಾರು? ಎಂಬುದರ ಸುತ್ತ ಚಿತ್ರದ ಕಥೆ ಸಾಗುತ್ತದೆ.
ಶೃಂಗೇರಿ, ಚಿಕ್ಕಮಗಳೂರು, ಆಗುಂಬೆ ಸುತ್ತಮುತ್ತಲಿನ ಸುಂದರ ತಾಣಗಳಲ್ಲಿ 62 ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇವೆ’ ಎಂದು ಮಾಹಿತಿ ನೀಡಿದರು. ನಾಯಕರಾದ ಮಹೇಶ್ ಮತ್ತು ಸಚಿನ್ ಪೊಲೀಸ್ ಅಧಿಕಾರಿಗಳಾಗಿ ನಟಿಸಿದ್ದು ಅವರಿಗೆ ಅರ್ಚನಾ ಉದಯಕುಮಾರ್ ಮತ್ತು ಡಾ. ಸೌಮ್ಯ ಜೋಡಿಯಾಗಿದ್ದಾರೆ. ಉಳಿದಂತೆ ಆಂಜನಪ್ಪ, ಆನಂದ ಬಾಬು, ಮಂಜುಳಾ, ಮಣಿ ತಾರಾಗಣದಲ್ಲಿದ್ದಾರೆ.