

ಚೆನ್ನೈ: ಈ ಮೇಲಿನ ಫೋಟೋದಲ್ಲಿರುವ ಹಾಸ್ಯ ನಟನ ಮುಖ ಪರಿಚಯ ಪ್ರತಿಯೊಬ್ಬ ಸಿನಿ ಪ್ರೇಮಿಗಳಿಗೂ ಇದ್ದೇ ಇರುತ್ತದೆ. ಆದರೆ, ಇವರ ಹೆಸರು ಬಹುತೇಕರಿಗೆ ತಿಳಿದಿಲ್ಲ. ಇವರ ಹೆಸರು ಯೋಗಿ ಬಾಬು. ಕಾಲಿವುಡ್ನಲ್ಲಿ ಸಿಕ್ಕಾಪಟ್ಟೆ ಹೆಸರು ಮಾಡಿರುವ ಹಾಸ್ಯ ಕಲಾವಿದ ಇವರು. ತಮ್ಮ ವಿಭಿನ್ನ ಮ್ಯಾನರಿಸಂನಿಂದಲೇ ಎಲ್ಲರ ಗಮನ ಸೆಳೆಯುವ ಯೋಗಿ ಬಾಬುಗೆ ಸದ್ಯ ಕಾಲಿವುಡ್ನಲ್ಲಿ ಬಹು ಬೇಡಿಕೆ ಇದೆ.
ಸೂಪರ್ ಸ್ಟಾರ್ ರಜನಿಕಾಂತ್ ಸೇರಿದಂತೆ ಸ್ಟಾರ್ ನಟರ ಜತೆ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾಗಿ ಬಾಕ್ಸ್ಆಫೀಸ್ನಲ್ಲಿ ಧೂಳೆಬ್ಬಿಸಿದ ಅರಣ್ಮನೈ 4 ಚಿತ್ರದಲ್ಲೂ ಯೋಗಿ ಬಾಬು ನಟಿಸಿದ್ದಾರೆ. ಇದರ ಬೆನ್ನಲ್ಲೇ ಯೋಗಿ ಬಾಬು ಅವರ ಕೈವಾಸಂ ಗಂಗುವ, ಗೋಟ್, ಅಂಡಗನ್, ಮೆಡಿಕಲ್ ಮಿರಾಕಲ್ ಚಿತ್ರಗಳು ಸಹ ಬಿಡಗಡೆಗೆ ಸಜ್ಜಾಗುತ್ತಿವೆ.
ತೆರೆಯ ಮೂಲಕ ಜನರನ್ನು ರಂಜಿಸುತ್ತಲೇ ಇರುವ ನಟ ಯೋಗಿ ಬಾಬು ಅವರ ಸಂಭಾವನೆಯ ವಿವರ ಇದೀಗ ಹೊರಬಿದ್ದಿದ್ದು, ಟಾಕ್ ಆಫ್ ದಿ ಟೌನ್ ಆಗಿದೆ. ಯೋಗಿ ಬಾಬು ಒ0ದು ದಿನಕ್ಕೆ 12 ಲಕ್ಷ ರೂ. ವರೆಗೆ ಸಂಭಾವನೆ ಪಡೆಯುತ್ತಿದ್ದಾರಂತೆ. ಈ ಮಾಹಿತಿಯನ್ನು ಖ್ಯಾತ ಹಿರಿಯ ಪತ್ರಕರ್ತ ಬಿಸ್ಮಿ ಅವರು ಯೂಟ್ಯೂಬ್ ಪೇಜ್ನಲ್ಲಿ ನೀಡಿರುವುದು ಗಮನಾರ್ಹವಾಗಿದೆ.
ಅಂದಹಾಗೆ ಯೋಗಿ ಬಾಬು ಅವರ ನಟನಾ ವೃತ್ತಿಜೀವನವು ತಮಿಳು ಕಿರುತೆರೆ ಹಾಸ್ಯ ಸರಣಿ ಲೊಲ್ಲು ಸಭಾ (2004) ದಿಂದ ಪ್ರಾರಂಭವಾಯಿತು. ಇದು ತಮಿಳು ಚಲನಚಿತ್ರಗಳು ಮತ್ತು ಕಾರ್ಯಕ್ರಮಗಳನ್ನು ವಿಡಂಬನೆ ಮಾಡುವ ಕಾರ್ಯಕಮವಾಗಿದ್ದು, ತುಂಬಾ ಯಶಸ್ಸು ಗಳಿಸಿತು. 2009ರಲ್ಲಿ ಯೋಗಿ ಚಿತ್ರದ ಮೂಲಕ ನಟನಾಗಿ ಸಿನಿಮಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು. ಯೋಗಿ ಅವರು ಅಲ್ಪಾವಧಿಯಲ್ಲಿ 177ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಕಾಣಿಸಿಕೊಂಡರು ಮತ್ತು ತಮಿಳು ಚಲನಚಿತ್ರೋದ್ಯಮದಲ್ಲಿ ಪ್ರಮುಖ ಹಾಸ್ಯನಟರಾಗಿ ತಮ್ಮನ್ನು ತಾವು ಸ್ಥಾಪಿಸಿಕೊಂಡರು.
ಯೋಗಿ ಅವರ ಪ್ರಮುಖ ಸಿನಿಮಾಗಳೆಂದರೆ, ಆಂಡವನ್ ಕಡತಲೈ (2016), ಕೋಲಮಾವು ಕೋಕಿಲಾ (2018), ಪರಿಯೇರುಮ್ ಪೆರುಮಾಳ್ (2018), ಗೂರ್ಖಾ (2019) ಮತ್ತು ಮಂಡೇಲಾ (2021). ಚೆನ್ನೈ ಎಕ್ಸ್‌ಪ್ರೆಸ್ (2013) ಸಿನಿಮಾದಲ್ಲಿ ಬಾಲಿವುಡ್ ಬಾದ್ಶಾ ಶಾರುಖ್ ಖಾನ್ ಜೊತೆಗೂ ಯೋಗಿ ನಟಿಸಿದ್ದಾರೆ.
ವೈಯಕ್ತಿಕ ಜೀವನಕ್ಕೆ ಬರುವುದಾದರೆ, 2020ರ ಫೆಬ್ರವರಿ 5ರಂದು ಬಾಬು ತಿರುಟ್ಟಣಿಯಲ್ಲಿ ಮಂಜು ಭಾರ್ಗವಿಯನ್ನು ವಿವಾಹವಾದರು. ಬಾಬು ಅವರ ಹಾಸ್ಯ ಶೈಲಿ ಮತ್ತು ಆನ್-ಸ್ಕ್ರೀನ್ ವರ್ಚಸ್ಸು ಅವರಿಗೆ ಅತ್ಯುತ್ತಮ ಹಾಸ್ಯನಟನೆಗಾಗಿ SIIMA ಪ್ರಶಸ್ತಿ ಸೇರಿದಂತೆ ಹಲವಾರು ಪುರಸ್ಕಾರಗಳನ್ನು ತಂದುಕೊಟ್ಟಿದೆ. (ಏಜೆನ್ಸೀಸ್)