

ನವದೆಹಲಿ: ಬಹುಭಾಷಾ ನಟಿ ರಶ್ಮಿಕಾ ಮಂದಣ್ಣರ ಡೀಪ್ ಫೇಕ್ ವಿಡಿಯೋ ಪ್ರಕರಣ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸಂಚಲನ ಮೂಡಿಸಿದ ಬೆನ್ನಲ್ಲೇ ಅವರದ್ದೇ ಮತ್ತೊಂದು ಡೀಪ್ ಫೇಕ್ ವಿಡಿಯೋ ವೈರಲ್ ಆಗುತ್ತಿದೆ. ಅ.23ರಂದೇ ವಿಡಿಯೋ ಪೋಸ್ಟ್ ಮಾಡಲಾಗಿದ್ದು, ಸದ್ಯ ರಶ್ಮಿಕಾ ವಿಚಾರ ಹೆಚ್ಚು ಚರ್ಚೆಯಾಗುತ್ತಿರುವುದರಿಂದ ವಿಡಿಯೋ ಟ್ರೆಂಡಿಂಗ್ ಆಗಿದೆ.
ಕೆಲವು ದಿನಗಳ ಹಿಂದೆ ರಶ್ಮಿಕಾರ ಡೀಪ್ ಫೇಕ್ ವಿಡಿಯೋ ವೈರಲ್ ಆಗಿತ್ತು. ಝರಾ ಪಟೇಲ್ ಎಂಬಾಕೆಯ ಒರಿಜಿನಲ್ ವಿಡಿಯೋಗೆ ಡೀಪ್ ಫೇಕ್ ತಂತ್ರಜ್ಞಾನದ ಮೂಲಕ ರಶ್ಮಿಕಾ ಮುಖವನ್ನು ಎಡಿಟ್ ಮಾಡಿ ಅಶ್ಲೀಲ ಹರಿಬಿಟ್ಟಿದ್ದರು. ಇದು ಎಲ್ಲಡೆ ವೈರಲ್ ಆಗಿ, ಸಾಕಷ್ಟು ಚರ್ಚೆಯಾಗುತ್ತಿದ್ದು, ರಶ್ಮಿಕಾ ಗಮನಕ್ಕೂ ಬಂದಿದ್ದು, ಆತಂಕ ವ್ಯಕ್ತಪಡಿಸಿದ್ದಾರೆ. ಇದೊಂದು ಆಘಾತಕಾರಿ ಬೆಳವಣಿಗೆಯಾಗಿದ್ದು, ಅನೇಕ ಗಣ್ಯ ವ್ಯಕ್ತಿಗಳು ಇದನ್ನು ಖಂಡಿಸಿದ್ದಾರೆ. ಇದು ಕೇಂದ್ರ ಸರ್ಕಾರದ ಗಮನಕ್ಕೂ ಬಂದಿದ್ದು, ಸಾಮಾಜಿಕ ಜಾಲತಾಣ ಬಳಸುವವರಿಗೆ ಕೆಲವೊಂದು ಕಾನೂನು ನಿಯಮಗಳ ಎಚ್ಚರಿಕೆಯನ್ನು ನೀಡಿದೆ.
ಸದ್ಯ ವೈರಲ್ ಆಗಿರುವ ವಿಡಿಯೋದಲ್ಲಿ ಕನ್ನಡಿ ಮುಂದೆ ನಿಂತು ತನ್ನನ್ನು ನೋಡುತ್ತಿರುವ ಯುವತಿಯ ಮುಖಕ್ಕೆ ಡೀಪ್ ಫೇಕ್ ಟೆಕ್ನಾಲಜಿ ಮೂಲಕ ರಶ್ಮಿಕಾ ಮುಖವನ್ನು ಎಡಿಟ್ ಮಾಡಲಾಗಿದೆ. ಕ್ರಶ್ ಮಿಕಾ ಹೆಸರಿನ ಇನ್ಸ್ಟಾಗ್ರಾಂ ಖಾತೆಯಲ್ಲಿ ಅ.23ರಂದು ವಿಡಿಯೋ ಪೋಸ್ಟ್ ಮಾಡಲಾಗಿದ್ದು, 2 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ.
ಡೀಪ್ ಫೇಕ್ ಬಗ್ಗೆ ರಶ್ಮಿಕಾ ಹೇಳಿದ್ದೇನು? ಝರಾ ಪಟೇಲ್ ವಿಡಿಯೋ ತಮ್ಮ ಮುಖವನ್ನು ಎಡಿಟ್ ಮಾಡಿದ ವೈರಲ್ ವಿಡಿಯೋ ಕುರಿತು ಸ್ವತಃ ರಶ್ಮಿಕಾ ಮಂದಣ್ಣ ಧ್ವನಿ ಎತ್ತಿದ್ದರು. ಈ ರೀತಿಯ ವಿಡಿಯೋ ಆನ್ಲೈನ್ನಲ್ಲಿ ಹರಿದಾಡುತ್ತಿರುವುದು ಬಗ್ಗೆ ಮಾತನಾಡಲು ನನಗೆ ತುಂಬಾ ಬೇಜಾರಾಗಿದೆ. ತಂತ್ರಜ್ಞಾನವನ್ನು ಈ ರೀತಿಯಾಗಿ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ನಿಜಕ್ಕೂ ಭಯಾನಕ ಕೃತ್ಯ. ಇಂದು ನಾನೊಬ್ಬ ಮಹಿಳೆ ಮತ್ತು ನಟಿಯಾಗಿ ನನ್ನ ಜತೆ ನಿಂತಿರುವ ನನ್ನ ಫ್ರೆಂಡ್ಸ್ ಮತ್ತು ಕುಟುಂಬವೇ ನನಗೆ ಧೈರ್ಯ ಮತ್ತು ಸ್ಥೈರ್ಯ. ಒಂದು ವೇಳೆ ನಾನು ಶಾಲೆ ಅಥವಾ ಕಾಲೇಜಿಗೆ ಹೋಗುತ್ತಿದ್ದಾಗ ಈ ರೀತಿ ಏನಾದರೂ ಆಗಿದ್ದರೆ ಅದನ್ನ ಹೇಗೆ ಎದುರಿಸುತ್ತಿದ್ದೆನೋ ನನಗೆ ಗೊತ್ತಿಲ್ಲ. ಈ ರೀತಿಯ ಕೃತ್ಯಗಳ ವಿರುದ್ಧ ನಾವು ಒಗ್ಗಟ್ಟಾಗಿ ಹೋರಾಡಬೇಕು. ಈ ರೀತಿ ತಮ್ಮ ಗುರುತನ್ನು ಮರೆಮಾಚಿ ವಿಡಿಯೋ ಹರಿಬಿಟ್ಟಿರುವ ಕಳ್ಳರನ್ನ ಪತ್ತೆ ಮಾಡಬೇಕು ಎಂದು ಪ್ರತಿಕ್ರಿಯಿಸಿದ್ದರು.
ಅಮಿತಾಭ್ ಆಕ್ರೋಶ
ಸದ್ಯ ರಶ್ಮಿಕಾರ ಡೀಪ್ ಫೇಕ್ ವಿಡಿಯೋವನ್ನು ಬಿಗ್ ಬಿ ಅಮಿತಾಬ್ ಬಚ್ಚನ್ ಕೂಡ ಖಂಡಿಸಿದ್ದಾರೆ. ನಕಲಿ ವಿಡಿಯೋ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಬಚ್ಚನ್ ಆಗ್ರಹಿಸಿದ್ದಾರೆ. ದೇಶದಲ್ಲಿ ಫೇಕ್‌ಗಳನ್ನು ಎದುರಿಸಲು ಕಾನೂನು ಮತ್ತು ನಿಯಂತ್ರಕ ಚೌಕಟ್ಟನ್ನು ರೂಪಿಸಬೇಕು ಎಂದು ಪತ್ರಕರ್ತರೊಬ್ಬರು ‘x’ನಲ್ಲಿ ಒತ್ತಾಯಿಸಿದ್ದು, ಇದನ್ನು ರಿಪೋಸ್ಟ್ ಮಾಡುವ ಮೂಲಕ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅಮಿತಾಬ್ ಬಚ್ಚನ್ ಒತ್ತಾಯಿಸಿದ್ದರು.
ಕೇಂದ್ರ ಸರ್ಕಾರ ಹೇಳಿದ್ದೇನು?
ರಶ್ಮಿಕಾ ವಿಡಿಯೋ ವೈರಲ್ ಆದ ಬೆನ್ನಲ್ಲೇ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಸಾಮಾಜಿಕ ಜಾಲತಾಣ ವೇದಿಕೆಗಳಿಗೆ ಕೆಲವೊಂದಿಷ್ಟು ಸಲಹೆಗಳನ್ನು ನೀಡಿದ್ದು, ಡೀಪ್‌ಫೇಕ್‌ಗಳ ಮೇಲಿನ ಕಾನೂನು ನಿಬಂಧನೆಗಳು, ಅವುಗಳ ರಚನೆ ಮತ್ತು ಪ್ರಸಾರಗಳ ಮೇಲಿನ ದಂಡಗಳನ್ನು ಸಚಿವಾಲಯ ಒತ್ತಿಹೇಳಿದೆ. ಮಾಹಿತಿ ತಂತ್ರಜ್ಞಾನ ಕಾಯಿದೆ 2000, ಸೆಕ್ಷನ್ 66ಡಿ ಅನ್ನು ಸರ್ಕಾರದ ಉಲ್ಲೇಖಿಸಿದ್ದು, ಕಂಪ್ಯೂಟರ್ ಸಂಪನ್ಮೂಲವನ್ನು ಬಳಸಿಕೊಂಡು ವ್ಯಕ್ತಿಗತವಾಗಿ ವಂಚನೆ ಮಾಡಿದರೆ ಅಂಥವರಿಗೆ ವಿಧಿಸುವ ಶಿಕ್ಷೆಯನ್ನು ಈ ಸೆಕ್ಷನ್ ಒಳಗೊಂಡಿದೆ. ಇದರ ಅರ್ಥ ಯಾವುದೇ ಸಂವಹನ ಸಾಧನ ಅಥವಾ ಕಂಪ್ಯೂಟರ್ ಸಂಪನ್ಮೂಲಗಳನ್ನು ಬಳಸಿಕೊಂಡು ವ್ಯಕ್ತಿಗತಗೊಳಿಸುವ ಮೂಲಕ ವಂಚನೆ ಮಾಡಿದವರಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 1 ಲಕ್ಷ ರೂಪಾಯಿಗಳವರೆಗೆ ದಂಡವನ್ನು ವಿಧಿಸಬಹುದಾಗಿದೆ ಎಂದು ಎಚ್ಚರಿಸಿದೆ.
ಪ್ರಕರಣ ದಾಖಲು
ರಶ್ಮಿಕಾರ ಡೀಪ್ಫೇಕ್ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ ದಂಡ ಸಂಹಿತೆಯ ಸೆಕ್ಷನ್ 465, 469, ಮಾಹಿತಿ ತಂತ್ರಜ್ಞಾನ ಕಾಯಿದೆ 2000ರ ಸೆಕ್ಷನ್ 66ಸಿ ಮತ್ತು 66ಇ ಅಡಿಯಲ್ಲಿ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ತನಿಖೆ ಮಾಡಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. (ಏಜೆನ್ಸೀಸ್)