ನವದೆಹಲಿ: ಬಹುಭಾಷಾ ನಟಿ ರಶ್ಮಿಕಾ ಮಂದಣ್ಣರ ಡೀಪ್ ಫೇಕ್ ವಿಡಿಯೋ ಪ್ರಕರಣ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸುತ್ತಿದೆ. ಝರಾ ಪಟೇಲ್ ಎಂಬಾಕೆಯ ವಿಡಿಯೋಗೆ ಡೀಪ್ ಫೇಕ್ ತಂತ್ರಜ್ಞಾನದ ಮೂಲಕ ರಶ್ಮಿಕಾ ಮುಖವನ್ನು ಎಡಿಟ್ ಮಾಡಿ ಅಶ್ಲೀಲ ವಿಡಿಯೋವನ್ನು ಹರಿಬಿಟ್ಟಿದ್ದು, ಎಲ್ಲಡೆ ವೈರಲ್ ಆಗಿ, ಸಾಕಷ್ಟು ಚರ್ಚೆಯಾಗುತ್ತಿದೆ. ಇದೊಂದು ಆಘಾತಕಾರಿ ಬೆಳವಣಿಗೆಯಾಗಿದ್ದು, ಅನೇಕ ಗಣ್ಯ ವ್ಯಕ್ತಿಗಳು ಇದನ್ನು ಖಂಡಿಸಿದ್ದಾರೆ. ಇದು ಕೇಂದ್ರ ಸರ್ಕಾರದ ಗಮನಕ್ಕೂ ಬಂದಿದ್ದು, ಸಾಮಾಜಿಕ ಜಾಲತಾಣ ಬಳಸುವವರಿಗೆ ಕೆಲವೊಂದು ಕಾನೂನು ನಿಯಮಗಳನ್ನು ಸರ್ಕಾರ ನೆನಪು ಮಾಡಿದೆ.
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಸಾಮಾಜಿಕ ಜಾಲತಾಣ ವೇದಿಕೆಗಳಿಗೆ ಕೆಲವೊಂದಿಷ್ಟು ಸಲಹೆಗಳನ್ನು ನೀಡಿದ್ದು, ಡೀಪ್‌ಫೇಕ್‌ಗಳ ಮೇಲಿನ ಕಾನೂನು ನಿಬಂಧನೆಗಳು, ಅವುಗಳ ರಚನೆ ಮತ್ತು ಪ್ರಸಾರಗಳ ಮೇಲಿನ ದಂಡಗಳನ್ನು ಸಚಿವಾಲಯ ಒತ್ತಿಹೇಳಿದೆ.
ಮಾಹಿತಿ ತಂತ್ರಜ್ಞಾನ ಕಾಯಿದೆ 2000, ಸೆಕ್ಷನ್ 66ಡಿ ಅನ್ನು ಸರ್ಕಾರದ ಉಲ್ಲೇಖಿಸಿದ್ದು, ಕಂಪ್ಯೂಟರ್ ಸಂಪನ್ಮೂಲವನ್ನು ಬಳಸಿಕೊಂಡು ವ್ಯಕ್ತಿಗತವಾಗಿ ವಂಚನೆ ಮಾಡಿದರೆ ಅಂಥವರಿಗೆ ವಿಧಿಸುವ ಶಿಕ್ಷೆಯನ್ನು ಈ ಸೆಕ್ಷನ್ ಒಳಗೊಂಡಿದೆ. ಇದರ ಅರ್ಥ ಯಾವುದೇ ಸಂವಹನ ಸಾಧನ ಅಥವಾ ಕಂಪ್ಯೂಟರ್ ಸಂಪನ್ಮೂಲಗಳನ್ನು ಬಳಸಿಕೊಂಡು ವ್ಯಕ್ತಿಗತಗೊಳಿಸುವ ಮೂಲಕ ವಂಚನೆ ಮಾಡಿದವರಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 1 ಲಕ್ಷ ರೂಪಾಯಿಗಳವರೆಗೆ ದಂಡವನ್ನು ವಿಧಿಸಬಹುದಾಗಿದೆ.
ರಶ್ಮಿಕಾ ಮಂದಣ್ಣ ಅವರ ಡೀಪ್ ಫೇಕ್ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿರುವ ನಡುವೆಯೇ ಕೇಂದ್ರ ಸರ್ಕಾರದಿಂದ ಈ ಮಹತ್ವದ ಸಲಹೆ ಬಂದಿದೆ. ಇನ್ನು ಮುಂದೆ ಯಾರೇ ಆಗಲಿ, ವ್ಯಕ್ತಿಯ ಗೌರವಕ್ಕೆ ಧಕ್ಕೆ ತರುವಂತಹ ಅಥವಾ ಮಾನಹಾನಿ ಉಂಟು ಮಾಡುವಂತಹ ವಿಡಿಯೋಗಳನ್ನು ಎಡಿಟ್ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಲ್ಲಿ, ಅಂಥವರು ಕಾನೂನಿನ ಅಡಿಯಲ್ಲಿ ಕಠಿಣ ಶಿಕ್ಷೆ ಎದುರಿಸಬೇಕಾಗುತ್ತದೆ.
ತುಂಬಾ ಡೀಪ್ ಆಗಿ ಎದೆ ಸೀಳು ಕಾಣುವಂತಹ ಮತ್ತು ತುಂಬಾ ಬಿಗಿ ಉಡುಪು ಧರಿಸಿದ ಬ್ರಿಟಿಷ್-ಇಂಡಿಯನ್ ಇನ್ಫ್ಲುಯೆನ್ಸರ್ ಝರಾ ಪಟೇಲ್ ಅವರ ಅಸಲಿ ವಿಡಿಯೋಗೆ ನಟಿ ರಶ್ಮಿಕಾ ಅವರ ಮುಖವನ್ನು ಡೀಫ್ ಫೇಕ್ ತಂತ್ರಜ್ಞಾನದ ಮೂಲಕ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ, ಕೋಟ್ಯಂತರ ವೀಕ್ಷಣೆಯನ್ನು ಪಡೆದುಕೊಂಡಿದೆ.
ರಶ್ಮಿಕಾ ಹೇಳಿದ್ದೇನು?
ಈ ವಿಡಿಯೋ ಸ್ವತಃ ರಶ್ಮಿಕಾ ಮಂದಣ್ಣ ಅವರ ಗಮನಕ್ಕೆ ಬಂದಿದ್ದು, ಇದರಿಂದ ಮನನೊಂದಿರುವ ರಶ್ಮಿಕಾ, ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ತಮ್ಮ ಅಧಿಕೃತ ಇನ್ಸ್ಟಾಗ್ರಾಂ ಖಾತೆಯಲ್ಲಿ ಸ್ಟೋರಿ ಒಂದನ್ನು ಪೋಸ್ಟ್ ಮಾಡಿದ್ದು, ಈ ರೀತಿಯ ವಿಡಿಯೋ ಆನ್ಲೈನ್ನಲ್ಲಿ ಹರಿದಾಡುತ್ತಿರುವುದು ಬಗ್ಗೆ ಮಾತನಾಡಲು ನನಗೆ ತುಂಬಾ ಬೇಜಾರಾಗಿದೆ. ತಂತ್ರಜ್ಞಾನವನ್ನು ಈ ರೀತಿಯಾಗಿ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ನಿಜಕ್ಕೂ ಭಯಾನಕ ಕೃತ್ಯ. ಇಂದು ನಾನೊಬ್ಬ ಮಹಿಳೆ ಮತ್ತು ನಟಿಯಾಗಿ ನನ್ನ ಜತೆ ನಿಂತಿರುವ ನನ್ನ ಫ್ರೆಂಡ್ಸ್ ಮತ್ತು ಕುಟುಂಬವೇ ನನಗೆ ಧೈರ್ಯ ಮತ್ತು ಸ್ಥೈರ್ಯ. ಒಂದು ವೇಳೆ ನಾನು ಶಾಲೆ ಅಥವಾ ಕಾಲೇಜಿಗೆ ಹೋಗುತ್ತಿದ್ದಾಗ ಈ ರೀತಿ ಏನಾದರೂ ಆಗಿದ್ದರೆ ಅದನ್ನ ಹೇಗೆ ಎದುರಿಸುತ್ತಿದ್ದೆನೋ ನನಗೆ ಗೊತ್ತಿಲ್ಲ. ಈ ರೀತಿಯ ಕೃತ್ಯಗಳ ವಿರುದ್ಧ ನಾವು ಒಗ್ಗಟ್ಟಾಗಿ ಹೋರಾಡಬೇಕು. ಈ ರೀತಿ ತಮ್ಮ ಗುರುತನ್ನು ಮರೆಮಾಚಿ ವಿಡಿಯೋ ಹರಿಬಿಟ್ಟಿರುವ ಕಳ್ಳರನ್ನ ಪತ್ತೆ ಮಾಡಬೇಕು ಎಂದು ಪ್ರತಿಕ್ರಿಯಿಸಿದ್ದಾರೆ.
ಅಮಿತಾಭ್ ಆಕ್ರೋಶ
ಸದ್ಯ ರಶ್ಮಿಕಾರ ಡೀಪ್ ಫೇಕ್ ವಿಡಿಯೋವನ್ನು ಬಿಗ್ ಬಿ ಅಮಿತಾಬ್ ಬಚ್ಚನ್ ಕೂಡ ಖಂಡಿಸಿದ್ದಾರೆ. ನಕಲಿ ವಿಡಿಯೋ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಬಚ್ಚನ್ ಆಗ್ರಹಿಸಿದ್ದಾರೆ. ದೇಶದಲ್ಲಿ ಫೇಕ್‌ಗಳನ್ನು ಎದುರಿಸಲು ಕಾನೂನು ಮತ್ತು ನಿಯಂತ್ರಕ ಚೌಕಟ್ಟನ್ನು ರೂಪಿಸಬೇಕು ಎಂದು ಪತ್ರಕರ್ತರೊಬ್ಬರು ‘x’ನಲ್ಲಿ ಒತ್ತಾಯಿಸಿದ್ದು, ಇದನ್ನು ರಿಪೋಸ್ಟ್ ಮಾಡುವ ಮೂಲಕ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅಮಿತಾಬ್ ಬಚ್ಚನ್ ಒತ್ತಾಯಿಸಿದ್ದಾರೆ.
ಭಾರತೀಯರ ಸುರಕ್ಷತೆ ಮತ್ತು ವಿಶ್ವಾಸವನ್ನು ಖಚಿತಪಡಿಸಿಕೊಳ್ಳಲು ನರೇಂದ್ರ ಮೋದಿ ಸರ್ಕಾರ ಬದ್ಧವಾಗಿದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ನಿನ್ನೆ (ನ.06) ಹೇಳಿದ್ದಾರೆ.
ಇಷ್ಟೆಲ್ಲ ಆದರೂ ರಶ್ಮಿಕಾ ಮಂದಣ್ಣರ ನಕಲಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈ ಕ್ಷಣದಲ್ಲಿಯೂ ಹರಿದಾಡುತ್ತಿದೆ. (ಏಜೆನ್ಸೀಸ್)
Rashmika Deep Fake Video: ರಶ್ಮಿಕಾ ಮಂದಣ್ಣ ಫೇಕ್ ವೀಡಿಯೋ ವೈರಲ್…ಕಿಡಿ ಕಾರಿದ್ದೇಕೆ ಅಮಿತಾಬ್ ಬಚ್ಚನ್?