

ಬೆಂಗಳೂರು: ಪತ್ರಕರ್ತರಾಗಿ, ಕಲಾವಿದರಾಗಿ ಪರಿಚಿತರಾಗಿದ್ದ ಯತಿರಾಜ್ ಈಗ ನಿರ್ದೇಶಕರಾಗಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಅವರ ನಿರ್ದೇಶನದ 'ಸೀತಮ್ಮನ ಮಗ' ಎಂಬ ಚಿತ್ರ ಬಿಡುಗಡೆಯಾಗಿತ್ತು. 'ಮಾಯಾಮೃಗ' ಎಂಬ ಚಿತ್ರ ಬಿಡುಗಡೆಯ ಹಂತದಲ್ಲಿದೆ. ಇದೀಗ ಅವರ ಮೂರನೇ ಚಿತ್ರ 'ಬೊಂಬೆ ಹೇಳುತೈತೆ' ಸದ್ಯದಲ್ಲೇ ಆರಂಭವಾಗಲಿದೆ.
ಇದನ್ನೂ ಓದಿ: ಬಿಗ್ಬಿ ಅಮಿತಾಭ್ ಬಚ್ಚನ್ ಜತೆ ರಶ್ಮಿಕಾ ಮಂದಣ್ಣ ಜಗಳ!
'ರಾಜ್ಕುಮಾರ' ಚಿತ್ರದ 'ಬೊಂಬೆ ಹೇಳುತೈತೆ ... ಹಾಡಿನಿಂದ ಸ್ಫೂರ್ತಿಗೊಂಡಿರುವ ಈ ಚಿತ್ರದ ವಿಶೇಷತೆಯೆಂದರೆ, ಪುನೀತ್ ರಾಜ್‍ಕುಮಾರ್ ಅವರ ಪುತ್ಥಳಿಯ ಮೂಲಕ ಸಮಾಜಕ್ಕೆ ಸಂದೇಶ ಸಾರಲಾಗುತ್ತಿದೆ. ಕೇವಲ 15 ದಿನಗಳಲ್ಲಿ ಈ ಚಿತ್ರಕ್ಕೆ ಚಾಲನೆ ದೊರಕಿದೆ. ಕೆಲವು ದಿನಗಳ ಹಿಂದೆ ಯತಿರಾಜ್ ಅವರ ಮಗ ಪೃಥ್ವಿರಾಜ್ ಒಂದು ಕಥೆ ಹೇಳಿದರಂತೆ. ಅದನ್ನಿಟ್ಟುಕೊಂಡು ಚಿತ್ರಕಥೆ ಸಿದ್ಧಪಡಿಸಲಾಗಿದೆ. ಚಿತ್ರದ ಸಂಪೂರ್ಣ ಚಿತ್ರೀಕರಣ ಚನ್ನಪಟ್ಟಣದಲ್ಲಿ ನಡೆಯಲಿದ್ದು, ಅದರಲ್ಲೂ ವಿಶೇಷವಾಗಿ ಕಾವೇರಿ ಆರ್ಟ್ಸ್ ಅಂಡ್ ಕ್ರಾಫ್ಟ್ ಎಂಪೋರಿಯಂನಲ್ಲಿ ಚಿತ್ರೀಕರಣ ನಡೆಸಲು ಅನುಮತಿ ಸಿಕ್ಕಿದೆಯಂತೆ.
ಈ ಚಿತ್ರದಬಗ್ಗೆ ಮಾತನಾಡುವ ಯತಿರಾಜ್, 'ಇಲ್ಲಿ ನಂಬಿಕೆಯ ಪ್ರಶ್ನೆಯಿದೆ. ಸರಿ-ತಪ್ಪುಗಳ ಜಿಜ್ಞಾಸೆಯಿದೆ. ಮಮತೆ - ವಾತ್ಸಲ್ಯಗಳ ವೈರುಧ್ಯವಿದೆ. ಆಸೆ - ದುರಾಸೆಗಳ ಆಳ ಅಗಲವಿದೆ. ವಾಸ್ತವ ಲೋಕದ ಪರಿಚಯಯವಿದೆ. ಅಳುವಿದೆ.. ನಗುವಿದೆ. ಎಲ್ಲರೊಂದಿಗೆ ಬೆರೆಯುವ ವ್ಯಕ್ತಿ ಹೇಗೆ ಏಕಾಂಗಿಯಾಗುತ್ತಾನೆ? ಎಂಬುದೆ ಚಿತ್ರದ ಕೇಂದ್ರ ವಸ್ತು. ಚಿತ್ರದಲ್ಲಿ ಹಲವು ಪಾತ್ರಗಳಿದ್ದರೂ ತೆರೆಯ ಮೇಲೆ ಕಾಣುವುದು ಸಿದ್ದರಾಜು ಪಾತ್ರ ಮಾತ್ರ. ಆ ಪಾತ್ರದಲ್ಲಿ ನಾನೇ ಅಭಿನಯಿಸುತ್ತಿದ್ದೇನೆ. ಈ ಹಿಂದೆ ಒಂದೇ ಪಾತ್ರದ ಕೆಲವು ಚಿತ್ರಗಳು ಬಂದಿದೆಯಾದರೂ ನಮ್ಮ ಚಿತ್ರದ ಕಥೆ ಸಾಗುವ ರೀತಿ ಸ್ವಲ್ಪ ವಿಭಿನ್ನವಾಗಿದೆ' ಯತಿರಾಜ್.
'ಬೊಂಬೆ ಹೇಳುತೈತೆ' ಚಿತ್ರಕ್ಕೆ ಶ್ರೀಕಾಂತ್ ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದು, ವಿದ್ಯಾನಾಗೇಶ್ ಅವರ ಛಾಯಾಗ್ರಹಣವಿದೆ. ಈ ಚಿತ್ರವನ್ನು ಮಾರುತಿ ಪ್ರೊಡಕ್ಷನ್ಸ್ ಮೂಲಕ ಮಾರುತಿ ಪ್ರಸಾದ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.