

ಹೈದರಾಬಾದ್: ವಿಜಯ್ ದೇವರಕೊಂಡ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ “ಲೈಗರ್” ಬಾಕ್ಸ್ಆಫೀಸ್ನಲ್ಲಿ ನೆಲಕಚ್ಚಿದ್ದು, ಈ ವರ್ಷದ ಅತ್ಯಂತ ಕಳಪೆ ಸಿನಿಮಾಗಳಲ್ಲಿ ಒಂದೆನಿಸಿಕೊಂಡಿದೆ. ಈ ಸಿನಿಮಾವನ್ನು ಸ್ಟಾರ್ ನಿರ್ದೇಶಕ ಪುರಿ ಜಗನ್ನಾಥ್ ನಿರ್ದೇಶಿಸಿದ್ದು, ವಿಜಯ್ ಮತ್ತು ಅನನ್ಯಾ ಪಾಂಡೆ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಚಾರ್ಮಿ ಕೌರ್, ಪುರಿ ಮತ್ತು ಕರಣ್ ಜೋಹರ್ ಈ ಸಿನಿಮಾವನ್ನು ಜೊತೆಯಾಗಿ ನಿರ್ಮಾಣ ಮಾಡಿದ್ದಾರೆ.
ಲೈಗರ್ ಹೀನಾಯ ಸೋಲಿನಿಂದಾಗಿ ಅದೇ ಚಿತ್ರತಂಡದ ಮುಂದಿನ ಸಿನಿಮಾ ಜನ ಗಣ ಮನ ಸೆಟ್ಟೇರುವುದು ಅನುಮಾನವಾಗಿದೆ. ಲೈಗರ್ ಸಿನಿಮಾದ ಅನೇಕ ವಿತರಕರು ನಿರ್ದೇಶಕರನ್ನು ಭೇಟಿ ಮಾಡಿ, ತಮಗಾದ ನಷ್ಟವನ್ನು ತುಂಬಿಕೊಡುವಂತೆ ಕೇಳಲು ಮುಂದಾಗಿದ್ದಾರೆ.
ಲೈಗರ್ ಸಿನಿಮಾ ಸೋಲಿನಿಂದ ಕಂಗೆಟ್ಟಿರುವ ಪುರಿ ಜಗನ್ನಾಥ್, ಮುಂಬೈನಲ್ಲಿ ಬಾಡಿಗೆಗೆ ತೆಗೆದುಕೊಂಡಿದ್ದ ಅಪಾರ್ಟ್ಮೆಂಟ್ ಅನ್ನು ಖಾಲಿ ಮಾಡುವ ನಿರ್ಧಾರ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಸಮುದ್ರ ನೋಟ ಇರುವ 4ಬಿಎಚ್ಕೆ ಅಪಾರ್ಟ್ಮೆಂಟ್ನಲ್ಲಿ ಜಗನ್ನಾಥ್ ವಾಸಿಸುತ್ತಿದ್ದಾರೆ. ತಿಂಗಳಿಗೆ 10 ಲಕ್ಷ ರೂಪಾಯಿ ಬಾಡಿಗೆಯಂತೆ. ಅಲ್ಲದೆ, ಇತರೆ ನಿರ್ವಹಣೆ ವೆಚ್ಚಕ್ಕೂ ಲಕ್ಷಾಂತರ ರೂಪಾಯಿ ಆಗುತ್ತದೆ.
ಇದೀಗ ಲೈಗರ್ ಸಿನಿಮಾ ಸೋಲಿನಿಂದ ವಿತರಕರು ಬೆನ್ನು ಬಿದ್ದಿದ್ದಾರೆ. ಅಲ್ಲದೆ, ಬಾಲಿವುಡ್ ಯೋಜನೆಗೆ ಅರಂಭದಲ್ಲೇ ಹೊಡೆತ ಬಿದ್ದಿದ್ದು, ಬಾಡಿಗೆ ಹೊರೆಯಾಗುವ ಕಾರಣದಿಂದ ಅಪಾರ್ಟ್ಮೆಂಟ್ ಅನ್ನು ಖಾಲಿ ಮಾಡಲು ನಿರ್ದೇಶಕರು ಈಗ ಯೋಚಿಸುತ್ತಿದ್ದಾರೆ ಎಂದು ಹೇಳಲಾಗುತ್ತದೆ.
ಈಗಾಗಲೇ ಸ್ಯಾಟಲೈಟ್ ಮತ್ತು ಡಿಜಿಟಲ್ ರೈಟ್ಸ್‌ನಿಂದ ಲೈಗರ್ ಸಿನಿಮಾ ಭಾರಿ ಹಣವನ್ನು ಗಳಿಸಿರುವುದರಿಂದ ನಿರ್ದೇಶಕರಿಗೆ ನಷ್ಟವಾಗುವುದಿಲ್ಲವಾದರೂ, ಅವರು ಸ್ವಲ್ಪ ಸಮಯದವರೆಗೆ ಹೈದರಾಬಾದ್‌ಗೆ ಬಂದು ಜುಬಿಲಿ ಹಿಲ್ಸ್‌ನಲ್ಲಿರುವ ಅವರ ಐಕಾನಿಕ್ 'ಕೇವ್' ನಲ್ಲಿ ವಿಶ್ರಾಂತಿ ಪಡೆಯಲು ಬಯಸುತ್ತಿದ್ದಾರೆ ಮತ್ತು ತಮ್ಮ ಮಗ ಆಕಾಶ್ ಪುರಿಯೊಂದಿಗೆ ಮಾಡಲು ಬಯಸಿರುವ ಸಿನಿಮಾ ಮೇಲೆ ಗಮನ ಕೇಂದ್ರೀಕರಿಸಿದ್ದಾರೆ ಎಂದು ಹೇಳಲಾಗುತ್ತಿದೆ. (ಏಜೆನ್ಸೀಸ್)