

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಮಚ್ಚು, ಲಾಂಗ್, ಆ್ಯಕ್ಷನ್, ಹಾರರ್, ಥ್ರಿಲ್ಲರ್, ಮಸಾಲಾ ಸಿನಿಮಾಗಳ ನಡುವೆಯೂ ಆಗೊಮ್ಮೆ ಈಗೊಮ್ಮೆ ಕಾದಂಬರಿ ಆಧಾರಿತ ಚಿತ್ರಗಳು ಮೂಡಿಬರುತ್ತವೆ. ಅದೇ ಸಾಲಿಗೆ ಸೇರುವ ಸಿನಿಮಾ ‘ಮಗ್ಗಿ ಪುಸ್ತಕ’. ಎಚ್.ಸಿ. ಹರೀಶ್ ಅವರ ‘ಅವನಿ’ ಕಾದಂಬರಿ ಆಧಾರಿತ ಚಿತ್ರವಿದು. ದಸರಾ ಹಬ್ಬದ ಸಂಭ್ರಮದಲ್ಲಿ ಚಿತ್ರದ ಫಸ್ಟ್ ಲುಕ್ ಅನ್ನು ಮೈಸೂರಿನ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಾಶಯ ತಿಳಿಸಿದ್ದಾರೆ.
ಇದನ್ನೂ ಓದಿ : ಹೆಣ್ಣು ಮಗುವಿಗೆ ಜನ್ಮ ಕೊಟ್ಟ ನಟಿ ಗೌತಮಿ ಗೌಡ
ಕಾದಂಬರಿಕಾರಿ ಎಚ್.ಸಿ. ಹರೀಶ್ ಅವರೇ ‘ಮಗ್ಗಿ ಪುಸ್ತಕ’ ಚಿತ್ರಕ್ಕೆ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು’ ಚಿತ್ರದಲ್ಲಿ ಪ್ರವೀಣನ ಪಾತ್ರದಲ್ಲಿ ನಟಿಸಿದ್ದ ರಂಜನ್ ಸಜ್ಜು ಶ್ರೀ ರಕ್ಷಾ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಜತೆಗೆ ಮೈಸೂರು ರಮಾನಂದ, ರಂಗಾಯಣ ರಘು, ಗಿರಿಜಾ ಲೋಕೇಶ್, ಪ್ರಮೋದ್ ಶೆಟ್ಟಿ, ಮಿಮಿಕ್ರಿ ಗೋಪಿ, ಚಂದ್ರಪ್ರಭಾ, ವಾಣಿ, ಕೃಷ್ಣ, ವರದಾ, ಮೂಗು ಸುರೇಶ್ ಪ್ರಮುಖ ತಾರಾಗಣದಲ್ಲಿದ್ದಾರೆ.
ಮೈಸೂರು, ಮಂಗಳೂರು, ಎಚ್‌ಡಿ ಕೋಟೆ, ನಂಜನಗೂಡು, ಬೆಂಗಳೂರು ಸುತ್ತಮುತ್ತ ಚಿತ್ರದ ಶೂಟಿಂಗ್ ನಡೆಸಲಾಗಿದೆ. ನಂದಕುಮಾರ್ ಛಾಯಾಗ್ರಹಣ, ಯಶಸ್ ನಾಚಪ್ಪ ಸಂಗೀತ, ಶಿವಕುಮಾರ್ ಸಂಕಲನದಲ್ಲಿ ‘ಮಗ್ಗಿ ಪುಸ್ತಕ’ ಮೂಡಿಬಂದಿದೆ.