ಕಂಕುಳಲ್ಲಿ ಮಗು ಎತ್ಕೊಂಡು ಖ್ಯಾತ ನಟನ ಮನೆಯ ಬಾಗಿಲು ಬಡಿದ ಮಹಿಳೆ! ಬಲೆಗೆ ಬೀಳಿಸಲು ಖತರ್ನಾಕ್ ಪ್ಲಾನ್? Actor Bala

Actor Bala
Published on

ತಿರುವನಂತಪುರಂ: ಸದಾ ವಿವಾದಗಳಿಂದಲೇ ಸುದ್ದಿಯಾಗುವ ಮಲಯಾಳಂ ಚಿತ್ರರಂಗದ ಖ್ಯಾತ ನಟ ಬಾಲಾ ( Actor Bala ) ಅವರು ಕೆಲ ದಿನಗಳ ಹಿಂದೆ ಮಾಜಿ ಪತ್ನಿ ನೀಡಿದ ದೂರಿನ ಮೇರೆಗೆ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದರು. ಜಾಮೀನು ಪಡೆದು ತಮ್ಮ ಮನೆಯನ್ನು ತಲುಪಿದ ಬಳಿಕ ಬಾಲಾ ಹೊಸ ಹೊಸ ಆರೋಪಗಳನ್ನು ಮಾಡಿದ್ದಾರೆ.

ಯಾರೋ ನನ್ನನ್ನು ಬಲೆಗೆ ಬೀಳಿಸಲು ಪ್ರಯತ್ನಿಸುತ್ತಿದ್ದಾರೆ. ಮಗುವಿನೊಂದಿಗೆ ಮಹಿಳೆಯೊಬ್ಬಳು ತನ್ನ ಮನೆಗೆ ನುಗ್ಗಲು ಪ್ರಯತ್ನಿಸಿದಳು ಎಂದು ಬಾಲಾ ಹೇಳಿದ್ದಾರೆ. ಅಲ್ಲದೆ, ಅದಕ್ಕೆ ಸಂಬಂಧಸಿದ ಸಿಸಿಟಿವಿ ದೃಶ್ಯಾವಳಿಯನ್ನೂ ಸಹ ಬಿಡುಗಡೆ ಮಾಡಿದ್ದಾರೆ.

ಮಹಿಳೆಯೊಬ್ಬಳು ತನ್ನ ಮಗುವಿನೊಂದಿಗೆ ತಮ್ಮ ಮನೆಯ ಕಾಲಿಂಗ್ ಬೆಲ್ ಅನ್ನು ಬಾರಿಸುವ ವಿಡಿಯೋವನ್ನು ಬಾಲಾ ತಮ್ಮ ಫೇಸ್​ಬುಕ್​ನಲ್ಲಿ ಹಂಚಿಕೊಂಡಿದ್ದಾರೆ. ಮಹಿಳೆಯ ಜತೆ ಪುರುಷನೊಬ್ಬ ಕೂಡ ಇದ್ದಾನೆ. ಮುಂಜಾನೆ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಕಾಲಿಂಗ್​ ಬೆಲ್​ ಮಾಡಿದ್ದಲ್ಲದೆ, ಬಾಗಿಲು ಬಡಿದು ತೆರೆಯಲು ಯತ್ನಿಸಿದರು ಎಂದು ಬಾಲಾ ಹೇಳುತ್ತಾರೆ.

Actor Bala

ಈ ಸಮಯದಲ್ಲಿ ಯಾರೂ ಕೂಡ ಇನ್ನೊಬ್ಬರ ಮನೆಗೆ ಬಂದು ಬಾಗಿಲು ಬಡಿಯಲು ಪ್ರಯತ್ನಿಸುವುದಿಲ್ಲ. ನನ್ನನ್ನು ಬಲೆಗೆ ಬೀಳಿಸಲೆಂದೇ ಈ ರೀತಿ ಮಾಡಲಾಗಿದೆ. ಇದರ ಹಿಂದೆ ಒಂದು ದೊಡ್ಡ ಷಡ್ಯಂತ್ರವಿದೆ ಎಂದು ಬಾಲಾ ಆರೋಪಿಸಿದ್ದಾರೆ. ನಾನೊಬ್ಬ ಔಷಧಿ ತೆಗೆದುಕೊಳ್ಳುವ ವ್ಯಕ್ತಿಯಾಗಿದ್ದು, ಈ ರೀತಿಯಾಗಿ ಜನರು ತೊಂದರೆ ನೀಡುವುದು ಒಳ್ಳೆಯದಲ್ಲ ಎಂದು ಹೇಳಿದ್ದಾರೆ.

ಬಾಲಾ ವಿರುದ್ಧ ಮಗಳು ಆಕ್ರೋಶ ಅಂದಹಾಗೆ ಬಾಲಾ ಅವರು ಗಾಯಕಿ ಅಮೃತಾ ಸುರೇಶ್​ ಅವರೊಂದಿಗೆ 2019ರಲ್ಲಿ ದಾಂಪತ್ಯ ಜೀವನ ಮುರಿದುಕೊಂಡರು. ಅಲ್ಲದೆ, ಹಲವಾರು ಸಂದರ್ಶನಗಳಲ್ಲಿ ಮಾಜಿ ಪತ್ನಿ ತನ್ನ ಮಗಳನ್ನು ನೋಡಲು, ಮಾತನಾಡಿಸಲು ಬಿಡುತ್ತಿಲ್ಲ. ಒಬ್ಬ ತಂದೆಯಾಗಿ ನನಗೆ ನನ್ನ ಪುತ್ರಿಯನ್ನು ನೋಡುವ ಹಕ್ಕಿದೆ. ಆದ್ರೆ, ಆಕೆಯ ಕುಟುಂಬಸ್ಥರು ಇದ್ಯಾವುದಕ್ಕೂ ಅನುಮತಿ ನೀಡುತ್ತಿಲ್ಲ. ನನ್ನಿಂದ ಅಪ್ಪನ ಹಕ್ಕನ್ನು ಕಸಿಯುತ್ತಿದ್ದಾರೆ ಎಂದು ದೂರಿದ್ದರು. ಈ ವಿಷಯದಿಂದ ತೀವ್ರ ಬೇಸತ್ತ ಮಗಳು, ವಿಡಿಯೋ ಸಂದೇಶದ ಮೂಲಕ ನಿನ್ನ ಪ್ರೀತಿಸಲು ಒಂದೇ ಒಂದು ಕಾರಣವೂ ಇಲ್ಲ ಎಂದು ಈ ಹಿಂದೆ ನೇರವಾಗಿ ತಂದೆಯ ಮುಖಕ್ಕೆ ಹೊಡೆದಂತೆ ಹೇಳಿದ್ದಳು. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್​ ಆಗಿತ್ತು.

ಅವರು (ಬಾಲಾ) ಅನೇಕ ಸಂದರ್ಶನಗಳಲ್ಲಿ ನನ್ನನ್ನು ಪ್ರೀತಿಸ್ತೀನಿ, ಉಡುಗೊರೆಗಳನ್ನು ಕಳುಹಿಸುತ್ತೀನಿ ಎಂದೆಲ್ಲಾ ಹೇಳಿದ್ದಾರೆ. ಅಸಲಿಗೆ ಇದ್ಯಾವುದೂ ನಿಜವಲ್ಲ. ನನ್ನಪ್ಪನನ್ನು ಪ್ರೀತಿಸಲು ನನಗೆ ಯಾವುದೇ ಕಾರಣವಿಲ್ಲ. ಆತ ನನಗೆ ಹಾಗೂ ನನ್ನ ಕುಟುಂಬಕ್ಕೆ ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ನೀಡಿದ್ದಾನೆ. ನಾನು ಚಿಕ್ಕವಳಿದ್ದಾಗ ಅವರು ಕುಡಿದು ಮನೆಗೆ ಬಂದು ನನ್ನ ತಾಯಿಯನ್ನು ಹೊಡೆಯುತ್ತಿದ್ದರು. ನಾನಾಗ ಕೇವಲ ಮಗು, ಏನೂ ಮಾಡಲು ಸಾಧ್ಯವಿರಲಿಲ್ಲ. ಇಲ್ಲಿಯವರೆಗೂ ನನ್ನ ತಾಯಿಯೇ ನನ್ನನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ ಮತ್ತು ಒಮ್ಮೆಯೂ ನನ್ನನ್ನು ಹೊಡೆದಿಲ್ಲ, ಬಡಿದಿಲ್ಲ. ನನ್ನಪ್ಪ ನನ್ನಮ್ಮನಿಗೆ ತುಂಬಾ ಕಿರುಕುಳ ನೀಡುತ್ತಿದ್ದರು. ಕಂಠಪೂರ್ತಿ ಕುಡಿದು ಮನೆಗೆ ಬಂದು ಗಾಜಿನ ಬಾಟಲಿಯನ್ನು ಎಸೆದ ಘಟನೆ ನನಗೆ ಇನ್ನೂ ನೆನಪಿದೆ. ಆ ದಿನ ನನ್ನ ತಾಯಿ ಅದನ್ನು ತಡೆಯದೆ ಹೋಗಿದ್ದರೆ ಖಂಡಿತ ಬಾಟಲಿ ನನ್ನ ತಲೆಗೆ ಹೊಡೆಯುತ್ತಿತ್ತು. ಒಮ್ಮೆ ನನ್ನನ್ನು ಕೋರ್ಟಿನಿಂದ ಚೆನ್ನೈಗೆ ಎಳೆದೊಯ್ದು ಊಟ ಕೊಡದೆ ರೂಮ್​ನಲ್ಲಿ ಕೂಡಿ ಹಾಕಿದ್ದ ಆತ ನನ್ನ ತಾಯಿಗೆ ಕರೆ ಮಾಡಲು ಸಹ ಬಿಡಲಿಲ್ಲ. ಇಂತಹ ಜನರನ್ನು ಎಂದಿಗೂ ನಂಬಬೇಡಿ. ಅವನು ಹೇಳುವುದೆಲ್ಲ ಸುಳ್ಳು ಎಂದು ವಿಡಿಯೋ ಮೂಲಕ ಬಾಲಾ ಪುತ್ರಿ ತಂದೆಯ ಮೇಲೆ ಅಸಮಾಧಾನ ಹೊರಹಾಕಿದ್ದಳು. ಹೀಗೆ ಒಂದಲ್ಲ ಒಂದು ವಿವಾದಗಳಿಂದ ಬಾಲಾ ಸದ್ದು ಮಾಡುತ್ತಿರುತ್ತಾರೆ. (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net