ಮಹೇಶ್ ಬಾಬು ಅವರ ಮುಂದಿನ ಚಿತ್ರದಲ್ಲಿ ಸಾಯಿ ಪಲ್ಲವಿ ಅವರ ಸಹೋದರಿಯಾಗಿ ನಟಿಸಲಿದ್ದಾರಾ?

Published on
ನಟಿ ಸಾಯಿ ಪಲ್ಲವಿ ಸೆಂತಾಮರೈ ಅಕಾ ಸಾಯಿ ಪಲ್ಲವಿ ಅವರು ತೆಲುಗು ಟಿವಿ ಡ್ಯಾನ್ಸ್ ಶೋ 'ಡಿ' ನಲ್ಲಿ ಡ್ಯಾನ್ಸರ್ ಆಗಿ ಗುರುತಿಸಿಕೊಂಡು, ಇಂದು ಸೌತ್​ನಲ್ಲಿ ಒಂದು ದೊಡ್ಡ ಸ್ಟಾರ್ ನಟಿಯಾಗಿ ಬೆಳೆದಿದ್ದಾರೆ. ಇತ್ತೀಚೆಗೆ, ಅವರು ನ್ಯಾಚುರಲ್ ಸ್ಟಾರ್ ನಾನಿ ಅವರೊಂದಿಗೆ ತೆಲುಗು ಸಿನಿಮಾ 'ಶ್ಯಾಮ್ ಸಿಂಘ ರಾಯ್' ಮೂಲಕ ಮತ್ತೊಂದು ಬ್ಲಾಕ್ಬಸ್ಟರ್ ಅನ್ನು ನೀಡಿದ್ದು, ಈಗ 'ಬಾಹುಬಲಿ' ನಟ ರಾಣಾ ದಗ್ಗುಬಾಟಿ ಅವರ ಜತೆಗಿನ ಮತ್ತೊಂದು ತೆಲುಗು ಸಿನಿಮಾ ಆದ 'ವಿರಾಟಪರ್ವಂ' ರಿಲೀಸ್​ಗೆ ಸಜ್ಜಾಗಿದ್ದಾರೆ.
ಆದರೆ, ಸದ್ಯ ಟಾಲಿವುಡ್ ಸಿನಿಮಾರಂಗದಲ್ಲಿ ಹರಿದಾಡುತ್ತಿರುವ ಒಂದು ಸುದ್ದಿ ಮಾತ್ರ ಸಾಯಿ ಪಲ್ಲವಿ ಅವರ ಅಭಿಮಾನಿಗಳ ನಿದ್ದೆಗೆಡಿಸಿದೆ. ಹೌದು, ಹಲವು ವರದಿಗಳ ಪ್ರಕಾರ ನಿರ್ದೇಶಕ ತ್ರಿವಿಕ್ರಮ್ ಅವರ ಮುಂದಿನ ಚಿತ್ರದಲ್ಲಿ ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ಅವರ ಜೊತೆಗೆ ನಟಿ ಸಾಯಿ ಪಲ್ಲವಿ ಅವರು ಸಹೋದರಿಯಾಗಿ ನಟಿಸಲಿದ್ದಾರಂತೆ. ಈ ಸಿನಿಮಾ ಶೀಘ್ರದಲ್ಲೇ ಶೂಟಿಂಗ್ ಸಹ ಆರಂಭಿಸಲಿದೆ ಎನ್ನಲಾಗಿದೆ. ವರದಿಗಳ ಪ್ರಕಾರ, ತಮಿಳು ಚಿತ್ರ ‘ವೇದಾಲಂ’ನ ತೆಲುಗು ರಿಮೇಕ್‌ ಆದ 'ಭೋಲಾ ಶಂಕರ್'ದಲ್ಲಿ ಮೆಗಾಸ್ಟಾರ್ ನಟ ಚಿರಂಜೀವಿ ಅವರ ಸಹೋದರಿಯಾಗಿ ನಟಿಸಲು ಸಹ ನಟಿ ಸಾಯಿ ಪಲ್ಲವಿ ಅವರನ್ನು ಸಂಪರ್ಕಿಸಲಾಗಿತ್ತು.
ಆದರೆ, ಸಮಯದ ಆಭಾವದಿಂದ ನಟಿ ಆ ಯೋಜನೆಯನ್ನು ಕೈಬಿಡಬೇಕಾಯಿತು. ನಂತರ, ನಟಿ ಕೀರ್ತಿ ಸುರೇಶ್ ಅವರು ಆ ಪಾತ್ರವನ್ನು ಮಾಡಲು ಒಪ್ಪಿಕೊಂಡಿದ್ದಾರೆ. ಅಲ್ಲದೆ, ಕೆಲವು ಟಾಲಿವುಡ್ ವರದಿಗಳು, ನಟಿ ಸಾಯಿ ಪಲ್ಲವಿ ಅವರು ಮಹೇಶ್ ಬಾಬುಗೆ ಸಹೋದರಿಯಾಗಿಯೂ ನಟಿಸಲು ಬಯಸುವುದಿಲ್ಲ ಎಂದು ಸೂಚಿಸುತ್ತಿವೆ. ಹಾಗಾಗಿ, ಚಿತ್ರತಂಡದಿಂದ ಖಚಿತ ಮಾಹಿತಿ ಹೊರಬರುವವರೆಗೆ ನಟಿ ಸಾಯಿ ಪಲ್ಲವಿ ಸಹೋದರಿಯಾಗಿ ನಟಿಸುತ್ತಾರಾ ಇಲ್ಲವೇ ಎಂಬುದು ಕಾದು ನೋಡಬೇಕಿದೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net