ಅಳಿಯ ಹೀರೋ ಆಗುವುದು ಚಿರಂಜೀವಿಗೆ ಇಷ್ಟವಿಲ್ಲ? ಮೆಗಾ ಸ್ಟಾರ್ ಪುತ್ರಿ ಶ್ರೀಜಾ ವಿಚ್ಛೇದನ?

Published on
ಹೈದರಾಬಾದ್: ಟಾಲಿವುಡ್ ನಟಿ ಮೆಗಾಸ್ಟಾರ್ ಚಿರಂಜೀವಿ ಕಿರಿಯ ಪುತ್ರಿ ಶ್ರೀಜಾ ವೈವಾಹಿಕ ಜೀವನಕ್ಕೆ ಪೂರ್ಣ ವಿರಾಮ ಹಾಕಲಿದ್ದಾರೆ ಎಂಬ ಊಹಾಪೋಹಗಳು ಹೆಚ್ಚಾಗುತ್ತಿವೆ. ಈ ವದಂತಿಗಳಿಗೆ ಪೂರಕವಾಗಿ ಶ್ರೀಜಾ ಅವರು ತಮ್ಮ ಪತಿಯ ಹೆಸರನ್ನು ಇನ್​ಸ್ಟಾಗ್ರಾಂ ಖಾತೆಯಿಂದ ಕೈಬಿಟ್ಟಿದ್ದು, ಅವರ ತಂದೆಯ ಮನೆಯ ಹೆಸರಾದ ಕೊನಿದೆಲಾಗೆ ಬದಲಾಯಿಸಿಕೊಂಡಿದ್ದಾರೆ. 2016ರಲ್ಲಿ ಕಲ್ಯಾಣ್ ದೇವ್ ಅವರನ್ನು ವಿವಾಹವಾಗಿದ್ದ ಶ್ರೀಜಾ, ಬಳಿಕ ‘ಶ್ರೀಜಾ ಕಲ್ಯಾಣ್’ ಎಂಬ ಹೆಸರಿನಿಂದ ಸಾಮಾಜಿಕ ಜಾಲತಾಣದಲ್ಲಿ ಗುರುತಿಸಿಕೊಂಡಿದ್ದರು. ಆದರೆ, ಇದೀಗ ಅವರು ಹೆಸರು ಬದಲಿಸಿಕೊಂಡಿದ್ದು, ಶ್ರೀಜಾ ಕೊನಿದೆಲಾ ಎನಿಸಿಕೊಂಡಿದ್ದಾರೆ.
ಜತೆಗೆ, ಕಲ್ಯಾಣ್ ಅವರನ್ನು ಅನ್​ಫಾಲೋ ಕೂಡ ಮಾಡಿದ್ದಾರೆ ಎನ್ನಲಾಗಿದೆ. ಶ್ರೀಜಾ- ಕಲ್ಯಾಣ್ ದಂಪತಿಗೆ ಓರ್ವ ಪುತ್ರಿಯಿದ್ದಾಳೆ. ಕಳೆದ ಕೆಲವು ತಿಂಗಳುಗಳಿಂದ ಶ್ರೀಜಾ ಹಾಗೂ ಕಲ್ಯಾಣ್ ವಿಚ್ಛೇದನದ ಬಗ್ಗೆ ಸುದ್ದಿಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಲೇ ಇವೆ. ಇದೀಗ, ಶ್ರೀಜಾ ಪತಿಯ ಹೆಸರನ್ನು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯಿಂದ ಕೈಬಿಟ್ಟಿದ್ದು, ಮತ್ತಷ್ಟು ಅನುಮಾನಕ್ಕೆ ಕಾರಣವಾಗಿದೆ. ಆದರೆ, ಶ್ರೀಜಾ-ಕಲ್ಯಾಣ್ ದಂಪತಿ ಅಥವಾ ಇವರಿಬ್ಬರ ಕುಟುಂಬಗಳು ಯಾರೂ ಇದರ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.
ಅಂದಹಾಗೆ, 2018ರಲ್ಲಿ ಈ ದಂಪತಿ ತಮ್ಮ ಮೊದಲ ಹೆಣ್ಣುಮಗು 'ನವಿಷ್ಕಾ' ಆಗಮನವನ್ನು ಘೋಷಿಸಿದ್ದರು. ಕಲ್ಯಾಣ್​ಗೂ ಮೊದಲು ಶ್ರೀಜಾ ಅವರು ಸಿರೀಶ್ ಭರಧ್ವಾಜ್​ರನ್ನು ವಿವಾಹವಾಗಿದ್ದರು. ಆಗ ಶ್ರೀಜಾಗೆ ಕೇವಲ 19 ವರ್ಷ. ಪತಿಯ ಮನೆಯವರು ವರದಕ್ಷಿಣೆಗೆ ಬೇಡಿಕೆ ಇಡುತ್ತಿದ್ದಾರೆ ಎಂದು ಶ್ರೀಜಾ ಆರೋಪಿಸಿದ್ದರು. ಮತ್ತು ಪತಿಯ ವಿರುದ್ಧ ಕಿರುಕುಳ ನಡೆಸಿದ್ದಾರೆ ಎಂದು ದೂರು ನೀಡಿದ್ದರು. ನಂತರ, 2011ರಲ್ಲಿ ಸಿರೀಶ್ ಭರಧ್ವಾಜ್ ಜತೆ ಶ್ರೀಜಾ ಬೇರ್ಪಟ್ಟಿದ್ದರು. ಶ್ರೀಜಾ-ಸಿರೀಶ್ ದಂಪತಿಗೂ ಓರ್ವ ಪುತ್ರಿಯಿದ್ದಾಳೆ. ಇವರಿಗೆ ಹುಟ್ಟಿದ ಹೆಣ್ಣು ಮಗಿವಿನ ಹೆಸರು ನಿವೃತಿ.
ಇನ್ನೂ, ಇದೀಗ ಕಲ್ಯಾಣ್ ಹಾಗೂ ಶ್ರೀಜಾ ಬೇರಾಗಲು ಹಲವು ಕಾರಣಗಳ ನಡುವೆ ಕಲ್ಯಾಣ್ ನಟನಾಗುವುದು ಚಿರಂಜೀವಿ ಅವರ ಕುಟುಂಬಕ್ಕೆ ಇಷ್ಟವಿಲ್ಲಾ ಎಂಬುದು ಒಂದು ಬಲವಾದ ಕಾರಣ ಎನ್ನಲಾಗಿದೆ. ಈ ಕಾರಣಕ್ಕೆ ಪುರಾವೆ ಎಂಬಂತೆ ಕಳೆದ ವಾರ ಕಲ್ಯಾಣ್ ಹಾಗೂ ನಟಿ ರಚಿತಾ ರಾಮ್ ಅವರ ‘ಸೂಪರ್ ಮಚ್ಚಿ’ ಸಿನಿಮಾ ರಿಲೀಸ್ ಆಗಿತ್ತು. ಬಾಕ್ಸಾಫೀಸ್​ನಲ್ಲಿ ಈ ಚಿತ್ರ ಸೋಲು ಕಂಡಿದೆ ಎನ್ನಲಾಗಿದ್ದು, ಈ ಚಿತ್ರಕ್ಕೆ ಬಿಡುಗಡೆಯ ಸಂದರ್ಭದಲ್ಲಿ ಚಿರಂಜೀವಿ ಕುಟುಂಬದ ಯಾರೂ ಶುಭ ಕೋರಿರಲಿಲ್ಲ. ಅಲ್ಲದೇ, ಸಾಮಾಜಿಕ ಜಾಲತಾಣಗಳಲ್ಲೂ ಪೋಸ್ಟ್ ಹಂಚಿಕೊಂಡಿರಲಿಲ್ಲ. ಈ ಸಿನಿಮಾಗೆ ಹೆಚ್ಚು ಪ್ರಚಾರವೂ ಮಾಡಿರಲಿಲ್ಲ. ನೇರವಾಗಿ ಸಿನಿಮಾದ ಬಿಡುಗಡೆಯ ದಿನಾಂಕವನ್ನು ಘೋಷಿಸಲಾಗಿತ್ತು. ಇದು, ಕಲ್ಯಾಣ್ ಅವರ ಮೂರನೇ ಸಿನಿಮಾ ಆಗಿದೆ.
ಸಣ್ಣ ಪುಟ್ಟ ಸಿನಿಮಾಗಳಿಗೆ ಬೆಂಬಲ ನೀಡುವ ನಟ ಮೆಗಾ ಸ್ಟಾರ್ ಅಳಿಯನ ಸಿನಿಮಾಗೆ ಯಾಕೆ ಬೆಂಬಲ ನೀಡಲಿಲ್ಲ ಎಂಬ ಪ್ರಶ್ನೆಗಳು ಈಗ ಅಭಿಮಾನಿಗಳಿಂದಲೂ ಕೇಳಿಬರುತ್ತಿವೆ. ಹೀಗಾಗಿ, ಅಳಿಯ ಕಲ್ಯಾಣ್ ದೇವ್ ಅವರು ನಟನಾಗುವುದು ಮೊದಲಿನಿಂದ ಮೆಗಾಸ್ಟಾರ್ ಚಿರಂಜೀವಿ ಕುಟುಂಬಕ್ಕೆ ಇಷ್ಟವಿಲ್ಲ ಎಂಬ ಮಾತುಗಳು ಕೇಳಿಬಂದಿವೆ. ಅದೇನೇ ಇರಲಿ, ಸದ್ಯ ಈ ವದಂತಿಗಳಿಗೆ ಈ ತಾರಾ ದಂಪತಿಯಿಂದ ಬರುವ ಅಧಿಕೃತ ಮಾಹಿತಿಯೇ ಉತ್ತರವಾಗಲಿದೆ. ಕಾಲಿವುಡ್ ಹಾಗೂ ಟಾಲಿವುಡ್​ನಲ್ಲಿ ಇತ್ತೀಚೆಗೆ ತಾರಾ ಜೋಡಿಗಳು ಬೇರೆಯಾಗುತ್ತಿರುವುದು ಹೆಚ್ಚಾಗಿ ಹೋಗಿದೆ. ನಿನ್ನೆಯಷ್ಟೇ ನಟ ಧನುಷ್ ಹಾಗೂ ರಜಿನಿ ಪುತ್ರಿ ಐಶ್ವರ್ಯಾ ಬೇರೆಯಾಗುತ್ತಿರುವುದಾಗಿ ತಿಳಿಸಿದರು. ಕೆಲ ತಿಂಗಳುಗಳ ಹಿಂದೆ ನಟ ನಾಗ ಚೈತನ್ಯ ಹಾಗೂ ನಟಿ ಸಮಂತಾ ಕೂಡ ಬೇರೆಯಾದರು.  
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net