

ಬೆಂಗಳೂರು: 'ಕಾಂತರ' ಚಿತ್ರ ಯಶಸ್ವಿಯಾಗುತ್ತಿದ್ದಂತೆಯೇ, ರಿಷಭ್ ಶೆಟ್ಟಿಗೆ ಬೇಡಿಕೆ ಜಾಸ್ತಿ ಆಗಿದೆ. ಅವರಿಂದ ಚಿತ್ರ ಮಾಡಿಸಬೇಕು ಎಂದು ಬಯಸುವವರು ಸಂಖ್ಯೆ ಹೆಚ್ಚಾಗುತ್ತಿದೆ. ಕೆಲವು ದಿನಗಳ ಹಿಂದೆಯೇ ತೆಲುಗಿನ ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್, ತಮ್ಮ ಸಂಸ್ಥೆಗೆ ಒಂದು ಚಿತ್ರ ಮಾಡಿಕೊಡಿ ಎಂದು ರಿಷಭ್ಗೆ ಕೇಳಿದ್ದು ಸುದ್ದಿಯಾಗಿತ್ತು. ಈಗ ಜ್ಯೂನಿಯರ್ ಎನ್.ಟಿ.ಆರ್ಗೆ ರಿಷಭ್ ಚಿತ್ರ ನಿರ್ದೇಶಿಸುತ್ತಾರಾ ಎಂಬ ಸುದ್ದಿಯೊಂದು ಇದೀಗ ಕೇಳಿಬರುತ್ತಿದೆ.
'ಕಾಂತಾರ' ಚಿತ್ರವು ತೆಲುಗು ಬಾಕ್ಸ್-ಆಫೀಸ್ನ್ನು ಚಿಂದಿ ಉಡಾಯಿಸುತ್ತಿದೆ. ಚಿತ್ರವನ್ನು ನೋಡಿ ಸ್ಟಾರ್ನಟರು ಮೆಚ್ಚುಗೆ ವ್ಯಕ್ತಪಡಿಸುತ್ತಿದೆ. ಅಮೆರಿಕಾದಲ್ಲಿ ಇದುವರೆಗೂ ಚಿತ್ರ ಎರಡು ಮಿಲಿಯನ್ ಡಾಲರ್ ಗಳಿಸಿರಬಹುದು ಎಂಬ ಅಂದಾಜಿದ್ದು, ಇದರಲ್ಲಿ ತೆಲುಗು ಅವತರಣಿಕೆಯೊಂದೇ ಒಂದು ಮಿಲಿಯನ್ ಡಾಲರ್ ಸಂಪಾದಿಸಿದೆ ಎಂಬ ಸುದ್ದಿಯೊಂದು ಕೇಳಿಬರುತ್ತಿದೆ.
ಹೀಗಿರುವಾಗಲೇ, ಚಿತ್ರವನ್ನು ವೀಕ್ಷಿಸಿರುವ ತೆಲುಗಿನ ಜನಪ್ರಿಯ ನಟ ಜ್ಯೂನಿಯರ್ ಎನ್ಟಿಆರ್, ರಿಷಭ್ಗೆ ಕರೆ ಮಾಡಿ ಮೆಚ್ಚುಗೆ ಸೂಚಿಸಿದ್ದಾರಂತೆ. ಜ್ಯೂನಿಯರ್ ಎನ್ಟಿಆರ್ ಅಭಿನಯದಲ್ಲಿ ಚಿತ್ರವೊಂದನ್ನು ನಿರ್ದೇಶಿಸುವ ಯೋಚನೆ ಏನಾದರೂ ಇದೆಯಾ ಎಂಬ ಪ್ರಶ್ನೆಯನ್ನು ರಿಷಭ್ ಎದುರು ಇಡಲಾಗಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ರಿಷಭ್, ತಾವು ಈ ಬಗ್ಗೆ ಇನ್ನೂ ಯೋಚಿಸಿಲ್ಲ ಎಂದು ಹೇಳಿದ್ದಾರೆ. 'ಮೊದಲಿನಿಂದಲೂ ಅಷ್ಟೇ. ಮೊದಲು ಕಥೆ ಮಾಡಿ, ಅದಕ್ಕೆ ತಕ್ಕ ಪಾತ್ರಧಾರಿಗಳನ್ನು ಹುಡುಕುವ ಪ್ರಯತ್ನ ಮಾಡುತ್ತೀನಿ. ತಾರಾಗಣ ಆಯ್ಕೆ ಮಾಡಿ, ಅದಕ್ಕೆ ಸೂಕ್ತವಾದ ಕಥೆಯನ್ನು ಇದುವರೆಗೂ ಮಾಡಿಲ್ಲ. ಹಾಗಾಗಿ, ಯಾವುದಾದರೂ ಕಥೆಗೆ ಜ್ಯೂನಿಯರ್ ಎನ್.ಟಿ.ಆರ್ ಸೂಕ್ತ ಎಂದು ಮುಂದೆ ಯಾವಾಗಲಾದರೂ ಅನಿಸಿದರೆ ಗೊತ್ತಿಲ್ಲ, ಸದ್ಯಕ್ಕಂತೂ ಅಂತಹ ಯಾವುದೇ ಯೋಚನೆ ಇಲ್ಲ' ಎನ್ನುತ್ತಾರೆ ರಿಷಭ್.
'ಕಾಂತಾರ' ಚಿತ್ರವು ಸೆ.30ರಂದು ಬಿಡುಗಡೆಯಾಗಿದ್ದು, ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಚಿತ್ರದಲ್ಲಿ ರಿಷಭ್ ಶೆಟ್ಟಿ, ಸಪ್ತಮಿ ಗೌಡ, ಕಿಶೋರ್, ಅಚ್ಯುತ್ ಕುಮಾರ್ ಮುಂತಾದವರು ಅಭಿನಯಿಸಿದ್ದು, ಚಿತ್ರವನ್ನು ಹೊಂಬಾಳೆ ಫಿಲಂಸ್ನಡಿ ವಿಜಯ್ಕುಮಾರ್ ಕಿರಗಂದೂರು ನಿರ್ಮಾಣ ಮಾಡಿದ್ದಾರೆ.