300 ಕೋಟಿ ದುಡಿಯಬೇಕೆಂಬ ಟಾರ್ಗೆಟ್​ ಮುಟ್ಟುತ್ತಾರಾ ಪವನ್​ ಕಲ್ಯಾಣ್​?

Pavan-Kalyan-Final
Published on

ಟಾಲಿವುಡ್​ ನಟ ಪವನ್​ ಕಲ್ಯಾಣ್​ ರಾಜಕೀಯದ ಜತೆಜತೆಗೆ ರಾಜಕೀಯದಲ್ಲೂ ಸಕ್ರಿಯವಾಗಿರುವುದು ಗೊತ್ತೇ ಇದೆ. ಜನಸೇನಾ ಪಕ್ಷವನ್ನು ಸ್ಥಾಪಿಸಿರುವ ಅವರು 2018ರ ಅಸೆಂಬ್ಲಿ ಚುನಾವಣೆಗಳಲ್ಲಿ ನಿಂತು ಹೀನಾಯವಾಗಿ ಸೋತಿದ್ದರು. ಆ ನಂತರ ಚಿತ್ರರಂಗಕ್ಕೆ ವಾಪಸ್ಸಾಗಿರುವ ಅವರು 2023ರ ಅಸೆಂಬ್ಲಿ ಚುನಾವಣೆಯಲ್ಲಿ ನಿಂತು, ಈ ಬಾರಿ ಶತಾಯ ಗತಾಯ ಗೆಲ್ಲಲೇಬೇಕೆಂದು ಪಣ ತೊಟ್ಟಿದ್ದಾರೆ.

ಅದಕ್ಕಿಂತ ಹೆಚ್ಚಾಗಿ, ರಾಜಕೀಯದಲ್ಲಿ ಕಳೆದುಕೊಂಡಿರುವ ಹಣವನ್ನು ಮರಳಿ ಪಡೆಯಬೇಕೆಂದು ಯೋಚಿಸಿರುವ ಪವನ್​, ಅದಕ್ಕೆ ಸಿನಿಮಾ ಮೊರೆ ಹೋಗಿದ್ದಾರೆ. ಹೇಗೂ ಮುಂದಿನ ಚುನಾವಣೆಗಳು ಬರುವುದಕ್ಕೆ ಇನ್ನೂ ಮೂರು ವರ್ಷಗಳಿವೆ. ಅಷ್ಟರಲ್ಲಿ ಒಂದಿಷ್ಟು ಚಿತ್ರಗಳಲ್ಲಿ ನಟಿಸಿ, ಆಗಿರುವ ನಷ್ಟವನ್ನು ಸರಿದೂಗಿಸಿಕೊಳ್ಳಬೇಕು ಎನ್ನುವುದು ಅವರ ಐಡಿಯಾ ಆಗಿತ್ತಂತೆ.

ಅವರ ಪ್ರಕಾರ, ಚುನಾವಣೆಗಳಿರುವುದೇನಿದ್ದರೂ 2023ರ ಕೊನೆಯಲ್ಲಿ. ಅಷ್ಟರಲ್ಲಿ ಕನಿಷ್ಠ 300 ಕೋಟಿ ದುಡಿಯಬೇಕು ಎಂದು ಪವನ್​ ಅಂದುಕೊಂಡಿದ್ದರಂತೆ. ಹೇಗೂ ಅವರಿಗೆ ಸಂಭಾವನೆಯಾಗಿ ಚಿತ್ರವೊಂದಕ್ಕೆ 50 ಕೋಟಿ ಸಿಗುತ್ತದೆ. ಇನ್ನು ಆರು ಚಿತ್ರಗಳಲ್ಲಿ ನಟಿಸಿದರೆ, ಅವರೊಂದುಕೊಂಡ ಟಾರ್ಗೆಟ್​ ಮುಟ್ಟಿದಂತಾಗುತ್ತದೆ.

ಅದೇ ಕಾರಣಕ್ಕೆ, 'ವಕೀಲ್​ ಸಾಬ್​' ನಂತರ ಪವನ್ ಇನ್ನೊಂದಿಷ್ಟು ಚಿತ್ರಗಳಲ್ಲಿ ನಟಿಸುವುದಕ್ಕೆ ಗ್ರೀನ್​ ಸಿಗ್ನಲ್​ ನೀಡಿದ್ದರು. ಆದರೆ, ಕರೊನಾದಿಂದ ಎಲ್ಲವೂ ನಿಧಾನವಾಗುತ್ತಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಈ ಐದು ತಿಂಗಳುಗಳಲ್ಲಿ 'ವಕೀಲ್​ ಸಾಬ್​' ಮುಗಿಸಿ ಇನ್ನೂ ಒಂದು ಚಿತ್ರದಲ್ಲಿ ಅವರು ನಟಿಸಬಹುದಾಗಿತ್ತು. ಆದರೆ, ಕರೊನಾದಿಂದ 'ವಕೀಲ್​ ಸಾಬ್​' ಚಿತ್ರೀಕರಣವೇ ಇದುವರೆಗೂ ಮುಗಿದಿಲ್ಲ. ಅದು ಮುಗಿದು, ಇನ್ನೊಂದು ಚಿತ್ರ ಶುರುವಾಗಬೇಕಾದರೆ, ಇನ್ನೂ ಆರು ತಿಂಗಳಾದರೂ ಬೇಕು ಎಂದು ಹೇಳಲಾಗುತ್ತಿದೆ.

ಪವನ್​ ಅಂದುಕೊಂಡಂತೆ ಆರು ಚಿತ್ರಗಳನ್ನು ಮುಗಿಸುವುದಕ್ಕೆ ಸಾಧ್ಯವಾಗುವುದಿಲ್ಲ ಎಂಬುದು ಟಾಲಿವುಡ್​ ಪಂಡಿತರ ಲೆಕ್ಕಾಚಾರ. ಹಾಗಂತ ಸಾಧ್ಯವೇ ಇಲ್ಲ ಎಂದು ಹೇಳುವುದೂ ಸಾಧ್ಯವಿಲ್ಲ. ಸುಮ್ಮನೆ ಕಥೆ-ಚಿತ್ರಕಥೆ ಎಂದು ಸಮಯ ವ್ಯರ್ಥ ಮಾಡುವ ಬದಲು, ಒಂದಿಷ್ಟು ಯಶಸ್ವಿ ಚಿತ್ರಗಳನ್ನು ತಂದು, ತೆಲುಗಿಗೆ ರೀಮೇಕ್​ ಮಾಡಿದರೆ ಹೇಗೆ ಎಂಬ ಯೋಚನೆಯೂ ಪವನ್​ಗಿದೆಯಂತೆ.

ರೀಮೇಕೋ, ಸ್ವಮೇಕೋ ... ಒಟ್ಟಿನಲ್ಲಿ 300 ಕೋಟಿ ದುಡಿಯಬೇಕು ಎಂಬ ಟಾರ್ಗೆಟ್​ ಮುಟ್ಟುತ್ತಾರಾ ಪವನ್​ ಎಂಬುದನ್ನು ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net