ಎಸ್​ಪಿಬಿ ಆರೋಗ್ಯದಲ್ಲಿ ಯಾವುದೇ ಬದಲಾವಣೆ ಇಲ್ಲ; ವದಂತಿ ತಳ್ಳಿ ಹಾಕಿದ ಪುತ್ರ ಚರಣ್​

Untitled
Published on

ಹಿರಿಯ ಗಾಯಕ ಎಸ್​ಪಿ ಬಾಲಸುಬ್ರಮಣ್ಯಂ ಕರೊನಾ ವರದಿ ನೆಗೆಟಿವ್​ ಬಂದಿದೆ ಎಂಬ ಸುದ್ದಿಯನ್ನು ಪುತ್ರ ಎಸ್​ಪಿ ಚರಣ್​ ತಳ್ಳಿಹಾಕಿದ್ದಾರೆ. ಅಪ್ಪನ ಸ್ಥಿತಿ ಸ್ಥಿರವಾಗಿದ್ದು, ಅವರಿಗೆ ವೆಂಟಿಲೇಟರ್​ ಸಹಾಯದ ಮೂಲಕವೇ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಖಚಿತಪಡಿಸಿದ್ದಾರೆ.

ಸೋಮವಾರ ಬೆಳಗ್ಗೆ ಎಸ್​ಪಿಬಿ ವರದಿ ನೆಗೆಟಿವ್​ ಬಂದಿತ್ತು ಎಂದು ಎಲ್ಲೆಡೆ ಸುದ್ದಿ ಹರಿದಾಡಿದ್ದರ ಹಿನ್ನೆಲೆಯಲ್ಲಿ ಫೇಸ್​ಬುಕ್​ ಮೂಲಕ ವಿಡಿಯೋ ತುಣುಕನ್ನು ಶೇರ್​ ಮಾಡಿಕೊಂಡ ಚರಣ್​, ಸುಳ್ಳು ಸುದ್ದಿಯನ್ನು ನಂಬಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

‘ಅಪ್ಪನ ಆರೋಗ್ಯದ ಸ್ಥಿತಿಗತಿಯನ್ನು ನಾನೇ ಮೊದಲು ಎಲ್ಲರಿಗೂ ತಿಳಿಸುತ್ತೇನೆ. ವೈದ್ಯರು ನನಗೆ ಅಪ್​ಡೇಟ್​ ಮಾಹಿತಿ ನೀಡಿದ ಬಳಿಕ ಅದನ್ನು ಮಾಧ್ಯಮಗಳಿಗೆ ನಾನು ತಿಳಿಸುತ್ತೇನೆ. ದುರದೃಷ್ಟವಶಾತ್​ ಇಂದು ಬೆಳಗ್ಗೆ ಅಪ್ಪನ ಕರೊನಾ ವರದಿ ನೆಗೆಟಿವ್​ ಬಂದಿದೆ ಎಂದು ಎಲ್ಲೆಡೆ ಸುದ್ದಿಯಾಗಿದೆ. ಆದರೆ, ಅವರ ವರದಿ ನೆಗೆಟಿವ್​ ಇರಲಿ ಪಾಸಿಟಿವ್​ ಆಗಿರಲಿ ಅಪ್ಪನ ಸ್ಥಿತಿ ಈ ಮೊದಲು ಹೇಗಿತ್ತೋ ಈಗಲೂ ಹಾಗೆಯೇ ಸ್ಥಿರವಾಗಿದೆ. ವೆಂಟಿಲೇಟರ್​ ಸಹಾಯದ ಮೂಲಕವೇ ಚಿಕಿತ್ಸೆ ಮುಂದುವರಿಸಲಾಗಿದೆ. ದಯಮಾಡಿ ಸುಳ್ಳು ಸುದ್ದಿಯನ್ನು ಹರಡಬೇಡಿ. ಸಂಜೆ ವೇಳೆಗೆ ವೈದ್ಯರ ಜತೆ ಚರ್ಚೆಸಿ ಇನ್ನೊಂದು ಪೋಸ್ಟ್ ಹಾಕುತ್ತೇನೆ ಎಂದಿದ್ದಾರೆ.

ಆಗಸ್ಟ್​ 5ರಂದು ಎಸ್​ಪಿಬಿ ಅವರಲ್ಲಿ ಕರೊನಾ ದೃಢಪಟ್ಟಿತ್ತು. ಅಂದಿನಿಂದಲೂ ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ ಕೆಲವು ದಿನಗಳಿಂದ ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ಕಾರಣ ಐಸಿಯುವಿನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net