ಮಲಯಾಳಂ ಚಿತ್ರರಂಗದಲ್ಲಿ ಲೈಂಗಿಕ ದೌರ್ಜನ್ಯ: ಮೋಹನ್​ ಲಾಲ್​ ವಿರುದ್ಧ ನಟಿ ಕಸ್ತೂರಿ ಶಂಕರ್​ ಆಕ್ರೋಶ

Kasthuri Shankar
Published on

ಹೈದರಾಬಾದ್​: ನಟಿ ಕಸ್ತೂರಿ ಅವರು 80 ಮತ್ತು 90ರ ದಶಕದಲ್ಲಿ ಬಹು ಬೇಡಿಕೆ ನಟಿಯಾಗಿದ್ದರು. ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಸಿನಿಮಾಗಳಲ್ಲಿ ನಟಿಸುವ ಮೂಲಕ ಬಹುಭಾಷಾ ನಟಿ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ಎಲ್ಲ ಸಿನಿರಂಗದ ಸ್ಟಾರ್​ ನಟರ ಜತೆ ಕಸ್ತೂರಿ ಅಭಿನಯಿಸಿದ್ದಾರೆ. ಈಗಲೂ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಕಸ್ತೂರಿ ಅವರು ಸಕ್ರಿಯರಾಗಿದ್ದಾರೆ. ಅವರು ಸಾಮಾಜಿಕ ಕಾರ್ಯಕರ್ತೆಯೂ ಹೌದು. ರಾಜಕೀಯ ಹಾಗೂ ಸಿನಿಮಾ ಸೇರಿದಂತೆ ಸಮಾಜದಲ್ಲಿ ನಡೆಯುವ ಕೆಲ ಘಟನೆಗಳ ಬಗ್ಗೆ ಮುಕ್ತವಾಗಿ ಅಭಿಪ್ರಾಯ ವ್ಯಕ್ತಪಡಿಸುವುದರಲ್ಲಿ ಅವರು ಎಂದಿಗೂ ದೂರ ಉಳಿಯುವುದಿಲ್ಲ.

ಇದೀಗ ಮಲಯಾಳಂ ಸಿನಿಮಾ ಇಂಡಸ್ಟ್ರಿಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿರುವ ಹೇಮಾ ಸಮಿತಿ ವರದಿಯ ಬಗ್ಗೆ ನಟಿ ಕಸ್ತೂರಿ ಅವರು ಧ್ವನಿ ಎತ್ತಿದ್ದಾರೆ. ಕೇರಳ ಚಿತ್ರರಂಗದ ಖ್ಯಾತ ನಟ ಮೋಹನ್​ ಲಾಲ್​ ಮತ್ತು ಕೇಂದ್ರ ಸಚಿವ ಹಾಗೂ ನಟ ಸುರೇಶ್​ ಗೋಪಿ ನಡೆಯನ್ನು ಟೀಕಿಸಿದ್ದಾರೆ.

ಮಲಯಾಳಂನಲ್ಲಿ ಇಷ್ಟೆಲ್ಲ ಬೆಳವಣಿಗೆಯಾಗಿದ್ದರೂ ಮೋಹನ್​ ಲಾಲ್​ ಮತ್ತು ಸುರೇಶ್​ ಗೋಪಿ ಅವರಂತಹ ನಟರು ಏಕೆ ಸುಮ್ಮನಿದ್ದಾರೆ? ಈ ನಡೆಯಿಂದ ಅವರ ಮೇಲೆಯೇ ಅನುಮಾನ ಮೂಡುತ್ತದೆ. ಮೋಹನ್​ ಲಾಲ್​ ಅವರು ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ, ಯಾಕೆ ಮೌನ ವಹಿಸಿದ್ದಾರೆ? ಮಾಧ್ಯಮಗಳ ಮುಂದೆ ಬಂದು ನಮ್ಮ ಚಿತ್ರರಂಗದಲ್ಲಿ ಈ ರೀತಿ ನಡೆಯಲ್ಲ ಎಂದು ಏಕೆ ಹೇಳುತ್ತಿಲ್ಲ? ಎಲ್ಲ ಮಹಿಳೆಯರ ಪರವಾಗಿ ನಿಲ್ಲಬೇಕಾದ ಜವಾಬ್ದಾರಿ ಅವರ ಮೇಲಿದೆ. ಶೋಷಣೆ ಮಾಡಿದವರು ಯಾರೆಂಬುದು ನನಗೆ ಗೊತ್ತಿದೆ ಎಂದು ಅವರೇಕೆ ಹೇಳುತ್ತಿಲ್ಲ. ಈಗ ಕೇಳಿಬಂದಿರುವ ಆರೋಪಗಳು ಸುಳ್ಳಾಗಿದ್ದರೆ ಎಲ್ಲರು ಅದರ ವಿರುದ್ಧ ಹೋರಾಡಿ. ಆದರೆ, ನೀವೇಕೆ ಆ ರೀತಿ ಮಾಡುತ್ತಿಲ್ಲ? ಎಂದು ಮೋಹನ್​ ಲಾಲ್​ ಅವರನ್ನು ಕಸ್ತೂರಿ ಸಾಲು ಸಾಲು ಪ್ರಶ್ನೆಗಳನ್ನು ಕೇಳಿದ್ದಾರೆ.

ಕೇರಳದಿಂದ ಬಿಜೆಪಿಯ ಮೊದಲ ಲೋಕಸಭಾ ಸಂಸದರಾಗಿರುವ ನಟ ಸುರೇಶ್ ಗೋಪಿ ಅವರನ್ನೂ ತರಾಟೆಗೆ ತೆಗೆದುಕೊಂಡ ಕಸ್ತೂರಿ, ಮೋದಿ ಸರ್ಕಾರದಲ್ಲಿ ಸಚಿವರಾಗಿ ಮಾಲಿವುಡ್‌ನಲ್ಲಿನ ಸಮಸ್ಯೆಗಳನ್ನು ಪರಿಹರಿಸುವ ಜವಾಬ್ದಾರಿ ಗೋಪಿ ಅವರ ಮೇಲಿದೆ. ಯಾರು ಇಂತಹ ಸಮಸ್ಯೆಗಳನ್ನು ನಿರ್ಲಕ್ಷಿಸುತ್ತಾರೋ ಅವರು ಕೂಡ ತಪ್ಪಿತಸ್ಥರು ಎಂದು ಭಾಸವಾಗುತ್ತದೆ. ಅವರು ತಪ್ಪಿತಸ್ಥರಲ್ಲದಿದ್ದರೆ ಮಾಧ್ಯಮದವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಬೇಕಿತ್ತು ಎಂದರು. ಈ ಹಿಂದೆ ಹೇಮಾ ಸಮಿತಿ ವರದಿ ಬಿಡುಗಡೆಗೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಕೇಳಿದಾಗ ಆಕ್ರೋಶಗೊಂಡ ಸುರೇಶ್​ ಗೋಪಿ, ಮಾಧ್ಯಮ ಪ್ರತಿನಿಧಿಗಳನ್ನು ತಳ್ಳಿದ್ದರು. ಇದನ್ನು ಉಲ್ಲೇಖಿಸಿ ಕಸ್ತೂರಿ ಶಂಕರ್​ ಕಿಡಿಕಾರಿದ್ದಾರೆ.

ಹೇಮಾ ಸಮಿತಿ ವರದಿಗಳು ತಡವಾಗಿರಬಹುದು ಆದರೆ, ಇದು ಸರಿಯಾದ ದಿಕ್ಕಿನಲ್ಲಿ ಇಟ್ಟಿರುವ ಒಂದು ಹೆಜ್ಜೆಯಾಗಿದೆ. ಆದಾಗ್ಯೂ, ಈ ವರದಿಯಲ್ಲಿನ ವಿಚಾರಗಳಿಂದ ಸಂಪೂರ್ಣವಾಗಿ ತೃಪ್ತಿ ಹೊಂದಿಲ್ಲ ಎಂದ ಕಸ್ತೂರಿ, ತಾವು ಕೂಡ ಮಾಲಿವುಡ್‌ನಲ್ಲಿ ಕೆಟ್ಟ ಅನುಭವಗಳನ್ನು ಹೊಂದಿರುವುದಾಗಿ ಆರೋಪಿಸಿದರು. ಮಲಯಾಳಂ ಚಿತ್ರವೊಂದರ ಶೂಟಿಂಗ್​ ಸಮಯದಲ್ಲಿ ಪ್ರೊಡಕ್ಷನ್ ಮ್ಯಾನೇಜರ್​ ಕೆಟ್ಟದಾಗಿ ವರ್ತಿಸಿದ್ದ ಎಂದಿದ್ದಾರೆ.

ಅಂದಹಾಗೆ ಪ್ರಸ್ತುತ ಕಸ್ತೂರಿ ಶಂಕರ್​ ಅವರು ತಮಿಳಿನ ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ಬಿಜಿಯಾಗಿದ್ದಾರೆ. ಇವರು ಕನ್ನಡದಲ್ಲಿ ಜಾಣ, ಹಬ್ಬ ಹಾಗೂ ತುತ್ತಾ ಮುತ್ತಾ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸುವ ಮೂಲಕ ಕನ್ನಡಿಗರಿಗೂ ಪರಿಚಿತರಾಗಿದ್ದಾರೆ.

ಏನಿದು ಹೇಮಾ ಸಮಿತಿ ವರದಿ?

ಮಲಯಾಳಂ ಚಿತ್ರರಂಗದ ಖ್ಯಾತ ನಟಿಯ ಮೇಲೆ 2017ರಲ್ಲಿ ನಡೆದ ಲೈಂಗಿಕ ದೌರ್ಜನ್ಯ ರಾಷ್ಟ್ರವ್ಯಾಪಿ ಭಾರಿ ಆಕ್ರೋಶಕ್ಕೆ ಕಾರಣವಾಯಿತು. ಇಂದಿಗೂ ಈ ಪ್ರಕರಣದ ವಿಚಾರಣೆ ನಡೆಯುತ್ತಲೇ ಇದೆ. ಈ ಪ್ರಕರಣ ಬೆನ್ನಲ್ಲೇ ನ್ಯಾಯಾಮೂರ್ತಿ ಕೆ. ಹೇಮಾ (ನಿವೃತ್ತ) ಅವರ ನೇತೃತ್ವದಲ್ಲಿ ಮಾಜಿ ಅಧಿಕಾರಿ ಕೆಬಿ ವಲ್ಸಲಕುಮಾರಿ ಮತ್ತು ಹಿರಿಯ ನಟಿ ಶಾರದಾ ಅವರನ್ನೊಳಗೊಂಡ ತ್ರಿಸದಸ್ಯ ಸಮಿತಿಯನ್ನು ಕೇರಳ ಸರ್ಕಾರ ರಚನೆ ಮಾಡಿತ್ತು. ಈ ಸಮಿತಿ 2019ರ ಡಿಸೆಂಬರ್​ನಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ನಾಲ್ಕೂವರೆ ವರ್ಷಗಳ ಬಳಿಕ ವರದಿಯನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಿದ್ದು, ಮಲಯಾಳಂ ಚಿತ್ರರಂಗದ ಕರಾಳ ಮುಖ ಅನಾವರಣವಾಗಿದೆ. ಮಲಯಾಳಂ ಸಿನಿರಂಗದ ಒಂದೊಂದೆ ಕರಾಳ ಮುಖವಾಡ ಕಳಚಿ ಬೀಳುತ್ತಿದೆ. ಸಿನಿಮಾದಲ್ಲಿ ಮಾತ್ರವಲ್ಲದೆ ಎಲ್ಲ ಕ್ಷೇತ್ರಗಳಲ್ಲೂ ಲೈಂಗಿಕ ಶೋಷಣೆ ನಡೆಯುತ್ತಿದೆ. ಆದರೆ, ಸಿನಿಮಾರಂಗದಲ್ಲಿ ವ್ಯಾಪಕವಾಗಿದೆ ಎನ್ನುತ್ತಾರೆ ನೊಂದ ಮಹಿಳೆಯರು. ಸಿನಿಮಾದಲ್ಲಿ ಅವಕಾಶ ಬೇಕಾದರೆ ಕಾಮತೃಷೆ ತೀರಿಸಬೇಕು ಎನ್ನುತ್ತಾರೆ ನೊಂದ ಕಲಾವಿದೆಯರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net