

ಟಾಲಿವುಡ್ನ ಜನಪ್ರಿಯ ಹೀರೋ ಮತ್ತು ಜನಸೇನಾ ಪಕ್ಷದ ಅಧ್ಯಕ್ಷ 'ಪವರ್ ಸ್ಟಾರ್' ಪವನ್ ಕಲ್ಯಾಣ್ ಅವರ ಹೊಸ ಲುಕ್ ನೋಡಿ, ಹಲವರು ಆಶ್ಚರ್ಯಗೊಂಡಿದ್ದುಂಟು. ಉದ್ದ ಕೂದಲು ಮತ್ತು ಗಡ್ಡ ಬಿಡುವುದರ ಜತೆಗೆ, ಇತ್ತೀಚಿನ ದಿನಗಳಲ್ಲಿ ಜುಬ್ಬಾ-ಪೈಜಾಮದಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ ಪವನ್ ಕಲ್ಯಾಣ್. ಎಲ್ಲಕ್ಕಿಂತ ಹೆಚ್ಚಾಗಿ, ಅವರು ಸಾಕಷ್ಟು ತೂಕ ಇಳಿಸಿಕೊಂಡಿದ್ದಾರೆ.
ಅವರ ಈ ಹೊಸ ಲುಕ್ ನೋಡಿ, ಅವರನ್ನು 'ಬಾಬಾ' ಪವನ್ ಕಲ್ಯಾಣ್ ಎಂದು ಮೊದಲು ನಿರ್ದೇಶಕ ರಾಮ್ಗೋಪಾಲ್ ವರ್ಮಾ ಕರೆದರು. ಆ ನಂತರ, ಅವರನ್ನು ಬಾಬಾ ಎಂದು ಕರೆಯುವ ಪರಿಪಾಠ ಶುರುವಾಗಿದೆ.
ಇಷ್ಟಕ್ಕೂ ಪವನ್ ಕಲ್ಯಾಣ್, ಯಾಕೆ ಈ ಬಾಬಾ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಪ್ರಶ್ನೆ ಅವರ ಅಭಿಮಾನಿಗಳನ್ನು ಬಹಳಬಹಳ ಕಾಡುತ್ತಲೇ ಇದೆ. ಆದರೆ, ಈ ಪ್ರಶ್ನೆಯನ್ನು ಪವನ್ ಮುಂದೆ ಇಡುವುದು ಹೇಗೆ ಎಂಬ ಗೊಂದಲದಲ್ಲಿದ್ದವರಿಗೆ, ಈಗ ಕೊನೆಗೂ ಉತ್ತರ ಸಿಕ್ಕಿದೆ.
ವಿಷಯ ಏನೆಂದರೆ, ಕಳೆದ ನಾಲ್ಕು ತಿಂಗಳುಗಳಿಂದ ಪವನ್ ಮನೆ ಬಿಟ್ಟು ಎಲ್ಲೂ ಹೋಗಿಲ್ಲ. ಮನೆಯಲ್ಲೇ ಇರುವುದರಿಂದ ಕಡ್ಡ ಮತ್ತು ತಲೆ ಕೂದಲಿಗೆ ಕತ್ತರಿ ಹಾಕಿಲ್ಲ. ಇನ್ನೂ ಶೂಟಿಂಗ್ ಶುರುವಾಗುವುದು ತಡವಿದೆ ಎಂಬ ಕಾರಣಕ್ಕೆ ಸುಮ್ಮನಿದ್ದಾರೆ. ಇದರಲ್ಲೇನು ವಿಶೇಷವಿಲ್ಲ. ವಿಷಯವಿರುವುದು ಅವರು ತೂಕ ಕಡಿಮೆ ಮಾಡಿಕೊಂಡಿರುವ ವಿಷಯದಲ್ಲಿ.
ಪವನ್ ಕಲ್ಯಾಣ್ ಅವರು ಅಷ್ಟು ಸಪೂರ ಆಗಿದ್ದು ಹೇಗೆ ಎಂದರೆ, ಅವರು ಚಾರ್ತುಮಾಸ ದೀಕ್ಷೆಯನ್ನು ಪಡೆದಿದ್ದಾರಂತೆ. ದಿನಕ್ಕೆ ಒಂದು ಹೊತ್ತು ಮಾತ್ರ ಊಟ ಮಾಡುತ್ತಿದ್ದಾರಂತೆ. ಹಾಗಾಗಿ ಅವರ ತೂಕ ಇಳಿದಿದೆ.
ಪವನ್ ತೂಕ ಇಳಿಸಿಕೊಂಡಿರುವುದಕ್ಕೆ ಅವರು ಅಭಿನಯಿಸುತ್ತಿರುವ ಕೆಲವು ಚಿತ್ರಗಳ ತಂಡಗಳು ಇದೀಗ ಟೆನ್ಶನ್ ಆಗಿವೆ. ಏಕೆಂದರೆ, ಪವನ್ ಆಗ ಮೈಕೈ ತುಂಬಿಕೊಂಡು ಚೆನ್ನಾಗಿದ್ದರು. ಇದೀಗ ನೋಡಿದರೆ, ಅವರು ತೂಕ ಇಳಿಸಿಕೊಂಡಿದ್ದಾರೆ. ಹಾಗಾಗಿ ಕಂಟಿನ್ಯುಟಿ ಮ್ಯಾಚ್ ಮಾಡುವುದು ಹೇಗೆ ಎಂದು ಎಲ್ಲರೂ ತಲೆ ಕೆಡಸಿಕೊಂಡಿದ್ದಾರೆ.
ಆದರೆ, ಜಾಸ್ತಿ ಟೆನ್ಶನ್ ಆಗುವ ಅವಶ್ಯಕತೆ ಇಲ್ಲ ಎಂದು ಪವನ್ ಎಲ್ಲರಿಗೂ ಸೂಚ್ಯವಾಗಿ ಹೇಳಿದ್ದಾರಂತೆ. ಏಕೆಂದರೆ, ಸದ್ಯಕ್ಕಂತೂ ಅವರು ಚಿತ್ರೀಕರಣ ಮಾಡುವುದಕ್ಕೆ ಮುಂದಾಗದಿರುವ ಬಗ್ಗೆ ಅವರು ತೀರ್ಮಾನ ತೆಗೆದುಕೊಂಡಿದ್ದಾರೆ. ವರ್ಷದ ಕೊನೆಗೆ ಚಿತ್ರೀಕರಣಕ್ಕೆ ಹೋಗುವುದರಿಂದ, ಅಷ್ಟರಲ್ಲಿ ಪುನಃ ಫಾರ್ಮ್ಗೆ ಬರುವ ಆಶ್ವಾಸನೆಯನ್ನು ಅವರು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.