

ಬೆಂಗಳೂರು: ನಟಿ ಪ್ರೇಮಾ ಅವರ ಬಗ್ಗೆ ಕನ್ನಡಿಗರಿಗೆ ಪರಿಚಯಿಸುವ ಅಗತ್ಯವಿಲ್ಲ. ಸೂಪರ್ ಡೂಪರ್ ಹಿಟ್ ಸಿನಿಮಾಗಳ ಮೂಲಕ ಕನ್ನಡ ಸಿನಿ ರಸಿಕರನ್ನು ರಂಜಿಸಿದ್ದಾರೆ. ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ, ದಕ್ಷಿಣ ಭಾರತದಲ್ಲಿ ಸ್ಟಾರ್ ಹೀರೋಯಿನ್ ಆಗಿ ಗುರುತಿಸಿಕೊಂಡಿದ್ದರು. 1995ರಲ್ಲಿ ತೆರೆಕಂಡ ಸವ್ಯಸಾಚಿ ಸಿನಿಮಾದೊಂದಿಗೆ ಪ್ರೇಮಾ ಅವರ ಪ್ರಯಾಣ ಪ್ರಾರಂಭವಾಯಿತು.
ಮೊದಲ ಸಿನಿಮಾ ಹೇಳಿಕೊಳ್ಳುವಷ್ಟು ಹಿಟ್ ಆಗದಿದ್ದರೂ ಎರಡನೇ ಚಿತ್ರ "ಓಂ" ಮೂಲಕ ದೊಡ್ಡ ಗೆಲುವು ಕಂಡರು. ಕನ್ನಡದ ಎಲ್ಲಾ ಸ್ಟಾರ್ ಹೀರೋಗಳ ಜೊತೆ ಜೋಡಿಯಾಗಿ ಟಾಪ್ ಹೀರೋಯಿನ್ ಆಗಿ ಹೊರಹೊಮ್ಮಿದ್ದರು. ಕನ್ನಡ ಮಾತ್ರವಲ್ಲದೆ, ತೆಲುಗಿನಲ್ಲಿ ಧರ್ಮಚಕ್ರಂ, ದೇವಿ, ಓಂಕಾರಂ, ಮಾ ಆವಿದ ಕಲೆಕ್ಟರ್ ಮತ್ತು ಪೊಲೀಸ್ ಪವರ್ ಸೇರಿದಂತೆ ಹಲವು ಚಿತ್ರಗಳನ್ನು ಮಾಡಿದ್ದಾರೆ.
ಪ್ರೇಮಾ ಅವರು ಸಿನಿಮಾ ಮಾತ್ರವಲ್ಲದೆ ವೈಯಕ್ತಿಕ ಜೀವನದಲ್ಲೂ ಭಾರಿ ಸುದ್ದಿಯಾದರು. ವೃತ್ತಿ ಜೀವನದ ಉತ್ತುಂಗದಲ್ಲಿರುವಾಗಲೇ ಪ್ರೇಮಾ ಅವರು 2006ರಲ್ಲಿ ಉದ್ಯಮಿ ಜೀವನ್ ಅಪ್ಪಚ್ಚು ಅವರನ್ನು ವಿವಾಹವಾದರು. ಸಿನಿಮಾಗೆ ಗುಡ್ ಬೈ ಹೇಳಿ ಒಳ್ಳೆಯ ಸಾಂಸಾರಿಕ ಜೀವನ ನಡೆಸೋಣ ಅಂತ ಬಯಸಿದ್ದ ಪ್ರೇಮಾಗೆ ತಮ್ಮ ವೈವಾಹಿಕ ಜೀವನದಲ್ಲಿ ಬಿರುಗಾಳಿ ಏಳುತ್ತದೆ ಅಂತ ಎಂದಿಗೂ ಊಹಿಸಿರಲಿಲ್ಲ. ಗಂಡ-ಹೆಂಡತಿ ನಡುವಿನ ಭಿನ್ನಾಭಿಪ್ರಾಯದಿಂದ ಪ್ರೇಮಾ ಅವರು 2016ರಲ್ಲಿ ಜೀವನ್ ಅಪ್ಪಚ್ಚು ಅವರಿಂದ ವಿಚ್ಛೇದನ ಪಡೆದರು.
ಡಿವೋರ್ಸ್ ಆದ ಬಳಿಕ ಅದೇ ಚಿಂತೆಯಲ್ಲಿ ಮುಳುಗಿದ ಪ್ರೇಮಾ ಅನಾರೋಗ್ಯಕ್ಕಿಡಾದರು. ಎಲ್ಲಿಯೂ ಕಾಣಿಸಿಕೊಳ್ಳದೆ ಕಣ್ಣರೆಯಾಗಿದ್ದರು. ಆದರೆ, ಎಲ್ಲ ತೊಂದರೆಗಳನ್ನು ಮೆಟ್ಟಿನಿಂತಿ ಮತ್ತೆ ಪುಟಿದೆದ್ದರು. 2017ರಲ್ಲಿ ತೆರೆಕಂಡ 'ಉಪೇಂದ್ರ ಮತ್ತೆ ಬಾ' ಚಿತ್ರದ ಮೂಲಕ ಚಿತ್ರರಂಗಕ್ಕೆ ರೀ ಎಂಟ್ರಿ ಕೊಟ್ಟರು. ಆ ಬಳಿಕ ವೆಡ್ಡಿಂಗ್ ಗಿಫ್ಟ್ ಸಿನಿಮಾದಲ್ಲೂ ನಟಿಸಿದರು. ಸದ್ಯ ಜೀ ಕನ್ನಡದಲ್ಲಿ ಮೂಡಿ ಬರುತ್ತಿರುವ ಮಹಾನಟಿ ಶೋನಲ್ಲಿ ಜಡ್ಜ್ ಆಗಿ ಭಾಗವಹಿಸುತ್ತಿದ್ದಾರೆ. ಈ ಹಿಂದೆ ಪ್ರೇಮಾ ಆರ್.ಜೆ. ರಾಜೇಶ್ ಅವರನ್ನು ಎರಡನೇ ಮದುವೆಯಾಗಲಿದ್ದಾರೆ ಎಂಬ ವರದಿಗಳು ಬಂದಿದ್ದವು. ಆದರೆ, ಈ ಸುದ್ದಿಯಲ್ಲಿ ಯಾವುದೇ ಸತ್ಯವಿಲ್ಲ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು.
ಇತ್ತೀಚಿಗೆ ಪ್ರೇಮಾ ಅವರ ಜೊತೆಗೆ ಒಬ್ಬ ವ್ಯಕ್ತಿ ಹೆಚ್ಚಾಗಿ ಕಾಣಸಿಕೊಳ್ಳುತ್ತಿರುವ ಸುದ್ದಿ ಬರುತ್ತಿದೆ. ಕನ್ನಡದ ಸಿನಿಬಜ್ ವೆಬ್ಸೈಟ್ನಲ್ಲಿ ಪ್ರೇಮಾ ಬಗ್ಗೆ ಫೋಟೋ ಸಹಿತ ಸುದ್ದಿಯನ್ನು ಪ್ರಕಟಿಸಲಾಗಿದೆ. ಈ ವರದಿಯ ಪ್ರಕಾರ ಕನ್ನಡ ಕಿರುತೆರೆ ಉದ್ಯಮದ ಖ್ಯಾತ ಕಾರ್ಯ ನಿರ್ವಾಹಕರಾದ ಅರವಿಂದ್ ಜತೆ ಪ್ರೇಮಾ ಅವರಿಗೆ ನಿಕಟ ಸಂಬಂಧವಿದೆ ಎಂದು ಹೇಳಲಾಗಿದೆ. ಪ್ರೇಮಾ ಎಲ್ಲಿರುತ್ತಾರೋ ಅಲ್ಲಿ ಅರವಿಂದ್ ಕೂಡ ಇದ್ದೇ ಇರುತ್ತಾರೆ. ಇತ್ತೀಚೆಗಷ್ಟೇ ಪ್ರೇಮಾ ಕೊರಗಜ್ಜನ ಸನ್ನಿಧಿಗೆ ಹೋದಾಗ ಅರವಿಂದ್ ಕೂಡ ಜತೆಯಲ್ಲಿದ್ದರು ಎಂದು ಹೇಳಲಾಗಿದೆ. ಅರವಿಂದ್ ಜೊತೆ ಪ್ರೇಮಾ ಅವರು ಹೊಸ ಜೀವನ ಆರಂಭಿಸಲಿದ್ದಾರೆ ಎಂಬ ಮಾತು ಕೂಡ ಕೇಳಿಬಂದಿದೆ.
ಇನ್ನು ಸೂಕ್ತ ವ್ಯಕ್ತಿ ಸಿಕ್ಕರೆ ಮದುವೆಯಾಗುತ್ತೇನೆ ಎಂದು ಈ ಹಿಂದೆಯೇ ಪ್ರೇಮಾ ಹೇಳಿದ್ದಾರೆ. ನನ್ನ ಜೀವನ ಹೇಗೆ ಇರಬೇಕೆಂದು ನನಗೆ ತಿಳಿದಿದೆ. ನನಗೆ ಕ್ಯಾನ್ಸರ್ ಇದೆ ಎಂಬ ಸುದ್ದಿಯನ್ನು ಈ ಹಿಂದೆ ಹಬ್ಬಿಸಿದ್ದರು. ಆದರೆ, ಅಂಥದ್ದೇನೂ ಇರಲಿಲ್ಲ. ನಾನು ಖಿನ್ನತೆಯಿಂದ ಸ್ವಲ್ಪ ಕಾಲ ಆಸ್ಟ್ರೇಲಿಯಾದಲ್ಲಿದ್ದೆ. ಆ ವೇಳೆ ನನಗೆ ಕ್ಯಾನ್ಸರ್ ಇದೆ ಎಂದು ವದಂತಿ ಹಬ್ಬಿಸಿದರು ಎಂದು ಪ್ರೇಮಾ ಹೇಳಿದ್ದರು. ನಮಗಿರುವುದು ಒಂದೇ ಜೀವನ, ನೆಮ್ಮದಿಯಿಂದ ಬದುಕಬೇಕು. ಜೀವನದಲ್ಲಿ ನಿನಗೆ ಇಷ್ಟವಾದದ್ದನ್ನು ಮಾಡು ಎಂದು ನಮ್ಮ ತಾಯಿ ಕೂಡ ಹೇಳಿದ್ದಾರೆ ಎಂದು ಪ್ರೇಮಾ ಅವರು ಹಿಂದೊಮ್ಮೆ ಸಂದರ್ಶನದಲ್ಲಿ ಹೇಳಿದ್ದರು.
ಆದರೆ, ಕೆಲವು ಮೂಲಗಳ ಪ್ರಕಾರ ಅವರಿಬ್ಬರ ನಡುವೆ ಅಂತಹ ಯಾವುದೇ ಸಂಬಂಧವಿಲ್ಲ, ಒಳ್ಳೆಯ ಸ್ನೇಹಿತರು ಅಷ್ಟೇ ಎಂಬ ಮಾತುಗಳು ಕೇಳಿಬರುತ್ತಿವೆ. ವಾಸ್ತವವಾಗಿ, ಪ್ರೇಮಾ ಅವರ ಎರಡನೇ ಮದುವೆಯ ಬಗ್ಗೆ ಅನೇಕ ವದಂತಿಗಳು ಇದ್ದವು. ಆದರೆ, ಅದನ್ನು ತಿರಸ್ಕರಿಸಿದ ಪ್ರೇಮಾ, ಸದ್ಯ ವೈರಲ್ ಆಗುತ್ತಿರುವ ಸುದ್ದಿಗೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂದು ಕಾದು ನೋಡಬೇಕಿದೆ.