

ಬಾಲಿವುಡ್ ಕೇವಲ ಸ್ಟಾರ್ ಕಲಾವಿದರಿಗಷ್ಟೇ ಮತ್ತು ಸಿನಿಮಾ ಕುಟುಂಬದ ಹಿನ್ನೆಲೆಯಿಂದ ಬಂದವರಿಗಷ್ಟೇ ಎಂಬ ಮಾತಿತ್ತು. ಆದರೆ, ಆ ಸಂಪ್ರದಾಯ ಈಗಿಲ್ಲ ಎನ್ನುವಂತಿಲ್ಲ. ತೆರೆಮರೆಯಲ್ಲಿ ಅದು ಹೆಡೆಬಿಚ್ಚಿ ಭುಸುಗುಡುತ್ತಿದೆ. ಹಾಗೆ ಅಡಗಿ ಕುಳಿತಿದ್ದ ಆ ನೆಪೋಟಿಸಂ ಸಂಪ್ರದಾಯ ಸುಶಾಂತ್ ಸಾವಿನ ಬೆನ್ನಲ್ಲೇ ತೀವ್ರ ಸ್ವರುಪ ಪಡೆದುಕೊಂಡಿದೆ. ಬಾಲಿವುಡ್ನಲ್ಲಿನ ಹಲವು ಸಿನಿ ಮಂದಿಯ ಬಣಗಳೂ ಇದೀಗ ಬಟ್ಟೆ ಬಿಚ್ಚಿ ಬೆತ್ತಲಾಗಿ ಎಲ್ಲರ ಮುಂದೆ ಬಂದು ನಿಂತಿವೆ. ಆ ನೆಪೋಟಿಸಂನ ಕರಾಳ ಮುಖವನ್ನು ಆಯುಷ್ಮಾನ್ ಖುರಾನಾ ಹೇಳಿಕೊಂಡಿದ್ದಾರೆ.
ಬಾಲಿವುಡ್ನ ಸಾಲು ಸಾಲು ಸೂಪರ್ ಹಿಟ್ ಸಿನಿಮಾಗಳ ಸರದಾರ ಆಯುಷ್ಮಾನ್ ಖುರಾನಾ, ಗಾಡ್ಫಾದರ್ ಇಲ್ಲದೆ ಸಿನಿಮಾರಂಗಕ್ಕೆ ಬಂದು ಒಂದಷ್ಟು ಏರಿಳಿತ ಎದುರಿಸಿ ಇದೀಗ ಸ್ಟಾರ್ ನಾಯಕನ ಪಟ್ಟ ಗಿಟ್ಟಿಸಿಕೊಂಡಿದ್ದಾರೆ. ಇಂಥ ಆಯುಷ್ಮಾನ್ಗೆ 2007ರಲ್ಲಿಯೇ ಕರಣ್ ಜೋಹರ್ ಸಿನಿಮಾದಲ್ಲಿ ಚಾನ್ಸ್ ಕೊಡಿಸುವುದಾಗಿ ಹೇಳಿ ಕಾಗೆ ಹಾರಿಸಿದ್ರು!
‘ಅದು 2007. ಆವತ್ತು ರೇಡಿಯೋ ಜಾಕಿ ಆಗಿದ್ದ ನಾನು ಕರಣ್ ಜೋಹರ್ ಅವರನ್ನು ಸಂದರ್ಶನ ಮಾಡಿದ್ದೆ. ಸಂದರ್ಶನ ಮುಗಿದ ಬಳಿಕ, ಸಿನಿಮಾ ಆಸಕ್ತಿ ಇದೆ ಎಂದು ಅವರ ಬಳಿ ಕೇಳಿಕೊಂಡಿದ್ದೆ. ಅದರಂತೆ, ಆಫೀಸ್ ನಂಬರ್ ಕೊಟ್ಟು ಸಂಪರ್ಕಿಸುವಂತೆಯೂ ಹೇಳಿಕೊಂಡಿದ್ದರು. ಅದರಂತೆ ಹಲವು ಬಾರಿ ಕರಣ್ ಆಫೀಸ್ಗೆ ಹೋದರೆ, ಅವರಿಲ್ಲ ಎಂಬುದಷ್ಟೇ ಉತ್ತರ ಸಿಗುತ್ತಿತ್ತು. ಪದೇಪದೆ ಕೇಳಿದರೆ, ಅವರು ಬಿಜಿಯಾಗಿದ್ದಾರೆ ಎಂಬ ಮಾತು. ಅವರು ಹೇಳಿದಾಗಲೆಲ್ಲ ನಾನು ಫೋನ್ ಮಾಡಿ ಕೇಳುತ್ತಿದ್ದೆ... ಒನ್ ಫೈನ್ ಡೇ, ‘‘ನಾವು ಸ್ಟಾರ್ ನಟರೊಂದಿಗೆ ಮಾತ್ರ ಸಿನಿಮಾ ಮಾಡುತ್ತೇವೆ... ನಿಮ್ಮಂಥವರ ಜತೆಗಲ್ಲ. ಸಿನಿಮಾ ಹಿನ್ನೆಲೆ ಇರದ ಮತ್ತು ಹೊಸಬರನ್ನು ನಾವು ಆಡಿಷನ್ ಮಾಡುವುದಿಲ್ಲ’’ ಎಂಬ ಪ್ರತ್ಯುತ್ತರ ಸಿಕ್ಕಿತ್ತು. ಅಂದಿನಿಂದ ನನ್ನ ಕೆಲಸದಲ್ಲಿ ನಾನು ತೊಡಗಿಸಿಕೊಂಡೆ. ಸಿನಿಮಾ ಅವಕಾಶವೂ ಸಿಕ್ಕಿತು’ ಎಂದು ಆ ದಿನಗಳನ್ನು ನೆನಪು ಮಾಡಿಕೊಳ್ಳುತ್ತಾರೆ ಆಯುಷ್ಮಾನ್.
ಇದನ್ನೂ ಓದಿ: ಇಲ್ಲಿ ಯಾರನ್ನೂ ಉದ್ಧಾರ ಆಗೋಕೆ ಬಿಡಲ್ಲ …
ಸದ್ಯ ಬಾಲಿವುಡ್ನಲ್ಲಿ ಏ ಲಿಸ್ಟರ್ ನಾಯಕರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಸುಶಾಂತ್, ನಟನೆಗಾಗಿ ರಾಷ್ಟ್ರಪ್ರಶಸ್ತಿಯನ್ನೂ ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲ, ಸ್ವತಃ ಕರಣ್ ಜೋಹರ್ ಅವರೇ ಕಾಫಿ ವಿಥ್ ಕರಣ್ ಶೋಗೆ ಕರೆಸಿ ಅವರ ಸಂದರ್ಶನ ಮಾಡಿದ್ದಾರೆ. ಇದಲ್ಲವೇ ಸಾಧನೆ? (ಏಜೆನ್ಸೀಸ್)