

ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ಹೆಚ್ಚು ಮಾತನಾಡದೇ ದೂರವೇ ಉಳಿದಿದ್ದ ಅವರ ಗೆಳತಿ ರಿಯಾ ಚಕ್ರವರ್ತಿ, ಇದೀಗ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಗುರುವಾರ ಟಿವಿ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಸುಶಾಂತ್ ಕುರಿತು ಹಲವು ವಿಷಯಗಳನ್ನು ಮಾತನಾಡಿದ್ದಾರೆ.
ಬಾಲಿವುಡ್‍ನಲ್ಲಿ ಪ್ರಶಸ್ತಿ ಪಡೆಯುವುದು ಮತ್ತು ಪ್ರಶಸ್ತಿಗಳಿಗೆ ನಾಮಿನೇಟ್ ಆಗುವುದು ಹೆಚ್ಚು ಸುದ್ದಿಯಾಗುತ್ತದೆ. ಆದರೆ, ಯಾವುದೇ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಯಾವುದೇ ಪ್ರಶಸ್ತಿಗೂ ನಾಮಿನೇಟ್ ಆಗದಿದ್ದರ ಬಗ್ಗೆ ಸುಶಾಂತ್‍ಗೆ ಬಹಳ ಬೇಸರವಿತ್ತಂತೆ. ಈ ಕುರಿತು ಸುಶಾಂತ್ ಹಲವು ಬಾರಿ ರಿಯಾ ಜತೆಗೆ ಮಾತನಾಡಿದ್ದಾಗಿ ಸ್ವತಃ ರಿಯಾ ಹೇಳಿಕೊಂಡಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, `ಯಾವುದೇ ಪ್ರಶಸ್ತಿಗೂ ನಾಮಿನೇಟ್ ಆಗದಿರುವ ಬಗ್ಗೆ ಸುಶಾಂತ್‍ಗೆ ಬಹಳ ಬೇಸರವಿತ್ತು. ಅದರಲ್ಲೂ ಅವರ ಚಿತ್ರಗಳ ಬಗ್ಗೆ ಒಳ್ಳೆಯ ಮಾತುಗಳು ಕೇಳಿಬರುತ್ತಿದ್ದವು, ಆ ಚಿತ್ರಗಳು ಹಣ ಮಾಡುತ್ತಿದ್ದವು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಸುಶಾಂತ್ ಒಳ್ಳೆಯ ನಟ ಎಂದು ಗುರುತಿಸಿಕೊಂಡಿದ್ದರು. ಇಷ್ಟಾದರೂ ಅವರ ಚಿತ್ರಗಳಿಗೆ ಪ್ರಶಸ್ತಿ ಸಿಗುತ್ತಿರಲಿಲ್ಲ. ಯಾರೂ ತಮ್ಮನ್ನು ಗುರುತಿಸುತ್ತಿಲ್ಲ ಎಂಬ ಬೇಸರ ಅವರನ್ನು ಒಳಗೊಳಗೆ ಕಾಡುತಿತ್ತು' ಎಂದು ರಿಯಾ ಮಾತನಾಡಿದ್ದಾರೆ.
ಇನ್ನು ಕಳೆದ ವರ್ಷದ ಮೀಟೂ ಪ್ರಕರಣದಲ್ಲಿ ಸುಶಾಂತ್ ಹೆಸರು ಕೇಳಿಬಂದಿದ್ದು ಸಹ ಅವರಿಗೆ ದೊಡ್ಡ ಆಘಾತ ನೀಡಿತ್ತಂತೆ. `ದಿಲ್ ಬೇಚಾರಾ' ಚಿತ್ರದಲ್ಲಿ ನಟಿಸುವ ಸಂದರ್ಭದಲ್ಲಿ ಅವರ ಮೇಲೆ ಮೀಟೂ ಆರೋಪ ಕೇಳಿಬಂದಿತ್ತು. ಅದಕ್ಕೆ ಸರಿಯಾಗಿ ಅವರ ಜತೆ ನಟಿಸಿದ್ದ ಸಂಜನಾ ಸಾಂಘಿ, ಈ ವಿಷಯವನ್ನು ನಿರಾಕರಿಸುವುದಕ್ಕೆ ಸಾಕಷ್ಟು ಸಮಯ ತೆಗೆದುಕೊಂಡರು. ಇದರಿಂದ ಸುಶಾಂತ್ ಬಹಳ ನೋವಾಗಿತ್ತು ಎಂದು ರಿಯಾ ಹೇಳಿದ್ದಾರೆ.
ಇದನ್ನೂ ಓದಿ: ರಿಯಾಗೆ ಸಿಬಿಐ ಕೇಳಿದ ಆ 10 ಪ್ರಶ್ನೆಗಳೇನು?
`ನನ್ನ ಪ್ರಕಾರ, ಈ ಮೀಟೂ ಪ್ರಕರಣದಿಂದ ಸುಶಾಂತ್ ಮೇಲೆ ಒತ್ತಡ ಜಾಸ್ತಿಯಾಗುತ್ತಾ ಹೋಯಿತು. ಇದೆಲ್ಲದರ ಹಿಂದೆ ಯಾರೋ ಇದ್ದಾರೆ ಎಂಬ ಗುಮಾನಿ ಅವರನನ್ನು ಕಾಡುತ್ತಲೇ ಇತ್ತು. ಅವರ್ಯಾರು ಎಂದು ನನಗೂ ಗೊತ್ತಿಲ್ಲ. ಆದರೆ, ಸಂಜನಾ ಅವರನ್ನು ಮುಂದಿಟ್ಟುಕೊಂಡು ಯಾರೋ ಅವರ ಜತೆ ಆಟ ಆಡುತ್ತಿದ್ದಾರೆ ಎಂದು ಸುಶಾಂತ್‍ಗೆ ಬಲವಾದ ನಂಬಿಕೆ ಇತ್ತು' ಎಂದು ರಿಯಾ ಹೇಳಿಕೊಂಡಿದ್ದಾರೆ.