ಮಣಿರತ್ನಂ, ಶಂಕರ್​, ವೆಟ್ರಿಮಾರನ್​ ಒಂದೇ ಕಡೆ ... ಯಾಕಿರಬಹುದು?

Mysskin - Final
Published on

ಚೆನ್ನೈ: ಭಾನುವಾರ ಕಾಲಿವುಡ್​ನ ಜನಪ್ರಿಯ ನಿರ್ದೇಶಕರೆಲ್ಲಾ ಒಂದೇ ಕಡೆ ಸೇರಿದ್ದರು. ಮಣಿರತ್ನಂ, ಶಂಕರ್​, ವೆಟ್ರಿಮಾರನ್​, ಗೌತಮ್​ ಮೆನನ್​, ಲಿಂಗುಸ್ವಾಮಿ ... ಹೀಗೆ ತಮಿಳಿನ ದೊಡ್ಡ ಹೆಸರುಗಳೆಲ್ಲಾ ಒಂದು ಕಡೆ ಜಮಾಯಿಸಿದ್ದರು. ಅವರೆಲ್ಲರೂ ಏನಾದರೂ ಹೊಸ ಸಂಘ ಕಟ್ಟುತ್ತಿದ್ದಾರಾ ಅಥವಾ ಎಲ್ಲಾ ಸೇರಿಕೊಂಡು ಹೊಸದೇನನ್ನೋ ಮಾಡುವುದಕ್ಕೆ ಹೊರಟಿದ್ದಾರಾ ಎಂಬ ಪ್ರಶ್ನೆ ಸಹಜವಾಗಿಯೇ ಬರಬಹುದು.

ಹಾಗೇನಿಲ್ಲ. ತಮಿಳಿನ ಸ್ಟಾರ್​ ನಿರ್ದೇಶಕರೆಲ್ಲಾ ಒಂದೇ ಕಡೆ ಸೇರಿದ್ದೇನೋ ಹೌದು. ಆದರೆ, ಸಂಘ ಕಟ್ಟುವುದಕ್ಕೋ ಅಥವಾ ಬೇರೆ ಯಾವುದೋ ಕಾರ್ಯಕ್ರಮಕ್ಕೋ ಅಲ್ಲ. ಅವರೆಲ್ಲಾ ಸೇರಿದ್ದು, ತಮಿಳಿನ ಜನಪ್ರಿಯ ನಿರ್ದೇಶಕ ಮಿಸ್ಕಿನ್​ ಅವರ ಹುಟ್ಟುಹಬ್ಬದ ಸಲುವಾಗಿ.

'ಚಿತ್ತಿರಂ ಪೇಸುದಡಿ' ಚಿತ್ರದ ಮೂಲಕ ನಿರ್ದೇಶಕರಾದ ಷಣ್ಮುಖು ರಾಜ ಅಲಿಯಾಸ್​ ಮಿಸ್ಕಿನ್​, ನಂತರದ ವರ್ಷಗಳಲ್ಲಿ 'ಅಂಜಾತೆ', 'ಯುದ್ಧಂ ಸೈ', 'ಮುಗಮೂಡಿ', 'ಪಿಸಾಸು', 'ತುಪ್ಪರಿವಾಳನ್​', 'ಸೈಕೋ' ಮುಂತಾದ ಹಲವು ವಿಭಿನ್ನ ಚಿತ್ರಗಳನ್ನು ನೀಡಿದವರು ಅವರು. ಹೀಗೆ ವಿಭಿನ್ನ ಚಿತ್ರಗಳ ಮೂಲಕ ಜನಪ್ರಿಯತೆ ಗಳಿಸಿಕೊಂಡಿರುವ ಮಿಸ್ಕಿನ್​ ಅವರ ಹುಟ್ಟುಹಬ್ಬಕ್ಕೆ ಶುಭಕೋರುವುದಕ್ಕೆ ತಮಿಳಿನ ಸ್ಟಾರ್ ನಿರ್ದೇಶಕರೆಲ್ಲಾ ಒಂದೇ ಕಡೆ ಸೇರಿದ್ದು ವಿಶೇಷವಾಗಿತ್ತು.

ಇನ್ನು ಹುಟ್ಟುಹಬ್ಬದ ಸಂದರ್ಭದಲ್ಲಿ ಮಿಸ್ಕಿನ್​ ಹೊಸ ಚಿತ್ರವೊಂದನ್ನು ಘೋಷಿಸಿದ್ದಾರೆ. ತಮ್ಮ ಜನಪ್ರಿಯ ಚಿತ್ರವಾದ 'ಪಿಸಾಸು'ಮ ಮುಂದುವರೆದ ಭಾಗವನ್ನು ಅವರು ಘೋಷಿಸಿದ್ದು, ಚಿತ್ರಕ್ಕೆ 'ಪಿಸಾಸು 2' ಎಂಬ ಹೆಸರನ್ನು ಇಟ್ಟಿದ್ದಾರೆ. ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಆಂಡ್ರಿಯಾ ಜೆರಿಮಿಯಾ ಕಾಣಿಸಿಕೊಳ್ಳುತ್ತಿದ್ದು, ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net