

‘ಕಳೆದ ಎರಡು ವರ್ಷಗಳಿಂದ ಮೊಬೈಲ್, ಟಿವಿಯಲ್ಲಿ ಸಿನಿಮಾಗಳನ್ನು ನೋಡಿದ್ದೀರಿ. ಈಗಲಾದರೂ ಅದರಿಂದ ಹೊರಬಂದು ಚಿತ್ರಮಂದಿರದಲ್ಲಿ ಸಿನಿಮಾ ನೋಡಿ ...’
ಸುದೀಪ್ ಹೀಗೆ ಹೇಳುವುದಕ್ಕೆ ಕಾರಣ ಪೈರಸಿ. ‘ಕೋಟಿಗೊಬ್ಬ 3’ ಚಿತ್ರದ ಪೈರಸಿ ಆಗಬಾರದು ಎಂದು ಚಿತ್ರತಂಡದವರು ಅದೆಷ್ಟೇ ತಡೆದರೂ, ಸಂಪೂರ್ಣವಾಗಿ ನಿಲ್ಲಿಸುವುದಕ್ಕೆ ಸಾಧ್ಯವಾಗಲೇ ಇಲ್ಲ. ಪೈರಸಿ ಮಾಡುವವರನ್ನು ತಡೆಯುವುದು ಕಷ್ಟ, ನೋಡುವವರಿಗಾದರೂ ಒಂದು ಮಾತು ಹೇಳೋಣ ಎಂದು ಮನವಿ ಸಲ್ಲಿಸಿದರು.
‘ಪೈರಸಿ ಬಗ್ಗೆ ಎಷ್ಟೇ ಮುನ್ನೆಚ್ಚರಿಕೆ ವಹಿಸಿದ್ದರೂ, ಪೈರಸಿ ಮಾಡಿದರು. ಎಲ್ಲ ಕಡೆ ಕೆಟ್ಟ ಜನ ಇದ್ದೇ ಇರುತ್ತಾರೆ. ಅವರ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು ಅಷ್ಟೆ. ನಮ್ಮತಂಡ ಹಗಲು ರಾತ್ರಿ ಕಷ್ಟಪಟ್ಟು ಸಾಕಷ್ಟು ಲಿಂಕ್ಗಳನ್ನು ಡಿಲೀಟ್ ಮಾಡಿಸಿದೆ. ಮೊಬೈಲಿನಲ್ಲಿ ನೋಡುವುದಕ್ಕೂ, ಥಿಯೇಟರಿನಲ್ಲಿ ಸಿನಿಮಾ ನೋಡುವುದಕ್ಕೂ ವ್ಯತ್ಯಾಸ ಏನೆಂಬುದನ್ನೂ ನೀವೇ ಕಂಡುಕೊಳ್ಳಿ. ಅಲ್ಲದೆ ಕಲೆಕ್ಷನ್ ಅನ್ನೋದು ನನಗೆ ಮಾನದಂಡ ಆಗಿಲ್ಲ. ನಿರ್ವಪಕರು ಖುಷಿಯಾಗಿದ್ದಾರೆ, ವಿತರಕರು ಖುಷಿಯಾಗಿದ್ದಾರೆ. ನನಗೆ ಅಷ್ಟು ಸಾಕು’ ಎಂದರು ಸುದೀಪ್.
ಅವರು ಇಷ್ಟೆಲ್ಲಾ ಮಾತನಾಡಿದ್ದೂ ‘ಕೋಟಿಗೊಬ್ಬ 3’ ಚಿತ್ರದ ಸಂತೋಷಕೂಟದಲ್ಲಿ. ಚಿತ್ರ ಬಿಡುಗಡೆಗೂ ಮುನ್ನ ಪ್ರೀ-ರಿಲೀಸ್ ಇವೆಂಟ್ ಮಾಡಬೇಕೆಂದು ಚಿತ್ರತಂಡದವರು ಹೊರಟಿದ್ದರು. ಆಗ ಆಗಿರಲಿಲ್ಲ. ಈಗ ಚಿತ್ರ ಗೆದ್ದಿರುವ ಖುಷಿಯಲ್ಲಿ ಒಂದು ಸಮಾರಂಭ ಮಾಡಿ ಸಂತೋಷ ಹಂಚಿಕೊಂಡರು. ಈ ಸಮಾರಂಭಕ್ಕೆ ಉಪೇಂದ್ರ ಅತಿಥಿಯಾಗಿ ಬಂದಿದ್ದು ವಿಶೇಷ. ಈ ಸಂದರ್ಭದಲ್ಲಿ ಮಾತನಾಡಿದ ಉಪೇಂದ್ರ, ‘ಸುದೀಪ್ ಹೆಸರಿನಲ್ಲೇ ಕಿಚ್ಚು ಇದೆ. ಅವರು ತಮ್ಮ ಜೊತೆ ಕೆಲಸ ಮಾಡೋರಿಗೆಲ್ಲ ಕಿಚ್ಚು ಹಚ್ಚಿಬಿಡ್ತಾರೆ’ ಎಂದು ಹೇಳಿದರು. ನಿರ್ವಪಕ ಸೂರಪ್ಪ ಬಾಬು ಭಾವುಕರಾಗಿ ಮಾತನಾಡಿದರು. ‘ಇದೇ ಮೊದಲ ಬಾರಿಗೆ ನನ್ನ ಸಿನಿಮಾ ತಡೆಯುವ ಪ್ರಯತ್ನ ನಡೆಯಿತು. ಈ ಸಂದರ್ಭದಲ್ಲಿ ಕಾಲ್ ಮಾಡಿದ ಸುದೀಪ್ ಧೈರ್ಯ ತುಂಬಿದರು. ನನ್ನ ಮಗಳು ಸಹ ಕಾಲ್ ಮಾಡಿ ಧೈರ್ಯ ತುಂಬಿದ್ದರಿಂದ ನಾನಿಲ್ಲಿ ನಿಂತಿದ್ದೇನೆ. ಸ್ನೇಹಿತರು ಹೆಗಲಾಗಿ ನಿಂತಿದ್ದರಿಂದ ಸಿನಿಮಾ ಬಿಡುಗಡೆಯಾಯಿತು. ಸುದೀಪ್ ಜೊತೆ ನಾನೇನೇ ಜಗಳ ಆಡಿದ್ದರೂ ಅದು ಸಿನಿಮಾಗಾಗಿ ಮಾತ್ರ. ಅವರು ಮುಂದೆ ನನಗೆ ಕಾಲ್ಶೀಟ್ ಕೊಡುತ್ತಾರೋ ಇಲ್ವೋ ಗೊತ್ತಿಲ್ಲ, ಆದರೆ ನನ್ನ ಜೀವ ಇರುವವರೆಗೂ ಅವರಿಗೆ ಕೃತಜ್ಞನಾಗಿರುತ್ತೇನೆ’ ಎಂದರು.