10 ವರ್ಷಗಳ ನಂತರ ಬೆಂಗಳೂರಿಗೆ ಚಿತ್ರದ ಪ್ರಮೋಷನ್​ಗೆ ಬಂದ ವಿಷ್ಣು ಮಂಚು ...

Ginna (2)
Published on

ಬೆಂಗಳೂರು: ತೆಲುಗು ನಟ ವಿಷ್ಣು ಮಂಚು ಅವರು ಸುಮಾರು 10 ವರ್ಷಗಳ ಹಿಂದೆ ಬೆಂಗಳೂರಿಗೆ ತಮ್ಮ ಚಿತ್ರದ ಪ್ರಮೋಷನ್​ಗೆ ಬಂದಿದ್ದರಂತೆ. ಆಗ ಅಂಬರೀಷ್​ ಅವರು ಬಹಳ ಸಹಾಯ ಮಾಡಿದ್ದರಂತೆ. ಈಗ ವಿಷ್ಣು, 'ಜಿನ್ನಾ' ಎಂಬ ಚಿತ್ರದಲ್ಲಿ ನಟಿಸಿದ್ದು, ಆ ಚಿತ್ರದ ಇದೇ ಅ. 21ರಂದು ಬಿಡುಗಡೆಯಾಗುತ್ತಿದೆ. ಚಿತ್ರದ ಪ್ರಚಾರ ಮಾಡುವುದಕ್ಕೆ ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದರು.

ಆ್ಯಕ್ಷನ್, ಕಾಮಿಡಿ ಜಾನರ್​ನ 'ಜಿನ್ನಾ' ಚಿತ್ರವು ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆಗೆ ಸಿದ್ದವಾಗಿದ್ದು, ವಿಷ್ಣು ಮಂಚು ಅವರಿಗೆ ನಾಯಕಿಯರಾಗಿ ಸನ್ನಿ ಲಿಯೋನ್ ಹಾಗೂ ಪಾಯಲ್ ರಜಪೂತ್ ಅಭಿನಯಿಸಿದ್ದಾರೆ. ಸೂರ್ಯ ನಿರ್ದೇಶನ ಮಾಡಿರುವ ಈ ಚಿತ್ರವನ್ನು ಹಿರಿಯ ನಟ ಹಾಗೂ ವಿಷ್ಣು ತಂದೆ ಮೋಹನ್ ಬಾಬು ನಿರ್ಮಿಸಿದ್ದಾರೆ. ಅನೂಪ್ ರೂಬೆನ್ಸ್ ಸಂಗೀತ ಸಂಯೋಜಿಸಿದ್ದಾರೆ.

'ಜಿನ್ನಾ' ಚಿತ್ರದ ಕುರಿತು ಮಾತನಾಡುವ ವಿಷ್ಣು, 'ಈ ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡುವಂತೆ ನಾನು ರಾಕ್ ಲೈನ್ ವೆಂಕಟೇಶ್ ಅವರನ್ನು ಕೇಳಿದಾಗ, ಅವರು ಮುಕುಂದ ಚಿತ್ರಮಂದಿರದ ಮಾಲೀಕರಾದ ವೆಂಕಟೇಶ್ ಅವರನ್ನು ಪರಿಚಯಿಸಿದರು. ವೆಂಕಟೇಶ್ ಅವರು ನಮ್ಮ ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡುತ್ತಿದ್ದಾರೆ. ಈ ಕಥೆಯನ್ನು ನನ್ನ ತಂದೆ ಮೋಹನ್ ಬಾಬು ಅವರು ಕೇಳಿ ಒಕೆ ಮಾಡಿ, ನಿರ್ಮಾಣ ಮಾಡಲು ಮುಂದಾದರು. ನನಗೆ ಕಥೆ ಹೇಳುವ ಮೊದಲೇ ನಿರ್ದೇಶಕ ಸೂರ್ಯ ಸನ್ನಿ ಲಿಯೋನ್ ಡೇಟ್ ತೆಗೆದುಕೊಂಡಿದ್ದರು. ಇದು ನನ್ನ ಫೇವರಿಟ್ ಆ್ಯಕ್ಷನ್, ಕಾಮಿಡಿ ಜಾನರ್ ಚಿತ್ರವಾಗಿದ್ದು, ಸಸ್ಪೆನ್ಸ್, ಥ್ರಿಲ್ಲರ್ ಕೂಡ ಒಳಗೊಂಡಿದೆ' ಎನ್ನುತ್ತಾರೆ.

ಈ ಸಂದರ್ಭದಲ್ಲಿ 'ಕಾಂತಾರ' ಬಗ್ಗೆ ಮಾತನಾಡಿದ ಅವರು, 'ಈ ಚಿತ್ರವನ್ನು ಕನ್ನಡಕ್ಕೆ ಡಬ್ ಮಾಡಿಲ್ಲ. ತೆಲುಗು ಭಾಷೆಯಲ್ಲೇ ಬಿಡುಗಡೆ ಮಾಡುತ್ತಿದ್ದೇವೆ. ಈಗ ದಕ್ಷಿಣ ಭಾರತದ ಸಿನಿಮಾಗಳಿಗೆ ಒಳ್ಳೆಯ ಸಮಯ ಎನ್ನಬಹುದು. ಸಿನಿಮಾ ಚೆನ್ನಾಗಿದ್ದರೆ ಯಾವ ಭಾಷೆಯಲ್ಲಿ ಜನ ನೋಡುತ್ತಾರೆ. ಅದಕ್ಕೆ 'ಕಾಂತಾರ' ಸಿನಿಮಾ ಒಳ್ಳೆ ಉದಾಹರಣೆ. ಮುಂಬೈನಲ್ಲಿ 'ಕಾಂತರ' ಕನ್ನಡದಲ್ಲೇ ಒಂದು ಶೋ ಇತ್ತು. ಅದನ್ನು ನೋಡಿ ಜನ ಒಪ್ಪಿದರು. ಮುಂದಿನ ದಿನಗಳಲ್ಲಿ ಕನ್ನಡದಲ್ಲಿ ಸಿನಿಮಾ ಮಾಡುವ ಆಸೆ ಇದೆ' ಎಂದರು ನಾಯಕ ವಿಷ್ಣು ಮಂಚು.

ಕರ್ನಾಟಕದಲ್ಲಿ ತೆಲುಗು ಭಾಷೆಯಲ್ಲಿಯೇ 50 ರಿಂದ 60 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಿದ್ದೇವೆ ಎಂದು ವಿತರಕ ವೆಂಕಟೇಶ್ ಹೇಳಿದರು. ನಿರ್ಮಾಪಕ ಎನ್.ಎಸ್ ರಾಜಕುಮಾರ್, ಪರಿಜಾತ ಮಧುಸೂದನ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net