

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಎತ್ತರ : 6.4 ಅಡಿ, ತೂಕ : 120 ಕೆಜಿ, ಎತ್ತರ, ತೂಕ ನೋಡಿ ಇದು ಯಾರೋ ಡಬ್ಲೂೃಡಬ್ಲೂೃಇ ಕುಸ್ತಿಪಟು ಅಂತ ಅಂದುಕೊಂಡರೂ ಆಶ್ಚರ್ಯವಿಲ್ಲ. ಆದರೆ, ಇದು ಕನ್ನಡದ ಖಡಕ್ ವಿಲನ್ ಮೋಹನ್ ಕುರಿತ ಮಾಹಿತಿ. ವಿಶೇಷ ಅಂದರೆ, ಬಹುತೇಕರು 58, 60 ವಯಸ್ಸಿಗೆ ನಿವೃತ್ತಿ ಹೊಂದುತ್ತಾರೆ. ಆದರೆ, ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದಾಗ ಮೋಹನ್ ಅವರ ವಯಸ್ಸು 58, ಈಗ 61!
30 ವರ್ಷಗಳ ಹಿಂದೆಯೇ ನಟಿಸಿದ್ದರು
ಮಂಡ್ಯ ಮೂಲದ ಮೋಹನ್, ಮೂರು ದಶಕಗಳ ಹಿಂದೆಯೇ ಎರಡು ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದರಂತೆ. ‘ಮೋಹನ್ ಲಾಲ್ ಜತೆ ‘ವಿಯೆಟ್ನಾಂ ಕಾಲೊನಿ’ ಸೇರಿ ಎರಡು ಚಿತ್ರಗಳಲ್ಲಿ ನಟಿಸಿದ್ದೆ. ಆದರೆ, ಮನೆಯಲ್ಲಿ ಮದುವೆ, ಕೆಲಸ ಅಂತ ಒತ್ತಡವಿದ್ದ ಕಾರಣ ಚಿತ್ರರಂಗದಲ್ಲಿ ಮುಂದುವರಿಯಲು ಸಾಧ್ಯವಾಗಲಿಲ್ಲ. ಸೇಲ್ಸ್‌ಮನ್ ಆಗಿ ಕೆಲಸ ಪ್ರಾರಂಭಿಸಿ ಜನರಲ್ ಮ್ಯಾನೇಜರ್ ಆಗಿ ನಿವೃತ್ತಿ ಪಡೆದೆ. ಪಾನಿಪುರಿ ಕಿಟ್ಟಿಯವರ ಜಿಮ್‌ನಲ್ಲಿ ತರುಣ್ ಸುಧೀರ್ ನನ್ನನ್ನು ನೋಡಿ, ‘ರಾಬರ್ಟ್’ ಚಿತ್ರದಲ್ಲಿ ಮೊದಲ ಅವಕಾಶ ನೀಡಿದರು. ನಂತರ ಚಿತ್ರರಂಗದಲ್ಲಿಯೇ ಮುಂದುವರಿಯಬೇಕು ಅಂತ ಛಲ ಹುಟ್ಟಿತು’ ಎಂದು ಹೇಳಿಕೊಳ್ಳುತ್ತಾರೆ ಮೋಹನ್.
58ನೇ ವಯಸ್ಸಿನಲ್ಲಿ ಡೆಬ್ಯೂ
‘ರಾಬರ್ಟ್’ ಚಿತ್ರದಲ್ಲಿ ನಟಿಸಿದಾಗ ಮೋಹನ್‌ಗೆ 58 ವರ್ಷ. ಈಗ ‘ಕಾಟೇರ’ ಚಿತ್ರದಲ್ಲಿ ನಟಿಸಿರುವ ಅವರ ವಯಸ್ಸು 61. ‘ಕೆಎ್ಸಿ ಕಂಪನಿ ಪ್ರಾರಂಭಿಸಿದಾಗ ಅದರ ಮಾಲೀಕರಿಗೆ 64 ವರ್ಷ. ನಟ ದತ್ತಣ್ಣ ಅವರೂ 50 ದಾಟಿದ ಮೇಲೆ ಸಿನಿಮಾಗಳಿಗೆ ಬಂದವರು. ನನ್ನದು ಇದು ಕೊನೆಯ ಓವರ್ ಆಟ. ಐಪಿಎಲ್‌ನಲ್ಲಿ ಕೊನೆಯ ಓವರ್ ಎಷ್ಟು ಮುಖ್ಯವೋ, ನನಗೆ ಈಗ ಸಿನಿಮಾ ಅಷ್ಟೇ ಮುಖ್ಯ’ ಎನ್ನುತ್ತಾರೆ ಮೋಹನ್. ಅಂದಹಾಗೆ 2.5 ಲಕ್ಷ ರೂ. ಸಂಬಳ ಪಡೆಯುತ್ತಿದ್ದ ಅವರು, ಕರೊನಾದಂತಹ ಕಷ್ಟದ ಸಮಯದಲ್ಲಿ ಆ ಕೆಲಸ ಬಿಟ್ಟು, ಸಿನಿಮಾ ಕನಸಿನ ಬೆನ್ನು ಹತ್ತಿದರಂತೆ. ‘ಸಾಯುವ ಕ್ಷಣ ಅಯ್ಯೋ ಒಮ್ಮೆ ಸಿನಿಮಾ ಟ್ರೈ ಮಾಡಬೇಕಿತ್ತು ಅಂತ ಕೊರಗುವುದಕ್ಕಿಂತ. ರಿಸ್ಕ್ ತೆಗೆದುಕೊಳ್ಳಬೇಕು ಅಂತನ್ನಿಸಿತು. ಹೀಗಾಗಿ ಮನೆಯಲ್ಲಿ ಮಾತನಾಡಿ ಒಪ್ಪಿಸಿದೆ. ಸಂಬಂಧಿಕರು, ಸ್ನೇಹಿತರು ನನ್ನ ಮಾತು ಕೇಳಿ ನಕ್ಕಿದರು. ಆದರೆ, ಮುಂದು ನನಗೂ ನಗುವ ಸಮಯ ಬರುತ್ತೆಂದು ನಾನು ಮೌನವಹಿಸಿದೆ’ ಎಂಬುದು ಮೋಹನ್ ಅಭಿಪ್ರಾಯ.
ಎಂಟು ಭಾಷೆಗಳಲ್ಲಿ ಮಾತು
ಮಾರ್ಕೆಟಿಂಗ್ ಕ್ಷೇತ್ರದಲ್ಲಿ 36 ವರ್ಷಗಳ ಕಾಲ ಕೆಲಸ ಮಾಡಿರುವ ಕಾರಣ ಮೋಹನ್ ಅವರಿಗೆ ಕನ್ನಡ, ಹಿಂದಿ, ಇಂಗ್ಲೀಷ್, ತೆಲುಗು, ತಮಿಳು, ಮಲಯಾಳಂ ಸೇರಿ ಎಂಟು ಭಾಷೆಗಳಲ್ಲಿ ಪರಿಣಿತಿ ಹೊಂದಿದ್ದಾರೆ. ಈಗಾಗಲೇ ಕನ್ನಡದಲ್ಲಿ ‘ಕಾಟೇರ’ ಸೇರಿ ‘ಅಥರ್ವ’, ನಿಖಿಲ್ ಕುಮಾರಸ್ವಾಮಿ ಹೊಸ ಚಿತ್ರದ ಜತೆ ತಮಿಳು ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಹಾಗೇ ಏಳೆಂಟು ಚಿತ್ರಗಳ ಮಾತುಕತೆ ನಡೆಯುತ್ತಿದೆ.
ಇದನ್ನೂ ಓದಿ : ಶೂಟಿಂಗ್ ವೇಳೆ ಖ್ಯಾತ ನಟನ ಕಾಲಿಗೆ ಗಾಯ
ದರ್ಶನ್ ಸರ್ ಗಾಡ್‌ಫಾದರ್
ನಟ ದರ್ಶನ್ ಜತೆ ‘ರಾಬರ್ಟ್’ ಮತ್ತು ‘ಕಾಟೇರ’ ಚಿತ್ರಗಳಲ್ಲಿ ನಟಿಸಿರುವ ಮೋಹನ್, ‘ಅವರೇ ನನ್ನ ಗಾಡ್‌ಫಾದರ್. ನನ್ನ ಸಿನಿಮಾಗಳಲ್ಲಿ ನಿಮಗೆ ಒಂದು ಅವಕಾಶ ಇದ್ದೇ ಇರುತ್ತದೆ ಎಂದು ಹೇಳಿದ್ದಾರೆ. ಅವರಂತಹ ಒಬ್ಬ ಸ್ಟಾರ್ ನಟ ನನಗೆ ಸಪೋರ್ಟ್ ಮಾಡುತ್ತಿರುವುದು ಖುಷಿ. ‘ಕಾಟೇರ’ ಚಿತ್ರದಲ್ಲಿ ವಿನೋದ್ ಆಳ್ವ, ಜಗಪತಿ ಬಾಬು ಅವರಂತಹ ದಿಗ್ಗಜರ ಜತೆ ವಿಲನ್ ಆಗಿ ನಟಿಸಿದ್ದೇನೆ. ಚಿತ್ರರಂಗಕ್ಕೆ ಆನೆ, ಕುರಿ ಅಲ್ಲ ನಾನು ಡೈನೊಸಾರ್ ಬಂದಿದ್ದೇನೆ ಎಂಬುದು ಗೊತ್ತಾಗಬೇಕಿದೆ’ ಎಂದು ಹೇಳಿಕೊಳ್ಳುತ್ತಾರೆ ಮೋಹನ್.