

ಬೆಂಗಳೂರು: ಕನ್ನಡದ ಮೊದಲ ಬಯೋಪಿಕ್ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ 'ವಿಜಯಾನಂದ' ಚಿತ್ರದ ಬಿಡುಗಡೆಗೆ ದಿನಗಣನೆ ಪ್ರಾರಂಭವಾಗಿದೆ. ಡಿ.9ರಂದು ಚಿತ್ರವು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದ್ದು, ಚಿತ್ರದ ಬಗ್ಗೆ ಕುತೂಹಲ ಮತ್ತು ನಿರೀಕ್ಷೆಗಳು ಹೆಚ್ಚಾಗಿವೆ.
ಡಾ. ವಿಜಯ ಸಂಕೇಶ್ವರ ಅವರ ಜೀವನವನ್ನು ಆಧರಿಸಿ ತಯಾರಾಗಿರುವ 'ವಿಜಯಾನಂದ', ಪ್ಯಾನ್ ಇಂಡಿಯಾ ಚಿತ್ರವಾಗಿದ್ದು ಐದು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿರುವುದು ವಿಶೇಷ. ಭಾರತದಲ್ಲೇ ಒಂದು ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 'ವಿಜಯಾನಂದ' ಬಿಡುಗಡೆಯಾಗುತ್ತಿದ್ದು, ಭಾರತವಲ್ಲದೆ ಅಮೆರಿಕಾ, ಇಂಗ್ಲೆಂಡ್, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಮುಂತಾದ ಕಡೆಗಳಲ್ಲೂ ನೂರಾರು ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ.
ಈ ಪೈಕಿ ಇಂಗ್ಲೆಂಡ್ನಲ್ಲಿ 'ವಿಜಯಾದನಂದ' ಚಿತ್ರದ ಕನ್ನಡ ಮತ್ತು ತೆಲುಗು ಚಿತ್ರದ ಅವತರಣಿಕೆಗಳು ಬಿಡುಗಡೆಯಾದರೆ, ಅಮೆರಿಕಾ ಮತ್ತು ಆಸ್ಟ್ರೇಲಿಯಾದಲ್ಲಿ ಕನ್ನಡ ಅವತರಣಿಕೆ ಬಿಡುಗಡೆಯಾಗುತ್ತಿದೆ.
'ವಿಜಯಾನಂದ' ಚಿತ್ರವು 1976ರಲ್ಲಿ ಒಂದು ಟ್ರಕ್ನಿಂದ ಪ್ರಾರಂಭವಾಗಿ ಇಂದು ಭಾರತದ ಅತಿ ದೊಡ್ಡ ಲಾಜಿಸ್ಟಿಕ್ಸ್ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ವಿಆರ್ಲ್ ಸಂಸ್ಥೆಯ ಮಾಲೀಕರಾಗಿರುವ ವಿಜಯ ಸಂಕೇಶ್ವರ ಅವರ ಅದ್ಭುತ ಮತ್ತು ರೋಮಾಂಚನಕಾರಿ ಕಥೆಯಾಗಿದೆ. ಈ ಕಥೆಯು ವಿಜಯ ಸಂಕೇಶ್ವರ ಮತ್ತು ಅವರ ಮಗ ಡಾ. ಆನಂದ ಸಂಕೇಶ್ವರ ಅವರ ಯಶಸ್ಸಿನ ಪ್ರಯಾಣವನ್ನು ಒಳಗೊಂಡಿದೆ.
ವಿಆರ್ಎಲ್ ಪ್ರೊಡಕ್ಷನ್ಸ್ನಡಿ ಡಾ. ಆನಂದ ಸಂಕೇಶ್ವರ ನಿರ್ಮಿಸುತ್ತಿರುವ 'ವಿಜಯಾನಂದ' ಚಿತ್ರದಲ್ಲಿ ನಿಹಾಲ್ ರಜಪೂತ್, ಡಾ. ವಿಜಯ ಸಂಕೇಶ್ವರ ಅವರ ಪಾತ್ರದಲ್ಲಿ ನಟಿಸಿದ್ದಾರೆ. ಅನಂತ್ ನಾಗ್, ರವಿಚಂದ್ರನ್, ವಿನಯಾ ಪ್ರಸಾದ್, ಸಿರಿ ಪ್ರಹ್ಲಾದ್, ಪ್ರಕಾಶ್ ಬೆಳವಾಡಿ, ಭರತ್ ಬೋಪಣ್ಣ ಮುಂತಾದವರು ನಟಿಸಿದ್ದಾರೆ. ರಿಷಿಕಾ ಶರ್ಮ ಚಿತ್ರಕಥೆ ರಚಿಸುವುದರ ಜತೆಗೆ ನಿರ್ದೇಶನ ಮಾಡಿದ್ದಾರೆ. ದಕ್ಷಿಣ ಭಾರತದ ಜನಪ್ರಿಯ ಸಂಗೀರ ನಿರ್ದೇಶಕರಾದ ಗೋಪಿ ಸುಂದರ್ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.