14 ವರ್ಷಗಳ ನಂತರ ಜತೆಯಾಗಿ ನಟಿಸುತ್ತಿದ್ದಾರೆ ವಿಜಯ್​-ತ್ರಿಷಾ!

Vijay and Trisha
Published on

ಚೆನ್ನೈ: ಕಾಲಿವುಡ್​ನ ಅತ್ಯಂತ ಜನಪ್ರಿಯ ಜೋಡಿಗಳಲ್ಲಿ ವಿಜಯ್​ ಮತ್ತು ತ್ರಿಷಾ ಜೋಡಿ ಸಹ ಒಂದು. ಒಂದು ಕಾಲದಲ್ಲಿ ಒಂದಿಷ್ಟು ಚಿತ್ರಗಳಲ್ಲಿ ನಟಿಸಿದ್ದ ಈ ಜೋಡಿ, ಆ ನಂತರ ಕಾರಣಾಂತರಗಳಿಂದ ನಟಿಸಿರಲಿಲ್ಲ. ಈಗ ಬರೋಬ್ಬರಿ 14 ವರ್ಷಗಳ ನಂತರ ವಿಜಯ್​ ಮತ್ತು ತ್ರಿಷಾ ಈಗ ಲೋಕೇಶ್​ ಕನಕರಾಜ್​ ನಿರ್ದೇಶನದ ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರಂತೆ.

ಕಳೆದ ವರ್ಷ ಬಿಡುಗಡೆಯಾದ 'ಮಾಸ್ಟರ್​' ಚಿತ್ರದ ನಂತರ ವಿಜಯ್​ ಅಭಿನಯದಲ್ಲಿ ಲೋಕೇಶ್​ ಇನ್ನೊಂದು ಚಿತ್ರವನ್ನು ನಿರ್ದೇಶಿಸುತ್ತಾರೆ ಎಂಬ ಸುದ್ದಿ ಇತ್ತು. ಆದರೆ, ವಿಜಯ್​ ಅದಕ್ಕೂ ಮೊದಲು 'ವಾರಿಸು' ಎಂಬ ಚಿತ್ರದಲ್ಲಿ ನಟಿಸಿದರು. ಈಗ ಆ ಚಿತ್ರ ಮುಗಿದು ಬಿಡುಗಡೆಗೆ ಸಜ್ಜಾಗುತ್ತಿದೆ. ಈ ಮಧ್ಯೆ, ಲೋಕೇಶ್​ ನಿರ್ದೇಶನದಲ್ಲಿ ವಿಜಯ್​ ಅಭಿನಯದ ಚಿತ್ರವು ಸದ್ದಿಲ್ಲದೆ ಸೋಮವಾರ ಚೆನ್ನೈನಲ್ಲಿ ಸೆಟ್ಟೇರಿದೆ ಎಂದು ಹೇಳಲಾಗುತ್ತಿದೆ. ಈ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಇದು ವಿಜಯ್​ ಅಭಿನಯದ 67ನೇ ಚಿತ್ರವಾಗಿರುವುದರಿಂದ, ಚಿತ್ರಕ್ಕೆ 'ದಳಪತಿ 67' ಎಂಬ ಹೆಸರಿಡಲಾಗಿದೆ.

ಈ ಚಿತ್ರಕ್ಕೆ ವಿಜಯ್​ಗೆ ನಾಯಕಿಯಾಗಿ ತ್ರಿಷಾ ಬರಬಹುದು ಎಂಬ ಸುದ್ದಿ ಇತ್ತು. ಆ ಸುದ್ದಿ ನಿಜವಾಗಿದ್ದು, ಚಿತ್ರದ ಮುಹೂರ್ತದಲ್ಲಿ ತ್ರಿಷಾ ಭಾಗವಹಿಸಿದ್ದರು ಎಂದು ಹೇಳಲಾಗುತ್ತಿದೆ. ಈ ಜೋಡಿ ಕೊನೆಯದಾಗಿ ನಟಿಸಿದ ಚಿತ್ರ 'ಕುರುವಿ' 2008ರಲ್ಲಿ ಬಿಡುಗಡೆಯಾಗಿತ್ತು. ಅದಕ್ಕೂ ಮುನ್ನ ಅವರಿಬ್ಬರೂ 'ತಿರುಪಾಚ್ಚಿ', 'ಗಿಲ್ಲಿ' ಮತ್ತು 'ಆದಿ' ಚಿತ್ರಗಳಲ್ಲಿ ಜತೆಯಾಗಿ ನಟಿಸಿದ್ದರು. ಈಗ 14 ವರ್ಷಗಳ ನಂತರ ಇಬ್ಬರೂ ಜತೆಯಾಗಿ ಬಣ್ಣ ಹಚ್ಚಿದ್ದಾರೆ.

'ದಳಪತಿ 67' ಚಿತ್ರವನ್ನು ಸೆವೆನ್​ ಸ್ಕ್ರೀನ್​ ಸ್ಟುಡಿಯೋಸ್​ ನಿರ್ಮಿಸುತ್ತಿದ್ದು, ಮುಂದಿನ ವರ್ಷದ ಕೊನೆಗೆ ಈ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net