

ಬೆಂಗಳೂರು: ದಿನ ಕಳೆದಂತೆ ನಟ ಧನ್ವೀರ್ ಹಾಗೂ ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ನಡುವಿನ ಜಟಾಪಟಿ ತೀವ್ರವಾಗುತ್ತಿದ್ದು, ಇಂದು ದರ್ಶನ್ ಪತ್ನಿ ವಿಜಯಲಕ್ಷ್ಮೀ, ನಟ ಧನ್ವೀರ್ ವಿರುದ್ಧ ಮಾನಹಾನಿ ಪ್ರಕರಣವನ್ನು ದಾಖಲಿಸಿದ್ದಾರೆಂದು ತಿಳಿದುಬಂದಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಧನ್ವೀರ್ ಅವರದ್ದು ಎನ್ನಲಾದ ಕೆಲ ಆಡಿಯೋಗಳು ವೈರಲ್ ಆಗಿದ್ದು, ಅದರಲ್ಲಿ ವಿಜಯಲಕ್ಷ್ಮೀ ಅವರ ಬಗ್ಗೆ ಕೆಟ್ಟದಾಗಿ ಮಾತನಾಡಲಾಗಿತ್ತು. ಈ ಹಿನ್ನಲೆ ವಿಜಯಲಕ್ಷ್ಮೀ ಕಾನೂನಿನ ಮೊರೆ ಹೋಗಿದ್ದು, ಬೆಂಗಳೂರಿನ ಸೆಷೆನ್ಸ್ ನ್ಯಾಯಾಲಯದಲ್ಲಿ ನಟ ಧನ್ವೀರ್ ವಿರುದ್ಧ ಕ್ರಿಮಿನಲ್ ಮಾನಹಾನಿ ಅರ್ಜಿ ಸಲ್ಲಿಸಿದ್ದಾರೆ. ಇದರ ವಿಚಾರಣೆ ನವೆಂಬರ್ 30 ಕ್ಕೆ ನಡೆಯಲಿದೆ ಎನ್ನಲಾಗಿದೆ.
ವಿಜಯಲಕ್ಷ್ಮೀ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ, ನಟ ಧನ್ವೀರ್ ತಮ್ಮ ಕುರಿತು ಆಕ್ಷೇಪಾರ್ಹ ಮಾತುಗಳನ್ನು ಆಡಿದ್ದು, ಇದನ್ನು ಸೋಷಿಯಲ್ ಮೀಡಿಯಾ ಸೇರಿದಂತೆ ಎಲ್ಲಡೆ ಹಂಚಿಕೆ ಮಾಡಲಾಗಿದೆ. ಇದರಿಂದ ನನ್ನ ಘನತೆ ಹಾಗೂ ಗೌರವಕ್ಕೆ ಧಕ್ಕೆಯುಂಟಾಗಿದ್ದು, ಈ ತಪ್ಪಿಗೆ ಸರಿಯಾದ ಶಿಕ್ಷೆ ದೊರೆಯಬೇಕೆಂದು ನ್ಯಾಯಾಲಯಕ್ಕೆ ಕೋರಲಾಗಿದೆ.
ಈ ಪ್ರಕರಣವನ್ನು ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 356(2) ರ ಅಡಿಯಲ್ಲಿ ಮಾನನಷ್ಟ ಆರೋಪ ಹೊರಿಸಲಾಗಿದ್ದು, ಆರೋಪಕ್ಕೆ ಸಂಬಂಧಿಸಿದಂತೆ ಎಲೆಕ್ಟ್ರಾನಿಕ್ ದಾಖಲೆಗಳಾದ , ಆಡಿಯೋ ಮತ್ತು ವೀಡಿಯೋ ರೆಕಾರ್ಡಿಂಗ್‌ಗಳನ್ನು ಸಾಕ್ಷ್ಯಗಳ ರೂಪದಲ್ಲಿ ನ್ಯಾಯಾಲಯಕ್ಕೆ ಸಲ್ಲಿಸುವುದಾಗಿ ವಿಜಯಲಕ್ಷ್ಮೀ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಜೊತೆಗೆ, ಈ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷಿಗಳ ವಿಚಾರಣೆಗೆ ಅವಕಾಶ ನೀಡಬೇಕು ಹಾಗೂ ಬಿಎನ್‌ಎಸ್ ಸೆಕ್ಷನ್ 222(1) ರ ಅಡಿಯಲ್ಲಿ ಈ ಖಾಸಗಿ ದೂರನ್ನು ಪರಿಗಣಿಸಿ, ಆರೋಪಿ ಧನ್ವೀರ್ ವಿರುದ್ಧ ಸೆಕ್ಷನ್ 227 ರ ಅಡಿಯಲ್ಲಿ ಸಮನ್ಸ್ ಜಾರಿಗೊಳಿಸಬೇಕೆಂದು ನ್ಯಾಯಾಲಯಕ್ಕೆ ಕೋರಲಾಗಿದೆ ಎಂದು ತಿಳಿದುಬಂದಿದೆ.
ಕೆಲ ದಿನಗಳಿಂದ ನಟ ಧನ್ವೀರ್ ಹಾಗೂ ವಿಜಯಲಕ್ಷ್ಮೀ ನಡುವೆ ಸಂಘರ್ಷ ನಡೆಯುತ್ತಲೇ ಇದೆ. ಮೈಸೂರಿಗೆ ಯುವ ದಸರಾಗೆ ಹೋಗಿದ್ದ ಸಂದರ್ಭದಲ್ಲಿ ಧನ್ವೀರ್, ನಟ ದರ್ಶನ್ ಅವರಿಗೆ ಏನು ಆಗುವುದಿಲ್ಲ, ಯಾವ ಕುನ್ನಿಯೂ ಏನು ಮಾಡಲು ಆಗಲ್ಲ, ಅವರು ಜೈಲಿನಿಂದ ಹೊರಬರುತ್ತಾರೆಂದು ಹೇಳಿದ್ದರು. ಈ ಹೇಳಿಕೆ ವಿವಾದದ ರೂಪವನ್ನೂ ಪಡೆದುಕೊಂಡಿತು.
ನಟ ಧನ್ವೀರ್ ಅವರ ಈ ಮಾತಿಗೆ ತಿರುಗೇಟು ಎನ್ನುವಂತೆ ವಿಜಯಲಕ್ಷ್ಮೀ, ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ, "ಕೆಲವರು ದರ್ಶನ್ ಅವರ ಹೆಸರನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಾರೆ" ಎಂದು ಬರೆದುಕೊಂಡಿದ್ದರು.
ವಿಜಯಲಕ್ಷ್ಮೀ ಈ ಸ್ಟೋರಿಗೆ ಕೌಂಟರ್ ಆಗಿ ಧನ್ವೀರ್, ಬೇರೆಯವರ ಮೇಲೆ ಗೂಬೆ ಕೂರಿಸಿ, ಕೊನೆಗೆ ತಾವೇ ಸಂತ್ರಸ್ತರೆಂಬಂತೆ ವರ್ತಿಸುವುದು ಕೆಲವರ ಜಾಯಮಾನ. ಹೆದರಿಸುವುದು ನಿಮ್ಮ ಚಾಳಿಯಾದರೆ, ಅದನ್ನು ಎದುರಿಸಿ ನಿಲ್ಲುವುದು ನನ್ನ ಗುಣವಾಗಿದೆ ಎಂದು ವಿಜಯಲಕ್ಷ್ಮೀಗೆ ಧನ್ವೀರ್ ಪರೋಕ್ಷ ತಿರುಗೇಟನ್ನು ನೀಡಿದ್ದರು.
ಈ ಘಟನೆ ನಡೆದ ಕೆಲವೇ ದಿನಗಳಲ್ಲಿ ವಿಜಯಲಕ್ಷ್ಮೀ ಅವರ ಮ್ಯಾನೇಜರ್ ನಾಗರಾಜ್ ಎನ್ನುವವರು, ನಟ ಧನ್ವೀರ್ ತಮಗೆ ಕರೆ ಮಾಡಿ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆಂದು ಆರ್ಆರ್ ನಗರ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದರು. ನಂತರ ಇದಕ್ಕೆ ಕೌಂಟರ್ ಎಂಬಂತೆ ನಟ ಧನ್ವೀರ್, ತಾನು ಮನೆಯಲ್ಲಿ ಇಲ್ಲದಿದ್ದಾಗ ಕೆಲ ಗೂಂಡಾಗಳು ಮನಗೆ ಬಂದು ದಾಂದಲೆ ಮಾಡಿದ್ದರು. ಹೀಗಾಗಿ ನಾನು ಅವರ ಮೇಲೆ ರೇಗಿದ್ದೆನೆಂದು ಹೇಳಿಕೊಂಡಿದ್ದರು.
ಈ ಘಟನೆ ಬಳಿಕ, ಸೋಷಿಯಲ್ ಮೀಡಿಯಾನಲ್ಲಿ ನಟ ಧನ್ವೀರ್, ನಟ ದರ್ಶನ್ ಅವರಿಗೆ ಸಂಬಂಧಿಸಿದಂತೆ ಹಲವು ವ್ಯಕ್ತಿಗಳ ಹಾಗೂ ವಿಚಾರಗಳ ಬಗ್ಗೆ ಮಾತನಾಡಿದ್ದಾರೆಂದು ಹೇಳಲಾಗುವ ಆಡಿಯೋಗಳು ವೈರಲ್ ಆಗಿದ್ದವು. ಈಗ ದರ್ಶನ್ ಪತ್ನಿ ವಿಜಯಲಕ್ಷ್ಮೀ ನ್ಯಾಯಾಲಯದ ಮೊರೆ ಹೋಗಿದ್ದು, ಈಗ ಈ ಸಂಘರ್ಷ ಎಲ್ಲಿಗೆ ಬಂದು ತಲುಪಲಿದೆ ಎಂದು ಕಾಲವೇ ಉತ್ತರಿಸಬೇಕಿದೆ.