

ಕರೊನಾದಿಂದ ಚಿತ್ರೀಕರಣ ಚಟುವಟಿಕೆಗಳೆಲ್ಲಾ ಬಂದ್ ಆಗಿರುವುದರಿಂದ, ನಿರ್ಮಾಪಕರು ಕಂಗಾಲಾಗಿದ್ದಾರೆ. ಈ ನಿಟ್ಟಿನಲ್ಲಿ, ದೊಡ್ಡ ಸ್ಟಾರ್ಗಳು ತಮ್ಮ ಸಂಭಾವನೆಯಲ್ಲಿ ಕಡಿತ ಮಾಡಬೇಕು ಎಂದು ಹಲವು ನಿರ್ಮಾಪಕರು, ಬೇಡಿಕೆ ಇಟ್ಟಿದ್ದಾರೆ. ಈಗಾಗಲೇ ನಟಿ ರಾಕುಲ್ ಪ್ರೀತ್ ಸಿಂಗ್ ತಮ್ಮ ಸಂಭಾವನೆಯಲ್ಲಿ 50 ಪರ್ಸೆಂಟ್ ಡಿಸ್ಕೌಂಟ್ ಘೋಷಿಸಿದ್ದಾರೆ.
ಈಗ ತಮಿಳಿನಲ್ಲೂ ಇಂಥದ್ದೊಂದು ಪರ್ವ ಶುರುವಾಗಿದ್ದು, ವಿಜಯ್ ಸಹ ತಮ್ಮ ಸಂಭಾವನೆಯನ್ನು ಕಡಿತಗೊಳಿಸಿದ್ದಾರೆ ಎಂಬ ಸುದ್ದಿಯೊಂದು ಕಾಲಿವುಡ್ನಲ್ಲಿ ಕೇಳಿ ಬರುತ್ತಿದೆ.
ಇದನ್ನೂ ಓದಿ: ಬಾಲಿವುಡ್ ನಟ ಫರ್ಹಾನ್ ಅಖ್ತರ್ಗೂ ಕರೊನಾ ಆತಂಕ
ಸದ್ಯ 'ಮಾಸ್ಟರ್' ಚಿತ್ರದ ಬಿಡುಗಡೆಗೆ ಕಾದಿರುವ ವಿಜಯ್, ಜನಪ್ರಿಯ ನಿರ್ದೇಶಕ ಎ.ಆರ್. ಮುರುಗದಾಸ್ ಅವರ ಜತೆಗೆ ಹೊಸದೊಂದು ಸಿನಿಮಾ ಮಾಡುವುದಕ್ಕೆ ಒಪ್ಪಿಕೊಂಡಿದ್ದಾರೆ. ಇದು ವಿಜಯ್ ಮತ್ತು ಮುರುಗದಾಸ್ ಜತೆಯಾಟದ ನಾಲ್ಕನೇ ಸಿನಿಮಾ. ಇದಕ್ಕೂ ಮುನ್ನ ಈ ಜೋಡಿ, 'ತುಪಾಕಿ', 'ಕತ್ತಿ' ಮತ್ತು 'ಸರ್ಕಾರ್' ಚಿತ್ರಗಳಲ್ಲಿ ಜತೆಯಾಗಿತ್ತು. ಈ ಎಲ್ಲಾ ಚಿತ್ರಗಳು ಹಿಟ್ ಆದ ಕಾರಣ, ಈ ಹೊಸ ಚಿತ್ರದಲ್ಲಿ ವಿಜಯ್ ಮತ್ತು ಮುರುಗದಾಸ್ ಮತ್ತೊಮ್ಮೆ ಜತೆಯಾಗುತ್ತಿದ್ದಾರೆ ಎನ್ನುವುದು ವಿಶೇಷ.
ಸನ್ ಪಿಕ್ಚರ್ಸ್ನವರು ನಿರ್ಮಿಸುತ್ತಿರುವ ಈ ಚಿತ್ರ ಇಷ್ಟರಲ್ಲಾಗಲೇ ಪ್ರಾರಂಭವಾಗಿ, ಮುಕ್ತಾಯದ ಹಂತಕ್ಕೆ ಬರಬೇಕಿತ್ತು. ಆದರೆ, ಲಾಕ್ಡೌನ್ನಿಂದಾಗಿ ಎಲ್ಲವೂ ತಲೆ ಕೆಳಗಾಗಿದೆ.
ಈಗ ಬಂದಿರುವ ಹೊಸ ಸುದ್ದಿಯ ಪ್ರಕಾರ, ವಿಜಯ್ ತಮ್ಮ ಸಂಭಾವನೆಯಲ್ಲಿ 20 ಪರ್ಸೆಂಟ್ ಡಿಸ್ಕೌಂಟ್ ಕೊಟ್ಟಿದ್ದಾರಂತೆ. ಹಾಗಾದರೆ, ಅವರು ಈ ಚಿತ್ರಕ್ಕೆ ಪಡೆಯುವ ಮೊತ್ತ ಎಷ್ಟು ಎಂಬ ಸಹಜ ಕುತೂಹಲ ಎಲ್ಲರಲ್ಲೂ ಇರುತ್ತದೆ. ಇದಕ್ಕೂ ಮುನ್ನ ವಿಜಯ್, ತಮ್ಮ ಹೊಸ ಚಿತ್ರಕ್ಕೆ 100 ಕೋಟಿ ಸಂಭಾವನೆ ತೆಗೆದುಕೊಳ್ಳುತ್ತಾರೆ ಎಂದು ಹೇಳಲಾಗಿತ್ತು. ಅದರಲ್ಲಿ 20 ಪರ್ಸೆಂಟ್ ಕಟ್ ಮಾಡಿದರೆ, 80 ಕೋಟಿ ಸಂಭಾವನೆಯನ್ನು ಈ ಚಿತ್ರಕ್ಕೆ ತೆಗೆದುಕೊಳ್ಳಲಿದ್ದಾರೆ.
ಬರೀ ವಿಜಯ್ ಅಷ್ಟೇ ಅಲ್ಲ, ನಿರ್ದೇಶಕ ಮುರುಗದಾಸ್ ಸಹ ತಮ್ಮ ಸಂಭಾವನೆಯಲ್ಲಿ ಡಿಸ್ಕೌಂಟ್ ಕೊಟ್ಟಿದ್ದಾರಂತೆ. ಆದರೆ, ಎಷ್ಟು ಪರ್ಸೆಂಟ್ ಎಂಬ ವಿಷಯ ಇನ್ನೂ ಬಹಿರಂಗಗೊಂಡಿಲ್ಲ.