'ಮರೀಚಿ’ಯಾದ ವಿಜಯ್​ ರಾಘವೇಂದ್ರ; ಇನ್ನೊಂದು ಸಸ್ಪೆನ್ಸ್​ ಥ್ರಿಲ್ಲರ್​ನಲ್ಲಿ ಚಿನ್ನಾರಿ ಮುತ್ತ

Vijay Raghavendra
Published on

ಬೆಂಗಳೂರು: 'ರಾಘು', 'ಕದ್ದ ಚಿತ್ರ', 'ಕೇಸ್​ ಆಫ್​ ಕೊಂಡಾನ', 'ಜೋಗ್​ 101' ಸೇರಿದಂತೆ ಐದಾರು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ ವಿಜಯ್​ ರಾಘವೇಂದ್ರ. ಹೀಗಿರುವಾಗಲೇ, ಅವರು ಸದ್ದಿಲ್ಲದೆ ಇನ್ನೊಂದು ಹೊಸ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಅದೇ 'ಮರೀಚಿ'. ಈ ಚಿತ್ರವನ್ನು ಸಿದ್ಧ್ರುವ್ ಎಂಬುವವರು ನಿರ್ದೇಶನ ಮಾಡುತ್ತಿದ್ದಾರೆ.

‘ಮರೀಚಿ’ ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾ. ಹಲವು ಕಿರುಚಿತ್ರಗಳನ್ನು ನಿರ್ದೇಶಿಸಿ, ಒಂದಿಷ್ಟು ಸಿನಿಮಾಗಳಿಗೆ ಸಹಾಯಕ ನಿರ್ದೇಶಕನಾಗಿ ದುಡಿದ ಅನುಭವ ಇರುವ ಸಿದ್ಧ್ರುವ್ ನಿರ್ದೇಶನದ ಮೊದಲ ಸಿನಿಮಾವಿದು. ನಿರ್ದೇಶನದ ಜತೆಗೆ ಕಥೆ, ಚಿತ್ರಕಥೆಯನ್ನೂ ಅವರೇ ರಚಿಸಿದ್ದಾರೆ. ಈ ಕಥೆ ಕೇಳಿ ವಿಜಯ್​ ರಾಘವೇಂದ್ರ ಖುಷಿಯಾಗಿದ್ದು, ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದಾರೆ.

'ಮರೀಚಿ' ಚಿತ್ರದಲ್ಲಿ ವಿಜಯ್​ ರಾಘವೇಂದ್ರ ಜೋಡಿಯಾಗಿ ನಟಿ ಸೋನು ಗೌಡ ನಟಿಸುತ್ತಿದ್ದು. ಅಭಿ ದಾಸ್, ಸ್ಪಂದನ ಸೋಮಣ್ಣ, ಆರ್ಯನ್, ಶೃತಿ ಪಾಟೀಲ್, ಗೋಪಾಲಕೃಷ್ಣ ದೇಶಪಾಂಡೆ, ಅರುಣ ಬಾಲರಾಜ್ ಮುಂತಾದವರಿದ್ದಾರೆ. ಮನೋಹರ್ ಜೋಶಿ ಛಾಯಾಗ್ರಹಣ, ಜ್ಯೂಡ ಸ್ಯಾಂಡಿ ಸಂಗೀತ ಈ ಚಿತ್ರಕ್ಕಿದೆ.

ನವೆಂಬರ್​ನಲ್ಲಿ 'ಮರೀಚಿ' ಚಿತ್ರೀಕರಣ ಆರಂಭಗೊಳ್ಳಲಿದ್ದು, ಬೆಂಗಳೂರು, ರಾಮನಗರ, ಚಿಕ್ಕಮಗಳೂರು, ಮಂಗಳೂರು ಮುಂತಾದ ಕಡೆಗೆ ಚಿತ್ರೀಕರಣ ನಡೆಯಲಿದೆ. ಅದಕ್ಕೂ ಮುನ್ನ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಲು ಚಿತ್ರತಂಡ ತಯಾರಿ ನಡೆಸಿದೆ.

ಎಸ್ ಎಸ್ ರೆಕ್ ಬ್ಯಾನರ್ ನಡಿ ನಿರ್ದೇಶಕ ಸಿದ್ಧ್ರುವ್ ಹಾಗೂ ಸಂತೋಷ್ ಮಾಯಪ್ಪ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net