ತಪ್ಪಾಗುತ್ತಿದೆ ಅಂತ ಗೊತ್ತಿದ್ದರೂ ವಿಜಯ್​ ಯಾಕೆ ತಪ್ಪು ಮಾಡಿದ್ರು?

Vijay Raghavendra - Final
Published on

ಬೆಂಗಳೂರು: ವಿಜಯ್​ ರಾಘವೇಂದ್ರ ಅಭಿನಯದ 'ಸಾವಿತ್ರಿ' ಚಿತ್ರ ಇತ್ತೀಚೆಗಷ್ಟೇ ಪ್ರಾರಂಭವಾಗಿದೆ. ಈ ಚಿತ್ರದಲ್ಲಿ ವಿಜಯ್​ ರಾಘವೇಂದ್ರ ಮೊದಲ ಬಾರಿಗೆ ಸಾಫ್ಟ್​ವೇರ್​ ಕಂಪೆನಿಯೊಂದರ ಸಿಇಓ ಪಾತ್ರದಲ್ಲಿ ನಟಿಸಿದ್ದಾರೆ.

ಈ ಚಿತ್ರದ ಪತ್ರಿಕಾಗೋಷ್ಠಿಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ವಿಜಯ್​ ರಾಘವೇಂದ್ರ, ಈ ಹಿಂದೆ ತಪ್ಪು ಆಯ್ಕೆ, ಗೊಂದಲದಿಂದ ಹಲವು ಚಿತ್ರಗಳು ಸೋತವು ಎಂದು ಒಪ್ಪಿಕೊಳ್ಳುತ್ತಾರೆ. ಸಂಕೋಚ ಮತ್ತು ಕೆಲವು ವಿಷಯಗಳನ್ನು ನೇರವಾಗಿ ಕೇಳಲಿಕ್ಕಾಗದೆ ಸೋಲನ್ನು ಅನುಭವಿಸಬೇಕಾಯಿತು ಎಂದು ಹೇಳಿಕೊಂಡಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ‘ಕೆಲವು ಕಡೆ ತಪ್ಪಾಗುತ್ತಿದೆ ಎಂದು ಗೊತ್ತಾಗುತಿತ್ತು. ‘ಪ್ರೀತಿಸ್ಲೇ ಬೇಕು’ ಎನ್ನುವ ಚಿತ್ರ ಅಜಯ್ ದೇವಗನ್ ಅವರ ಚಿತ್ರದ 'ಪ್ಯಾರ್​ ಥೋ ಹೋನಾ ಹೀ ಥಾ' ಚಿತ್ರದ ರೀಮೇಕ್ ಆಗಿತ್ತು. ಆ ಚಿತ್ರ ಬೇಡ, ಪಾತ್ರ ನನಗೆ ಸೂಟ್ ಆಗಲ್ಲ ಎಂದೆ. ಯಾರೂ ಕೇಳಲಿಲ್ಲ. ಅನಿವಾಯರ್ವಾಗಿ ಚಿತ್ರ ಮಾಡಬೇಕಾಯಿತು. ಅದೇ ರೀತಿ, ನನ್ನ ಮತ್ತು ಮುರಳಿ ಅಭಿನಯದ ಚಿತ್ರಕ್ಕೆ ‘ಮಿಂಚಿನ ಓಟ’ ಎಂಬ ಹೆಸರಿಟ್ಟಾಗ ಬೇಡ ಎಂದೆ. ಹೆಸರು ಕೇಳಿ ಅನಂತ್​ ನಾಗ್​ ಅಂಕಲ್​ ಬೈದರು. ಆ ಟೈಟಲ್​ ಯಾಕೆ, ಬೇರೆ ಯಾವುದೂ ಇಲ್ಲವಾ ಎಂದರು. ಏಕೆಂದರೆ, ಅದು ಶಂಕರ್ ನಾಗ್ ಅವರು ಮಾಡಿದ ಚಿತ್ರ. ಜನ ಅದೇ ತರಹ ನಿರೀಕ್ಷೆ ಮಾಡುತ್ತಾರೆ ಮತ್ತು ಆ ಎತ್ತರಕ್ಕೆ ಏರುವುದು ಕಷ್ಟ ಅಂತ ಗೊತ್ತಿತ್ತು. ಆದರೆ, ಅದೇ ಹೆಸರು ಇರಲಿ ಎಂದು ಎಲ್ಲರೂ ಹೇಳಿದ ಮೇಲೆ ಬೇರೆ ದಾರಿ ಇರಲಿಲ್ಲ' ಎನ್ನುತ್ತಾರೆ ವಿಜಯ್​ ರಾಘವೇಂದ್ರ.

ಇನ್ನು ಗಣೇಶ ಸೀರೀಸ್‌ನ ‘ಗಣೇಶ ಮತ್ತೆ ಬಂದ’ ಚಿತ್ರದಲ್ಲಿ ನಟಿಸುವುದಕ್ಕೆ ಇಷ್ಟ ಇರಲಿಲ್ಲ ಅವರು, 'ಅನಂತ್ ನಾಗ್‌ರಂತಹ ಹಿರಿಯರು ಮಾಡಿದ ಸೀರೀಸ್. ಅವರ ಜತೆಗೆ ಹೋಲಿಸುವುದು ಸಹಜ. ಹಾಗಾಗಿ ಬೇಡ, ಅದು ತುಂಬಾ ರಿಸ್ಕಿ ಎಂದೆ. ಆದರೆ, ಅಷ್ಟರಲ್ಲಿ ಗಣೇಶ ಸೀರೀಸ್​ನಲ್ಲಿ ಮಾಡಿದ ಎಲ್ಲಾ ಚಿತ್ರಗಳು ಹಿಟ್​​ ಆಗಿದ್ದರಿಂದ, ಇದು ಸಹ ಗೆಲ್ಲಬಹುದು ಎಂಬ ನಿರೀಕ್ಷೆಯಲ್ಲಿ ಯಾರೂ ನನ್ನ ಮಾತು ಕೇಳಲಿಲ್ಲ. ಎಲ್ಲರೂ ಅಷ್ಟೊಂದು ಹೇಳಿದ ಮೇಲೆ, ನನಗಿಂಥ ಅವರಿಗೆ ಚೆನ್ನಾಗಿ ಗೊತ್ತಿರಬಹುದು ಎಂದು ಸುಮ್ಮನಾಗಿಬಿಟ್ಟೆ. ಅವೆಲ್ಲಾ ಒಂದಲ್ಲ ಒಂದು ರೀತಿ ಮೈನಸ್ ಆದವು’ ಎನ್ನುತ್ತಾರೆ ವಿಜಯ್ ರಾಘವೇಂದ್ರ.

ಈಗ ಅದೆಲ್ಲದರಿಂದ ಆಚೆ ಬಂದಿರುವ ವಿಜಯ್ ಈಗ ಬಹಳ ಹುಷಾರಾಗಿ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿರುವುದಾಗಿಯೂ ಇದೇ ಸಂದರ್ಭದಲ್ಲಿ ಹೇಳಿದ್ದಾರೆ. ‘ಎಲ್ಲಿ ತಪ್ಪು ಮಾಡುತ್ತಿದ್ದೀನಿ ಅಂತ ಅರ್ಥ ಮಾಡಿಕೊಳ್ಳಬೇಕಿತ್ತು. ಆದರೆ, ನನಗೆ ಕಮಾಂಡ್ ಮಾಡೋಕೆ ಆಗುತ್ತಿರಲಿಲ್ಲ. ಹಾಗಾಗಿ ಕೆಲವು ಇಷ್ಟವಿಲ್ಲದಿದ್ದರೂ ಒಪ್ಪಿಕೊಳ್ಳುತ್ತಿದ್ದೆ. ಈಗ ಹಾಗಿಲ್ಲ. ಎಷ್ಟೇ ಸಂಕೋಚವಿದ್ದರೂ, ನಯವಾಗಿಯೇ ಬೇಕು, ಬೇಡ ಎಂದು ಹೇಳುತ್ತೇನೆ' ಎನ್ನುತ್ತಾರೆ ವಿಜಯ್ ರಾಘವೇಂದ್ರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net